Advertisement

ತೆಲಂಗಾಣದ ಶಾಸಕರಿಗೆ ಬಂಪರ್‌: ತಲಾ 1 ಕೋಟಿ ರೂ. ವೆಚ್ಚದ ವಿಲ್ಲಾ

03:45 AM Mar 02, 2017 | |

ಹೈದರಾಬಾದ್‌: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅವರು ತಮ್ಮ ಶಾಸಕರಿಗೆ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿದ್ದಾರೆ. ಬಹುಶಃ ದೇಶದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಎಲ್ಲಾ ಶಾಸಕರಿಗೆ ತಲಾ 1 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಗೃಹ ಕಚೇರಿ ಹಾಗೂ ನಿವಾಸ ನಿರ್ಮಿಸಿಕೊಡಲು ಅವರು ಮುಂದಾಗಿದ್ದಾರೆ.

Advertisement

ನಗರ ಪ್ರದೇಶಗಳು, ಪಾಲಿಕೆ ಕಚೇರಿಗಳು, ಜಿಲ್ಲಾಧಿಕಾರಿ, ತಾಲೂಕು ಕಚೇರಿ, ಜಿ.ಪಂ., ತಾ.ಪಂ.ಗಳಲ್ಲಿ ಶಾಸಕರ ಅಧಿಕೃತ ಕಚೇರಿಗಳಿದ್ದಾಗ್ಯೂ, ಇಲ್ಲಿ ಸೌಲಭ್ಯಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆಸಿಆರ್‌ ಇಂತಹದೊಂದು ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ.

ರಾಜ್ಯದ 117 ವಿಧಾನಸಭಾ ಕ್ಷೇತ್ರಗಳಲ್ಲೂ 500 ಚದರ ಅಡಿ ವಿಸ್ತೀರ್ಣದಲ್ಲಿ ಶಾಸಕರ ಗೃಹ ಕಚೇರಿ ನಿರ್ಮಾಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸೂಕ್ತವಾದ ಭೂಮಿ ಗುರುತಿಸಿ 6 ತಿಂಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ರಸ್ತೆ ಮತ್ತು ಕಟ್ಟಡಗಳ ಇಲಾಖೆಗೆ ಸೂಚಿಸಲಾಗಿದೆ.

ಇಂದು ಮೊದಲ ಕಚೇರಿ ಉದ್ಘಾಟನೆ: ಇದೇ ಯೋಜನೆಯಡಿ ವಾರಂಗಲ್‌ನ ಪರ್ಕಾಲ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸಲಾದ ಶಾಸಕರ ಮೊದಲ ಗೃಹ ಕಚೇರಿಯನ್ನು ಗುರುವಾರ ಕೆಸಿಆರ್‌ ಉದ್ಘಾಟಿಸಲಿದ್ದಾರೆ. ಇತ್ತೀಚೆಗಷ್ಟೇ ಕೆಸಿಆರ್‌ ಹೈದರಾಬಾದ್‌ನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 9 ಎಕರೆ ಎಸ್ಟೇಟ್‌ನ್ನು ಶಾಸಕರಿಗೆ ನೀಡಿ ಸುದ್ದಿಯಾಗಿದ್ದರು.

ಉದ್ದೇಶವೇನು?: ಜನಸಾಮಾನ್ಯರಿಗೆ ಜನಪ್ರತಿನಿಧಿಗಳು ಸದಾ ಲಭ್ಯವಿರುವಂತೆ ಮಾಡುವುದು, ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವುದು, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಹಾಗೂ ಇನ್ನಿತರ ಸಭೆ ಆಯೋಜಿಸಲು ಅನುಕೂಲವಾಗುವ ಉದ್ದೇಶದಿಂದ ವೈಭವೋಪೇತ ಬಂಗ್ಲೆಗಳನ್ನು ನಿರ್ಮಿಸಲಾಗುತ್ತಿದೆ.

Advertisement

ಸೌಲಭ್ಯಗಳೇನು?
3 ಬೆಡ್‌ ರೂಂವುಳ್ಳ 2 ಅಂತಸ್ತಿನ ಕಟ್ಟಡ ಇದಾಗಿದ್ದು ಡ್ನೂಪ್ಲೆಕ್ಸ್‌ ಮಾದರಿಯಲ್ಲಿ ಇರಲಿವೆ. ಬ್ರಾಡ್‌ ಬ್ಯಾಂಡ್‌ ಇಂಟರ್‌ನೆಟ್‌, ಡಿಜಿಟಲ್‌ ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ, ಶಾಸಕರು ತಡರಾತ್ರಿವರೆಗೂ ಕಾರ್ಯನಿರ್ವಹಿಸುವಂತಹ ವಾತಾವರಣ, ಅಲ್ಲಿಯೇ ಉಳಿಯಲು ಬೇಕಾದ ಸೌಲಭ್ಯಗಳು, ಗುಂಡು ನಿರೋಧಕ (ಬುಲೆಟ್‌ಪ್ರೂಫ್) ಗೋಡೆಗಳು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next