Advertisement

ಆಧ್ಯಾತ್ಮ ಜ್ಞಾನದಿಂದ ಮನದ ಕೊಳೆ ನಿವಾರಣೆ

10:45 AM Jan 15, 2019 | |

ಸಿಂಧನೂರು: ದಿನನಿತ್ಯದ ಕಾಯಕದ ಜೊತೆಗೆ ಸರ್ವ ಸಮುದಾಯದ ಜನರಿಗೆ ಆಧ್ಯಾತ್ಮ ಜ್ಞಾನದ ಅರಿವು ಮೂಡಿಸುತ್ತ ಅವರನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ನಿಜವಾದ ಜ್ಞಾನ ಯೋಗಿಗಳು ಎಂದು ಒಳಬಳ್ಳಾರಿಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

Advertisement

ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಒಂದು ತಿಂಗಳವರೆಗೆ ಹಮ್ಮಿಕೊಂಡ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆಧ್ಯಾತ್ಮ ಪ್ರವಚನ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಮನದ ಮೈಲಿಗೆ ಹೋಗಲಾಡಿಸಲು ಹಾಗೂ ಅಜ್ಞಾನಿ ಸುಜ್ಞಾನಿಯಾಗಲು ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನದಿಂದ ಮಾತ್ರ ಸಾಧ್ಯ. ಅವರು ದೇಶ ಅಲ್ಲದೆ ಹೊರದೇಶಗಳಲ್ಲೂ ಜ್ಞಾನದ ಅರಿವು ಮೂಡಿಸುವ ಮಹಾನ್‌ ಕಾರ್ಯ ಮಾಡುತ್ತಿದ್ದಾರೆ. ಅವರ ಹಾಗೆಯೇ ಪ್ರತಿಯೊಬ್ಬರು ಕಾಯಕದ ಜೊತೆ ಜೊತೆಗೆ ಆಧ್ಯಾತ್ಮ ಜ್ಞಾನ ಪಡೆದುಕೊಳ್ಳಬೇಕು ಎಂದರು.

ರೌಡಕುಂದಾದ ಶ್ರೀ ಮರಿಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಮ್ಮ ಆಲೋಚನೆ ಇರಬೇಕೇ ಹೊರತು ದೇಶದಲ್ಲಿ ಅಶಾಂತಿ ಮೂಡಿಸುವ ರೀತಿಯಲ್ಲಿ ನಮ್ಮ ವರ್ತನೆ ಇರಬಾರದು. ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಯುವಕರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ರಂಭಾಪುರಿ ಖಾಸಾ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ದೇಶದ ವಿಶ್ವಕೋಶವಾಗಿ ಹೊರಹೊಮ್ಮುತ್ತಿದ್ದಾರೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಪ್ರತಿಯೊಬ್ಬರು ಸಾಗಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಹಾಗೆಯೇ ಈ ಕಾರ್ಯಕ್ರಮವು ಪ್ರತಿದಿನ ಸಪ್ತಸಾಗರವಾಗಿ ಬೆಳೆಯಬೇಕು ಎಂದರು.

Advertisement

ಫಾ| ರೆವರೆಂಡ್‌ ಬೈಬಲ್‌ ಮಾತನಾಡಿ, ಮನುಷ್ಯನ ಮಾನಸಿಕ ಶಾಂತಿ ನೆಮ್ಮದಿಗೆ ಆಧ್ಯಾತ್ಮ ಪ್ರವಚನ ಅವಶ್ಯಕತೆಯಿದೆ. ಸರ್ವ ಜಾತಿಯವರಿಗೂ ಸಮಾನತೆ ತೋರಿಸುವ ಶಕ್ತಿ ಆಧ್ಯಾತ್ಮಕ್ಕಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ ಎಂದರು.

ಮುಸ್ಲಿಂ ಸಮುದಾಯದ ಹಿರಿಯ ಗುರು ಮೌಲಾನಿ ಅಬ್ದುಲ್‌ ರಷೀದ್‌ ಖಾದ್ರಿ ಮಾತನಾಡಿ, ಭಾವೈಕ್ಯತೆಯ ಭಾವನೆಗಳು ಬರಬೇಕಾದರೆ ಇಂತಹ ಶರಣರ ಮಾರ್ಗದರ್ಶನ ಅವಶ್ಯಕ. ಹನ್ನೆರಡನೇ ಶತಮಾನದಲ್ಲಿ ಮಹಾನ್‌ ಶರಣರು ಸಮಾನತೆಯ ಬಗ್ಗೆ ವಚನದಲ್ಲಿ ತಿಳಿಸಿದ ಹಾಗೆ ನಾವೆಲ್ಲರೂ ಬಾಳಬೇಕಾಗಿದೆ ಎಂದರು.

ಚಿದಾನಂದಯ್ಯ ಗುರುವಿನ ಮಾತನಾಡಿ, ಸತ್ಯವಂತರ ಸಂಗದಿಂದ ಎಂತಹ ವ್ಯಕ್ತಿಯಾದರೂ ದೊಡ್ಡ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಮಹಾನ್‌ ಜ್ಞಾನಿಗಳು ಆಗಬಹುದು. ಅದಕ್ಕೆ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉದಾಹರಣೆಯಾಗಿದ್ದಾರೆ. ಧರ್ಮವನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನಾವು ಸಂಸ್ಕೃತಿಯತ್ತ ಪ್ರತಿಯೊಬ್ಬರು ಸಾಗೋಣ ಎಂದರು.

ಪ್ರವಚನ ಸಮಿತಿ ಮುಖಂಡ ಗವಿಸಿದ್ದಪ್ಪ ಖಾನಿಹಾಳ ಪ್ರಾಸ್ತಾವಿಕ ಮಾತನಾಡಿದರು. ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು, ಯದ್ದಲದೊಡ್ಡಿ ಶ್ರೀ ಮಹಾಲಿಂಗ ಸ್ವಾಮೀಜಿ, ಕಲ್ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪಿನ ಡಾ| ಸಿದ್ದರಾಮೇಶ್ವರ ಶರಣರು, ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಸ್ವಾಮೀಜಿ, ಅಮರಗುಂಡ ಶಿವಾಚಾರ್ಯರು, ಆತ್ಮಾನಂದ ಶ್ರೀಗಳು, ನಂಜುಂಡಯ್ಯ ಗುರುವಿನ, ಗುಂಡಯ್ಯಸ್ವಾಮಿ ಮತ್ತಿತರರು ಇದ್ದರು.

ಕಾರ್ಯಕ್ರಮ ವೀಕ್ಷಿಸಿದ ಸಿದ್ದೇಶ್ವರ ಶ್ರೀ: ಆಧ್ಯಾತ್ಮ ಪ್ರವಚನದ ಕೇಂದ್ರಬಿಂದುವಾದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಉದ್ಘಾಟನೆ ಕಾರ್ಯಕ್ರಮದ ವೇದಿಕೆ ಏರದೇ ಜನಸಾಮಾನ್ಯರಂತೆ ಎರಡು ಗಂಟೆಗಳ ಕಾಲ ವೇದಿಕೆಯ ಬಲ ಭಾಗದಲ್ಲಿಯೇ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ, ಶಾಸಕ ಪ್ರತಾಪಗೌಡ ಪಾಟೀಲ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಎಪಿಎಂಸಿ ರಾಜ್ಯ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ, ಜಿಪಂ ಸದಸ್ಯರಾದ ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ಮತ್ತಿತರರು ಉಪಸ್ಥಿತರಿದ್ದರು. ನಗರದ ಸಾವಿರಾರು ಜನ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next