Advertisement

Server problem: ಎಚ್‌ಎಸ್‌ಆರ್‌ಪಿ ಸರ್ವರ್‌ ಸಮಸ್ಯೆಯಿಂದ ಪರದಾಟ

05:29 PM Feb 10, 2024 | Team Udayavani |

ಸಕಲೇಶಪುರ: ಸರ್ವರ್‌ ಸಮಸ್ಯೆಯಿಂದ ಪಟ್ಟಣದ ಎಆರ್‌ಟಿಒ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಸಾರ್ವಜನಿಕರ ಕೆಲಸಗಳು ಸರಿಯಾಗಿ ಆಗದ ಕಾರಣ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅಲ್ಲದೇ ಎಚ್‌ಎಸ್‌ಆರ್‌ಪಿ (ಅತೀ ಸುರಕ್ಷತಾ ನಂಬರ್‌ ಪ್ಲೇಟ್‌) ಪಡೆಯುವುದರ ಕುರಿತು ಜನಸಾಮಾನ್ಯರಲ್ಲಿ ಗೊಂದಲ ಉಂಟಾಗಿದೆ. ಆನ್‌ಲೈನ್‌ ಮೂಲಕ ಸ್ಥಳೀಯವಾಗಿಯೇ ನೋಂದಣಿ ಮಾಡಿಕೊಳ್ಳಬಹುದು. ಆದರೆ ಇದನ್ನು ಅಳವಡಿಸಿಕೊಳ್ಳಲು ಸಮೀಪದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ.

ಪರದಾಟ: ಕಲಿಕಾ ಲೈಸೆನ್ಸ್‌, ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು, ಮರು ನವೀಕರಣ ಮುಂತಾದವುಗಳಿಗಾಗಿ ಇರುವ ಸಾರಥಿ ವೆಬ್‌ಸೈಟ್‌ನ್ನು ಉನ್ನತ ದರ್ಜೆಗೇರಿಸಲಾಗುತ್ತಿದ್ದು, ಇದರಿಂದ ತಾಲೂಕು ಸೇರಿದಂತೆ ರಾಜ್ಯದ 70ಕ್ಕೂ ಹೆಚ್ಚು ಎಆರ್‌ಟಿಒಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಸಂದರ್ಭ ವೆಬ್‌ಸೈಟ್‌ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ತುರ್ತು ಸಂರ್ಧಭಗಳಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು, ಹಳೇಯ ಡಿ.ಎಲ್‌ ಮರು ನವೀಕರಣ ಮಾಡಿಸಲು ಸಾಧ್ಯವಾಗದೆ ಸಾರ್ವಜನಿಕರು ಹತಾಶರಾಗಿದ್ದಾರೆ.

ಬಂದ ದಾರಿಗೆ ಸುಂಕವಿಲ್ಲದೇ ವಾಪಸ್‌: ಮಧ್ಯವರ್ತಿಗಳಿಗೂ ಸಹ ಕಳೆದ ಒಂದು ವಾರದಿಂದ ಕೆಲಸವಿಲ್ಲದಂತಾಗಿದೆ. ಕೇವಲ ಎಆರ್‌ಟಿಒ ಕಚೇರಿ ಸಿಬ್ಬಂದಿಗಳ ಕಚೇರಿ ಕೆಲಸಕ್ಕಾಗಿ ಇರುವ ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಕೆಲಸಕ್ಕಾಗಿ ಎಆರ್‌ ಟಿಒ ಕಚೇರಿಗೆ ಬರುವ ಅನ್ಯ ತಾಲೂಕುಕು ಸೇರಿದಂತೆ ವಿವಿಧ ಭಾಗಗಳಿಂದ ಬರುವವರು ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಬೇಕಾಗಿದೆ.

ಎಚ್‌ಎಸ್‌ಆರ್‌ಪಿ; ವಾಹನ ಮಾಲಿಕರ ಆತಂಕ: 2019ಕ್ಕಿಂತ ಹಿಂದಿನ ವಾಹನ ಗಳಿಗೆ ಸರ್ಕಾರ ಎಚ್‌.ಎಸ್‌.ಆರ್‌.ಪಿ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿ ಸಿಕೊಳ್ಳಲು ಕಡ್ಡಾಯ ಮಾಡಿದ್ದು, ಕಳೆದ 3 ವರ್ಷಗಳಿಂದ ಕೇಂದ್ರ ಸರ್ಕಾರ ಇದನ್ನು ಮುಂದೂಡುತ್ತಾ ಬಂದಿದ್ದು, ಇದೀಗ ಫೆ.17 ರೊಳಗೆ ಅಳವಡಿಸಿಕೊಳ್ಳಲು ಆದೇಶ ನೀಡಿದೆ. 17ರ ವೇಳೆಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿ ಕೊಳ್ಳದಿದ್ದರೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ದುಬಾರಿ ದಂಡ ವಿಧಿಸುವ ಸಾಧ್ಯತೆ ಯಿದ್ದು, ಇದರಿಂದಾಗಿ ವಾಹನ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಜಿಲ್ಲಾ ಕೇಂದ್ರಕ್ಕೆ ಹೋಗಬೇಕು: ಆನ್‌ಲೈನ್‌ ಮೂಲಕ ಈ ಮಾದರಿಯ ನಂಬರ್‌ ಪ್ಲೇಟ್‌ಗೆ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಆದರೆ ಇದನ್ನು ಅಳವಡಿಸಿಕೊಳ್ಳಲು ಸಮೀಪದ ಜಿಲ್ಲಾ ಕೇಂದ್ರವಾದ ಹಾಸನ ಅಥವಾ ಚಿಕ್ಕಮಗಳೂರಿಗೆ ವಾಹನವನ್ನು ತೆಗೆದುಕೊಂಡು ಹೋಗಬೇಕಾಗಿದೆ. ಜನಸಾಮಾನ್ಯರು ಕೇವಲ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ತಮ್ಮ ವಾಹನಗಳನ್ನು ತೆಗೆದುಕೊಂಡು ಜಿಲ್ಲಾ ಕೇಂದ್ರಕ್ಕೆ ಹೋಗುವುದು ಕಷ್ಟಕರವಾಗಿದೆ.

ತಾಲೂಕು ಕೇಂದ್ರದಲ್ಲೂ ಅಳವಡಿಕೆಗೆ ಕ್ರಮ ಕೈಗೊಳ್ಳ ಬೇಕಿದೆ : ಕೆಲವು ಮಧ್ಯವರ್ತಿಗಳು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಡುತ್ತೇವೆಂದು ದುಬಾರಿ ಹಣ ಪಡೆಯುತ್ತಿದ್ದಾರೆ. ಎಆರ್‌ಟಿಒ ಕಚೇರಿ ಮುಖ್ಯಸ್ಥರು, ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳುವವರಿಗೆ ಆತಂಕ ಬೇಡ. ನಿಮ್ಮ ವಿಳಾಸಕ್ಕೆ ಬಂದು ಅಳವಡಿಸಿಕೊಡುತ್ತಾರೆಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗ ಬೇಕಾಗಿದೆ. ಇದು ಜನಸಾಮಾನ್ಯರಿಗೆ ಬಹಳ ಹೊರೆಯಾಗುತ್ತಿದೆ. ತಾಲೂಕಿನ ಗಡಿಭಾಗದಲ್ಲಿರುವ ಬಿಸ್ಲೆ, ದೇವಾಲದಕೆರೆ, ಮಾಗೇರಿ, ಯಸಳೂರು ಮುಂತಾದ ಕಡೆಗಳಿಂದ ಹಾಸನಕ್ಕೆ ಹೋಗಲು ಸುಮಾರು 100 ಕಿ.ಮೀ ಪ್ರಯಾಣ ಮಾಡಬೇಕಾಗಿದೆ. ಇದು ಜನಸಾಮಾನ್ಯರ ಸಮಯ, ಹಣ ಎಲ್ಲವೂ ಕಳೆದು ಹೋಗುವುದರಿಂದ ಕೂಡಲೇ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಈ ಮಾದರಿಯ ನೋಂದಣಿ ಫ‌ಲಕಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ವೆಬ್‌ಸೈಟ್‌ನ್ನು ಉನ್ನತ ದರ್ಜೆಗೇರಿಸುತ್ತಿರುವ ಕಾರಣ ಸಾರಥಿ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಲು ಸಮಸ್ಯೆ ಉಂಟಾಗಿದೆ. ಸಕಲೇಶಪುರದ ಸಮಸ್ಯೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಎಆರ್‌ಟಿಒ ಕಚೇರಿಗಳ ಸಮಸ್ಯೆಯಾಗಿದೆ. ಎಚ್‌ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಎಲ್ಲರೂ ಅಳವಡಿಸಿಕೊಳ್ಳಲು ಮುಂದಾಗಬೇಕು. ●ಮಧುರಾ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಸಕಲೇಶಪುರ

ಸರ್ಕಾರ ಕೂಡಲೇ ಇತ್ತ ಗಮನಹರಿಸಿ ವೆಬ್‌ಸೈಟ್‌ ಸಮಸ್ಯೆ ನಿವಾರಿಸಬೇಕು. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗಾಗಿ ಜನಸಾಮಾನ್ಯರು ತಮ್ಮ ವಾಹನವನ್ನು ತೆಗೆದುಕೊಂಡು ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾಧ್ಯವಿಲ್ಲ. ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲೇ ಎಚ್‌ ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ●ಸಿಮೆಂಟ್‌ ಮಂಜು, ಶಾಸಕರು

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಹಾಸನಕ್ಕೆ ಹೋಗಬೇಕಾಗಿರುವುದು ಸಾರ್ವಜನಿಕರಿಗೆ ಬಹಳ ಕಷ್ಟಕರ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ●ವಿಜಯ್‌ಕುಮಾರ್‌, ಬಾಳೆಗದ್ದೆ ನಿವಾಸಿ

ಸುಧೀರ್‌ ಎಸ್‌.ಎಲ್‌.

Advertisement

Udayavani is now on Telegram. Click here to join our channel and stay updated with the latest news.

Next