Advertisement

ವಚನಗಳಿಂದ ಅಸಮಾನತೆ ನಿವಾರಣೆ

10:03 AM Feb 03, 2019 | |

ಸಾಗರ: 12ನೇ ಶತಮಾನದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರು ಸಮಾಜದಲ್ಲಿನ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ವಚನಗಳ ಮೂಲಕ ಪ್ರಯತ್ನ ನಡೆಸಿದ್ದರು ಎಂದು ನಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಮಹಾದೇವಪ್ಪ ಜಿ. ರಂಗಣ್ಣನವರ್‌ ತಿಳಿಸಿದರು.

Advertisement

ನಗರದ ಸಾಮರ್ಥ್ಯ ಸೌಧದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿನ ಸಮಾಜ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಂತೆ ಅಸಮಾನತೆ, ಮೂಢನಂಬಿಕೆ, ಕಂದಾಚಾರ ಇನ್ನಿತರ ಅಭದ್ರತೆಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ವಚನಕಾರರು ಸಮಸಮಾಜ ನಿರ್ಮಾಣಕ್ಕಾಗಿ ತಮ್ಮದೇ ಕೊಡುಗೆ ನೀಡಿದರು. ಅವರಲ್ಲಿ ಚೌಡಯ್ಯ ಅವರು ಸಹ ಪ್ರಮುಖರು. ಚೌಡಯ್ಯನವರು ಕಾಯಕ ಶ್ರದ್ಧೆಯ ಜೊತೆಗೆ ಸಮಾಜದಲ್ಲಿ ಅನಿಷ್ಟಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ವಚನಗಳು ವಿಶೇಷವಾಗಿ ಗುರುತಿಸಲ್ಪಟ್ಟಿದ್ದಾಗಿದೆ. ವೀರಗಾಸೆ ಜನಪದ ಕಲೆಯಲ್ಲಿ ಚೌಡಯ್ಯ ಅವರು ವಚನ ಬಳಕೆಯಾಗಿರುವುದನ್ನು ನಾವು ನೋಡಬಹುದು. ಗಂಗಾಮತಸ್ಥ ಸಮಾಜವು ಸುಮಾರು 38 ಜಾತಿಗಳನ್ನು ಒಳಗೊಂಡಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ಗಂಗಾಮತಸ್ಥ ಸಮಾಜ ಪ್ರಸ್ತಾಪದಲ್ಲಿದ್ದರೂ, ಇಂದು ಸಮಾಜದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅನೇಕ ವರ್ಷಗಳಿಂದ ಗಂಗಾಮತಸ್ಥ ಸಮಾಜವನ್ನು ಎಸ್‌ಟಿಗೆ ಸೇರಿಸಿ ಎನ್ನುವ ಹಕ್ಕೊತ್ತಾಯ ಮಾಡಲಾಗುತ್ತಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಕಡು ಬಡತನದಲ್ಲಿರುವ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಪೊಲೀಸ್‌ ಅಧೀಕ್ಷಕ ಯತೀಶ್‌ ಎನ್‌. ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಅಸಮಾನತೆ ತೊಡೆದು ಹಾಕುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ, ಇಂದಿಗೂ ಅದು ಪರಿಪೂರ್ಣವಾಗಿ ಈಡೇರಿಲ್ಲ. ಜಾತ್ಯಾತೀತ ಸಮಾಜ ನಿರ್ಮಾಣವಾದಾಗ ಮಾತ್ರ ಅಭಿವೃದ್ಧಿಯ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ. ಸಮಾಜ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರು ಸಹ ಕೈ ಜೋಡಿಸಬೇಕಾಗುತ್ತದೆ. ಅಸಮಾನತೆ ಹೋಗಲಾಡಿಸಿದಾಗ ಮಾತ್ರ ಸಾಮರಸ್ಯ ನೆಲೆಗೊಳ್ಳುತ್ತದೆ ಎಂದರು.

Advertisement

ತಹಶೀಲ್ದಾರ್‌ ಮಹೇಂದ್ರ ಎನ್‌.ಎಚ್. ಅಧ್ಯಕ್ಷತೆ ವಹಿಸಿದ್ದರು. ಗಂಗಾಮತಸ್ಥ ಸಮಾಜದ ಅಧ್ಯಕ್ಷ ಎಸ್‌.ವಿ. ಕೃಷ್ಣಮೂರ್ತಿ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎನ್‌. ಮಂಜುನಾಥಸ್ವಾಮಿ, ಪೌರಾಯುಕ್ತ ಎಸ್‌. ರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌. ಅಶೋಕ್‌, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಕೆ. ತಿಮ್ಮಪ್ಪ, ಜಿಲ್ಲಾ ಪರಿಷತ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಲೇಶಪ್ಪ ಇದ್ದರು. ಸೇವಾಸಾಗರ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಚಂದ್ರಪ್ಪ ಸ್ವಾಗತಿಸಿದರು. ಸ್ಫೂರ್ತಿ ಸಾಗರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲಪ್ಪ ಮೆಣಸಿನಾಳ್‌ ವಂದಿಸಿದರು. ವಿ.ಟಿ. ಸ್ವಾಮಿ ನಿರೂಪಿಸಿದರು.

ಜನಪ್ರತಿನಿಧಿಗಳ ನಿರ್ಲಕ್ಷ್ಯ
ರಾಜ್ಯ ಸರ್ಕಾರದ ಸುತ್ತೋಲೆಯಡಿ ತಾಲೂಕು ಆಡಳಿತ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಗೆ ತಾಲೂಕಿನ ಯಾವ ಜನಪ್ರತಿನಿಧಿಯೂ ಹಾಜರಾಗದೆ ಆಡಳಿತ ತೀವ್ರ ಮುಜುಗರಪಡುವಂತೆ ಮಾಡಿದ್ದಾರೆ. ಮಾಧ್ಯಮದವರಿಗೂ ಕರೆ ಇರಲಿಲ್ಲ. ಆದರೆ ಜನಪ್ರತಿನಿಧಿಗಳು ಗೈರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಕೂಡ ಆಹ್ವಾನ ಇರುವುದರ ಕುರಿತು ಖಚಿತವಾಗಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಪ್ರೋಟೋಕಾಲ್‌ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಸೇರಿದಂತೆ ವಿಧಾನಸಭೆ, ವಿಧಾನ ಪರಿಷತ್‌, ಜಿಲ್ಲಾ, ತಾಪಂ, ನಗರಸಭೆ ಸೇರಿದಂತೆ 22ಕ್ಕೂ ಹೆಚ್ಚು ಜನ ಅತಿಥಿಗಳಿದ್ದಾರೆ. ಸಭೆಗೆ ಕ್ಷೇತ್ರದ ಶಾಸಕರು ಸೇರಿದಂತೆ ಜಿಲ್ಲಾ, ತಾಪಂ ಹಾಗೂ ನಗರಸಭೆಯ ಯಾವೊಬ್ಬ ಜನಪ್ರತಿನಿಧಿಯೂ ಹಾಜರಾಗದೆ ತಮ್ಮ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಮಾತನ್ನು ಜನಾಂಗ ಬಾಂಧವರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next