Advertisement

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

07:31 PM Apr 16, 2024 | Team Udayavani |

ಕೊಪ್ಪಳ: ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಸಂಸತ್ ಸಭಾಪತಿ ಓಂ ಬಿರ್ಲಾ ಅವರಿಗೆ ರಾಜಿನಾಮೆ ಪತ್ರ ರವಾನೆ ಮಾಡಿದ್ದಾರೆ.

Advertisement

ಬಳಿಕ ಮಾಧ್ಯಮಕ್ಕೆ‌ ಮಾಹಿತಿ ನೀಡಿರುವ ಸಂಗಣ್ಣ ಕರಡಿ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆ ಸಂಸತ್ ಸದಸ್ಯ ಸ್ಥಾನ ಹಾಗೂ ಬಿಜೆಪಿಗೂ ರಾಜೀನಾಮೆ ನೀಡಿದ್ದೇನೆ. ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್ ಮೂಲಕ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪತ್ರ ಕಳುಹಿಸಿದ್ದೇನೆ. ಕಳೆದ 10 ವರ್ಷದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದ ದಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ. ನಾನು ಸಂಸದನಾಗುವ ಮೊದಲು ರೈಲ್ವೆ, ಹೆದ್ದಾರಿ ಹಾಗೂ ಕೇಂದ್ರ ಸರ್ಕಾರ ಸರ್ಕಾರದ ಯೋಜನೆಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ತಲುಪಿರಲಿಲ್ಲ. ನಾನು ಸಂಬಂಧಿಸಿದ ಕೇಂದ್ರ ಸಚಿವರಿಗೆ ಪತ್ರ ಬರೆದು ಭೇಟಿಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕಾಮಗಾರಿ ತಂದಿರುವ ಹೆಮ್ಮೆ ನನಗಿದೆ. ಆದರೆ, ಇತ್ತೀಚಿನ ರಾಜಕಾರಣ ನನಗೆ ಬೇಸರ ತರಿಸಿದ್ದು, ನನ್ನ ಸಾರ್ವಜನಿಕರ ಸೇವೆ ಗುರುತಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದರು.

ಕೊಪ್ಪಳದಲ್ಲಿ ಬಿಜೆಪಿ ನೆಲೆಯೂರಲು ನಾನು ಕೂಡ ಕಾರಣಿಕರ್ತ. ಪಕ್ಷದ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದೇನೆ. ಹಾಲಿ, ಮಾಜಿ ಶಾಸಕರು, ಹಿರಿಯ ಹಾಗೂ ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಜತೆಗಿದ್ದೇ ಬೆನ್ನಿಗೆ ಚೂರಿ ಹಾಕಿದ ಮಹಾ ನಾಯಕರಿಗೆ ಕೊಪ್ಪಳದ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ಬಿಜೆಪಿಯಲ್ಲಿ ನನ್ನ ಸೇವೆಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಜನರು ಗುರುತಿಸಿದರು. ಆದರೆ, ಪಕ್ಷದ ನಾಯಕರು ಗುರುತಿಸಲಿಲ್ಲ ಏಕೆ ಎಂಬುದೇ ನನ್ನ ಪ್ರಶ್ನೆಯಾಗಿದೆ. ನಾನು ರಾಜಕೀಯವಾಗಿ ಮುಖಂಡರನ್ನು ಬೆಳೆಸಲು ಮುಂದಾಗಿದ್ದೇ ಹೊರತು ಮಟ್ಟ ಹಾಕುವ ಚಿಂತನೆ ಮಾಡಿರಲಿಲ್ಲ. ಆದರೆ, ನನ್ನನ್ನು ಮಟ್ಟ ಹಾಕಲು ಪ್ರಯತ್ನಗಳು ನಡೆದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸುವ ಸಮಯವನ್ನು ಕ್ಷೇತ್ರದ ಜನತೆಗೆ ಮೀಸಲಿಟ್ಟಿದ್ದರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ. ಅವರ ಸೋಲಿಗೆ ನಾನೇ ಹೊಣೆ ಎಂದು ಹಗೆ ಸಾಧಿಸಿ ಟಿಕೆಟ್ ತಪ್ಪಿಸಿದ್ದಾರೆ. ಅವರ ಕಾರ್ಯವೈಖರಿ, ಮುಖಂಡರ ಹಾಗೂ ಮತದಾರರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿ ನನ್ನ ಮೇಲೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.

ನನಗೆ ಟಿಕೆಟ್ ತಪ್ಪಿಸಿದ ಮಹಾನಾಯಕರಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅವರಿಗೂ ನನ್ನ ಪರಿಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ನನ್ನ ಕೈ ಬಿಟ್ಟರೂ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆ ನನ್ನ ಜತೆಗಿದ್ದಾರೆ. ನನ್ನ ಕೊನೆ ಉಸಿರಿರುವವರೆಗೂ ಜನಸೇವೆ ಮಾಡುತ್ತೇನೆ ಎಂದಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ:
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆ ಅಂಗಿಕರಿಸಬೇಕು ಎಂದು ಕೋರಿದ್ದಾರೆ.

Advertisement

ಇದನ್ನೂ ಓದಿ: UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

Advertisement

Udayavani is now on Telegram. Click here to join our channel and stay updated with the latest news.

Next