Advertisement
ಕೊಡಗು, ಬೆಂಗಳೂರು, ಮೈಸೂರು, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಸಹಿತ ಅನೇಕ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಚಿತ್ರದುರ್ಗ ನಗರದಲ್ಲಿ 9.68 ಸೆಂ.ಮೀ. ಮಳೆಯಾಗಿದ್ದು, ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಅಂದಾಜು 110 ಎಕರೆ ಪ್ರದೇಶದಲ್ಲಿ ಬಾಳೆ, ಅಡಿಕೆ, ತೆಂಗು ಸಹಿತ ತೋಟ ಗಾರಿಕೆ ಬೆಳೆಗಳು ಧರೆಗುರುಳಿವೆ.
Related Articles
Advertisement
ಹಾಸನ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಅರಕಲಗೂಡು, ಬೇಲೂರು, ಸಕಲೇಶಪುರ ತಾಲೂಕುಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಯಿತು. ಕೊಡಗಿನ ಶನಿವಾರಸಂತೆಯಲ್ಲಿ ಆಲಿಕಲ್ಲು ಮಳೆ ಕಾಫಿ ಕೊಯ್ಲಿಗೆ ತೊಂದರೆ ಮಾಡಿದೆ.
ಮಲೆನಾಡಿನಲ್ಲೂ ಮಳೆ ;
ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ರಾತ್ರಿಯೇ ಆರಂಭವಾಗಿದ್ದ ಅಕಾಲಿಕ ಮಳೆಗೆ ಹಿಂಗಾರು ಬೆಳೆ ಕೊಯ್ಲು ನಿರತ ರೈತಾಪಿ ವರ್ಗ ಹಿಡಿಶಾಪ ಹಾಕಿದೆ. ಭದ್ರಾವತಿ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಶಿಕಾರಿಪುರ, ಸೊರಬ, ಸಾಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಶುಕ್ರವಾರ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ, ಶೀತ ಗಾಳಿ ಮುಂದುವರಿದಿತ್ತು.
ಅಡಿಕೆ ಕೊಯ್ಲಿಗೆ ತೊಂದರೆ :
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕಡೂರು, ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಗುರುವಾರ ರಾತ್ರಿ ವೇಳೆ ತುಂತುರು ಮಳೆಯಾಗಿದೆ. ಶುಕ್ರವಾರ ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನದ ವೇಳೆ ಮಳೆ ಸುರಿದಿದೆ. ಇದರಿಂದ ಕಾಫಿ, ಅಡಿಕೆ ಕೊಯ್ಲು ಹಾಗೂ ಸಂಸ್ಕರಣೆಗೆ ತೊಂದರೆಯಾಗಿದ್ದು, ರೈತರಿಗೆ ನಷ್ಟವಾಗಿದೆ.
ರಾಶಿ ರಾಶಿ ಆಲಿಕಲ್ಲು :
ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದ ಗ್ರಾಮಸ್ಥರು ಮತ್ತು ರೈತರಿಗೆ ಶುಕ್ರವಾರ ಸುರಿದ ಆಲಿಕಲ್ಲಿನ ಮಹಾಮಳೆ ಆಘಾತವನ್ನುಂಟು ಮಾಡಿದೆ. ರಥಸಪ್ತಮಿಯ ದಿನವಾದ ಶುಕ್ರವಾರ ತಿಳಿ ಮೋಡದ ವಾತಾವರಣದ ನಡುವೆ ದಿಢೀರ್ ಮಳೆ ಸುರಿದಿದೆ. ರಾಶಿ ರಾಶಿ ಆಲಿಕಲ್ಲುಗಳ ಹೊಡೆತದಿಂದಾಗಿ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಹಸಿ ಮೆಣಸಿನ ಫಸಲು ಸಂಪೂರ್ಣವಾಗಿ ನಾಶವಾಗಿದೆ.
ಕರಾವಳಿಯಲ್ಲಿ ಉತ್ತಮ :
ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಲಘು ಮಳೆಯಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ, ಕೊಲ್ಲೂರು ಭಾಗದಲ್ಲಿ ಧಾರಾಕಾರ ಮಳೆಯಾಯಿತು.
ಇನ್ನೂ ಎರಡು ದಿನ ಮಳೆ? :
ಮುಂದಿನ 2 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.