Advertisement

ಚಾನೆಲ್‌ಗಳ ಜೀವಾಳ ಟಿಆರ್‌ಪಿ

10:30 PM Oct 12, 2020 | mahesh |

ಕೆಲವು ಸುದ್ದಿ ವಾಹಿನಿಗಳು ಜಾಹೀರಾತು ಆದಾಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಟಿಆರ್‌ಪಿಯನ್ನು ತಿರುಚಿರುವ ಆರೋಪ ಎದುರಿಸುತ್ತಿವೆ. ಒಟ್ಟು ಮೂರು ಸುದ್ದಿ ವಾಹಿನಿಗಳು ಈ ನಕಲಿ ಟಿಆರ್‌ಪಿ ಜಾಲದಲ್ಲಿ ಭಾಗಿಯಾಗಿರುವ ಕುರಿತು ಮುಂಬೈ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಟಿಆರ್‌ಪಿ ಅಂದರೇನು, ಚಾನೆಲ್‌ಗಳ ಉಳಿವಿಗೆ ಅದರ ಪ್ರಾಮುಖ್ಯ ಎಷ್ಟಿದೆ? ಇಲ್ಲಿದೆ ಮಾಹಿತಿ…

Advertisement

ಟಿಆರ್‌ಪಿ ಅಂದರೇನು?
ಟಿಆರ್‌ಪಿ ಅಂದರೆ “ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌. ಸರಳವಾಗಿ ಹೇಳಬೇಕೆಂದರೆ, ಜನರು ಮನೆಯಲ್ಲಿ ಯಾವ ಚಾನೆಲ್‌ ನೋಡುತ್ತಿದ್ದಾರೆ, ಯಾವ ನಿರ್ದಿಷ್ಟ ಕಾರ್ಯಕ್ರಮಗಳನ್ನು ಎಷ್ಟು ಹೊತ್ತು ನೋಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಿ ರೇಟಿಂಗ್‌ ನೀಡುವ ಪ್ರಕ್ರಿಯೆ.

ಪ್ರತಿ ಗುರುವಾರ ಬರುತ್ತದೆ ಟಿಆರ್‌ಪಿ
ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌(ಬಾರ್ಕ್‌) ಟಿಆರ್‌ಪಿಯನ್ನು ಬಿಡುಗಡೆ ಮಾಡುತ್ತದೆ. ಪ್ರಸಾರಕರು (ಐಬಿಎಫ್), ಜಾಹೀರಾತುದಾರರು (ಐಎಸ್‌ಎ) ಮತ್ತು ಜಾಹೀರಾತು- ಮಾಧ್ಯಮ ಏಜೆನ್ಸಿಗಳನ್ನು (ಎಎಎಐ) ಪ್ರತಿನಿಧಿಸುವ ಸಂಸ್ಥೆಗಳು ಬಾರ್ಕ್‌ ಸಂಸ್ಥೆಯ ಸ್ಥಾಪಕ ಸದಸ್ಯರಾಗಿವೆ. ಬಾರ್ಕ್‌ ಸಂಸ್ಥೆಯು ಪ್ರತಿ ಗುರುವಾರ ಟಿಆರ್‌ಪಿ ಬಿಡುಗಡೆ ಮಾಡುತ್ತದೆ. ಚಾನೆಲ್‌ಗಳಲ್ಲಿ ಪ್ರಸಾರವಾದ ಕಾರ್ಯಕ್ರಮಗಳ ವಿವರ ಮುಂದಿನ ವಾರ ಬರುತ್ತದೆ.

ರೇಟಿಂಗ್‌ ಪ್ರಕ್ರಿಯೆ
1) ಬಾರ್ಕ್‌ ಸಂಸ್ಥೆಯು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೇಬಲ್‌ ಇರುವ ಕೆಲ ಮನೆಗಳಲ್ಲಿ ಬಾರ್‌-ಓ-ಮೀಟರ್‌ ಅಥವಾ ಪೀಪಲ್ಸ್‌ ಮೀಟರ್‌ ಎನ್ನುವ ಸಾಧನವನ್ನು ಅಳವಡಿಸಿರುತ್ತದೆ. ಭಾರತೀಯ ದೂರದರ್ಶನ ಪ್ರೇಕ್ಷಕರ ಮಾಪನ(ಇನ್‌ಟ್ಯಾಂ) ಈ ಸಾಧನಗಳಲ್ಲಿ ದಾಖಲಾದ ದತ್ತಾಂಶಗಳನ್ನು ಕ್ರೋಢೀಕರಿಸಿ ರೇಟಿಂಗ್‌ ಅನ್ನು ನಿರ್ಧರಿಸುತ್ತದೆ.
2) ಎರಡನೆಯ ಮಾರ್ಗವನ್ನು ಪಿಕ್ಚರ್‌ ಮ್ಯಾಚಿಂಗ್‌ ಎನ್ನಲಾಗುತ್ತದೆ. ಜನರು ದೂರದರ್ಶನದಲ್ಲಿ ನೋಡುತ್ತಿರುವ ಕಾರ್ಯಕ್ರಮದ ಚಿತ್ರಗಳನ್ನು ಪೀಪಲ್ಸ್‌ ಮೀಟರ್‌ ಸೆರೆಹಿಡಿಯುತ್ತದೆ. ಈ ಚಿತ್ರಗಳನ್ನು ಆಧರಿಸಿಯೂ ಟಿಆರ್‌ಪಿಯನ್ನು ಲೆಕ್ಕಹಾಕಲಾಗುತ್ತದೆ.

ಏಕೈಕ ರೇಟಿಂಗ್‌ ಸಂಸ್ಥೆ
ದೇಶದ ಪ್ರಸಾರ ಕ್ಷೇತ್ರದ ಏಕೈಕ ರೇಟಿಂಗ್‌ ಸಂಸ್ಥೆಯಾಗಿರುವ ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕಾನ್ಸಿಲ್‌ ವಿಶ್ವದ ಅತಿದೊಡ್ಡ ದೂರದರ್ಶನ ಪ್ರೇಕ್ಷಕರ ಮಾಪನ ಸೇವೆಯೆಂಬ ಗರಿಮೆಯನ್ನೂ ಪಡೆದಿದೆ. ಸದ್ಯಕ್ಕೆ ದೇಶಾದ್ಯಂತ 45 ಸಾವಿರ ಪೀಪಲ್ಸ್‌ ಮೀಟರ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳ ಉತ್ಪಾದನೆಯೂ ದೇಶದಲ್ಲೇ ಆಗುತ್ತಿದೆ.  ಆದರೆ, ಈ ಸಂಖ್ಯೆ ಕಡಿಮೆಯಾಯಿತು ಎನ್ನುವ ದೂರುಗಳು ಕೇಳಿಬರುತ್ತಿರುವುದರಿಂದ ಪೀಪಲ್ಸ್‌ ಮೀಟರ್‌ಗಳ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಾರ್ಕ್‌ಗೆ ಆದೇಶ ನೀಡಿದೆ.

Advertisement

ಟಿಆರ್‌ಪಿಯನ್ನು ತಿರುಚಬಹುದೇ?
ಪ್ರಸಾರಕರು, ಯಾವ ಮನೆಗಳಲ್ಲಿ ಪೀಪಲ್ಸ್‌ ಮೀಟರ್‌ ಅಳವಡಿಸಲಾಗಿದೆ ಎಂದು ಪತ್ತೆ ಹಚ್ಚಿ, ತಮ್ಮ ಚಾನೆಲ್‌ ನೋಡುವಂತೆ ಆ ಮನೆಯವರಿಗೆ ಲಂಚ ಕೊಡುವ ಅಥವಾ ಕೇಬಲ್‌ ಆಪರೇಟರ್‌ಗಳಿಗೆ ಹಣ ಕೊಟ್ಟು “”ಜನರು ಟಿವಿ ಆನ್‌ ಮಾಡಿದ ತಕ್ಷಣ ತಮ್ಮ ಚಾನೆಲ್‌ ಅವರಿಗೆ ಮೊದಲು ಕಾಣಿಸುವಂತೆ ಮಾಡಿ” ಎಂದು ಹೇಳುವ ಸಾಧ್ಯತೆ ಇರುತ್ತದೆ. ಈಗ ವಿವಾದಕ್ಕೀಡಾಗಿರುವ ಪ್ರಕರಣದಲ್ಲಿ ಈ ರೀತಿಯ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಇಡೀ ದೇಶದಲ್ಲಿ ಕೇವಲ 45 ಸಾವಿರ ಮನೆಗಳಲ್ಲಷ್ಟೇ ಪೀಪಲ್ಸ್‌ ಮೀಟರ್‌ ಇರುವುದರಿಂದ, ಆ ಮನೆಯವರು ಯಾವ ಕಾರ್ಯಕ್ರಮ ನೋಡುತ್ತಾರೋ ಅದರ ಟಿಆರ್‌ಪಿಯೇ ಹೆಚ್ಚಾಗುತ್ತದೆ.

ಟಿಆರ್‌ಪಿ ಹೆಚ್ಚುಕಮ್ಮಿ ಆದರೆ ಏನಾಗುತ್ತದೆ?
ಟೆಲಿವಿಷನ್‌ ಚಾನೆಲ್‌ಗಳು ಜಾಹೀರಾತುಗಳ ಮೂಲಕ ಆದಾಯಗಳಿಸುತ್ತವೆ. ಜಾಹೀರಾತು ಕಂಪನಿಗಳು ಯಾವ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್‌ಪಿ ಬಂದಿದೆ ಎನ್ನುವುದನ್ನು ಆಧರಿಸಿ ಕಡಿಮೆ ಅಥವಾ ಹೆಚ್ಚು ಹಣ ಪಾವತಿ ಮಾಡುತ್ತವೆ. ಯಾವುದಾದರೂ ಕಾರ್ಯಕ್ರಮದ ಟಿಆರ್‌ಪಿ ಕುಸಿಯಿತು ಎಂದರೆ, ಅದಕ್ಕೆ ಜಾಹೀರಾತುಗಳ ಪ್ರಮಾಣ ತಗ್ಗಬಹುದು ಅಥವಾ ನಿಂತೇ ಹೋಗಬಹುದು. ಇದರ ಆಧಾರದಲ್ಲಿ ಆ ಕಾರ್ಯಕ್ರಮವನ್ನು ಉಳಿಸಿಕೊಳ್ಳಬೇಕೋ ಅಥವಾ ತೆಗೆದುಹಾಕಬೇಕೋ ಎಂದು ಚಾನೆಲ್‌ಗಳು ನಿರ್ಧರಿಸುತ್ತವೆ. ಅತೀ ಹೆಚ್ಚು ಟಿಆರ್‌ಪಿ ಇರುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next