ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನದಲ್ಲಿ ಪ್ರಾರಂಭವಾಗಿ 30 ವರ್ಷಗಳಾಗಿವೆ. ಈ ಕೇಂದ್ರದಲ್ಲಿ ಏಳು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ 380 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಕೇಂದ್ರ ಮೂರು ದಶಕಗಳಲ್ಲಿ ಶೈಕ್ಷಣಿಕ ಪ್ರಗತಿಯಲ್ಲಿ ಸುದ್ದಿಯಾಗುವುದಕ್ಕಿಂತ ಅಲ್ಲೀಗ ಟ್ರಕ್ ಟರ್ಮಿನಲ್ ನಿರ್ಮಾಣದ ವಿವಾದದಿಂದಾಗಿ ಜನರ ಗಮನ ಸೆಳೆದಿದೆ.
ಹಾಸನ ನಗರದಿಂದ ಮೂರ್‍ನಾಲ್ಕು ಕಿ.ಮೀ. ದೂರದಲ್ಲಿ ಬೆಂಗಳೂರು ಕಡೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಪಕ್ಕದಲ್ಲಿ ಸ್ನಾತಕೋತ್ತರ ಕೇಂದ್ರ ನಿರ್ಮಾಣವಾಗಿದೆ. ಒಟ್ಟು 70 ಎಕ್ರೆ ವಿಸ್ತೀರ್ಣದ ಹೇಮಗಂಗೋತ್ರಿ ಕ್ಯಾಂಪಸ್ ನಡುವೆಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೆದ್ದಾರಿಯ ಒಂದು ಬದಿಯಲ್ಲಿ ಸ್ನಾತಕೋತ್ತರ ಕೇಂದ್ರದ ಪ್ರಧಾನ ಕಟ್ಟಡಗಳು, ಗ್ರಂಥಾಲಯ ಕಟ್ಟಡ, ಆಟದ ಮೈದಾನ ವಿದ್ದರೆ ಹೆದ್ದಾರಿಯ ಮತ್ತೂಂದು ಬದಿಯಲ್ಲಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿ ನಿಲಯಗಳ ಕಟ್ಟಡಗಳು, ಆರೋಗ್ಯ ಕೇಂದ್ರ, ಸಿಬಂದಿಯ ವಸತಿಗೃಹದ ಸಂಕೀರ್ಣವಿದೆ. ಈಗ ಟ್ರಕ್ ಟರ್ಮಿನಲ್ ನಿರ್ಮಾಣದ 3.40 ಎಕ್ರೆ ಗೋಮಾಳದ ಪ್ರದೇಶದ ದಕ್ಷಿಣಕ್ಕೆ ಎರಡು ವಿದ್ಯಾರ್ಥಿ ನಿಲಯಗಳು, ಪೂರ್ವಕ್ಕೆ ಆರೋಗ್ಯ ಕೇಂದ್ರ ಮತ್ತು ಸಿಬಂದಿ ವಸತಿಗೃಹದ ಸಂಕೀರ್ಣವಿದೆ. ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ, ಪಶ್ಚಿಮಕ್ಕೆ ಖಾಸಗಿ ಕಟ್ಟಡಗಳು ತಲೆ ಎತ್ತಿವೆ.
ಉನ್ನತ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ 3.40 ಎಕ್ರೆ ಗೋಮಾಳವನ್ನು ಹೇಮಗಂಗೋತ್ರಿಗೆ ವಹಿಸಬೇಕೆಂದು 6 ವರ್ಷಗಳಿಂದಲೂ ಬೇಡಿಕೆ ಇದೆ. ಆ ಜಾಗದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಬೇಕೆಂಬ ಕೆಂಚಟ್ಟಹಳ್ಳಿ ಗ್ರಾಮಸ್ಥರ ಬೇಡಿಕೆಯೂ ಇತ್ತು. ಈ ಬೇಡಿಕೆಗಳನ್ನು ಬದಿಗೊತ್ತಿ ಜಿಲ್ಲಾಡಳಿತವು ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಮಂಜೂರು ಮಾಡಿರುವುದರಿಂದ ಈಗ ವಿವಾದ ಸೃಷ್ಟಿಯಾಗಿದೆ.
ಈಗ ವಿದ್ಯಾರ್ಥಿಗಳು ಹಾಗೂ ಕೆಂಚಟ್ಟ ಹಳ್ಳಿ ಗ್ರಾಮಸ್ಥರ ಪರವಾಗಿ ಜೆಡಿಎಸ್ ಹೋರಾಟಕ್ಕಿಳಿದಿದೆ. ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಹೋರಾಟಕ್ಕಿಳಿದಿದ್ದರಿಂದ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಕೆರಳಿದ್ದಾರೆ. ಈಗ ಟ್ರಕ್ ಟರ್ಮಿನಲ್ ನಿರ್ಮಾಣದ ಸಾಧಕ, ಬಾಧಕದ ಚರ್ಚೆಗಿಂತ ಎಚ್.ಡಿ.ರೇವಣ್ಣ – ಪ್ರೀತಂಗೌಡ ನಡುವಿನ ಪ್ರತಿಷ್ಠೆಯಾಗಿ ಟ್ರಕ್ ಟರ್ಮಿನಲ್ ನಿರ್ಮಾಣ ವಿವಾದ ಪರಿವರ್ತನೆಯಾಗಿದೆ.
ಟ್ರಕ್ ಟರ್ಮಿನಲ್ ನಿರ್ಮಾಣವಾಗಲೇ ಬೇಕೆಂದು ಶಾಸಕ ಪ್ರೀತಂಗೌಡ ಅವರ ಒತ್ತಡಕ್ಕೆ ಮಣಿದಿರುವ ಜಿಲ್ಲಾಡಳಿತವು ಈಗ ವಿದ್ಯಾ ರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರತಿರೋಧ ಎದುರಿಸುವಂತಾಗಿದೆ. ಪ್ರತಿ ರೋಧ ಎದುರಾದ ತಕ್ಷಣ ಜಿಲ್ಲಾಡಳಿತವು ಪರ್ಯಾಯ ಜಾಗ ಹುಡುಕಿದ್ದರೆ ವಿವಾದವೇ ಎದುರಾಗುತ್ತಿರಲಿಲ್ಲ. ಆದರೆ ಆಡಳಿತಾರೂಢ ಪಕ್ಷದ ಶಾಸಕರ ಹಿತಾಸಕ್ತಿ ಹಾಗೂ ರಾಜಕೀಯ ಒತ್ತಡದ ಅಡಕತ್ತರಿಯಲ್ಲಿ ಜಿಲ್ಲಾಡಳಿತ ಸಿಕ್ಕಿಕೊಂಡಿದೆ. ಜನಪರವಾದ ಹೋರಾಟವೊಂದಕ್ಕೆ ಜೆಡಿಎಸ್‌ಗೆ ಶಾಸಕ ಪ್ರೀತಂಗೌಡ ಅವರೇ ಅವಕಾಶ ನೀಡಿದಂ ತಾಗಿದೆ, ವಿವಾದ ಈಗ ಕಂದಾಯ ಸಚಿವರ ಅಂಗಳದಲ್ಲಿದ್ದು ಅವರ ನಿರ್ಧಾರಕ್ಕೆ ಹಾಸನದ ಜನರು ಎದುರು ನೋಡುತ್ತಿದ್ದಾರೆ. ಸಚಿವ ಆರ್. ಅಶೋಕ್ ಅವರ ಸೂಕ್ತ ನಿರ್ಧಾರ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.