ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ನಾಯಕರ ಹೊಸ ಮಾರ್ಗದಿಂದ ಅಂಬಳೆ ಹೊಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆಯ ಮಧ್ಯದಲ್ಲಿ ಚರಂಡಿಯ ನೀರು ಹೋಗಲು ಸ್ಲಾಬ್ ಚರಂಡಿ ನಿರ್ಮಾಣವಾಗಿದೆ. ಕಾಮಗಾರಿಯೂ ಅವೈಜ್ಞಾನಿಕವಾಗಿ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಅಂಬಳೆ ಗ್ರಾಮದಲ್ಲಿ ಟಿಎಸ್‌ಪಿ ಯೋಜನೆಯಡಿ 20 ಲಕ್ಷ ರೂ. ಮಂಜೂರಾಗಿದ್ದು, ಇದರಲ್ಲಿ 4 ಡೆಕ್, 590 ಮೀಟರ್ ಚರಂಡಿ ಹಾಗೂ 60 ಮೀಟರ್ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ 2019-ಆಗಸ್ಟ್ ತಿಂಗಳಲ್ಲಿ ಶಾಸಕ ಎನ್.ಮಹೇಶ್ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ: ಕಾಮಗಾರಿಯು ಕಳೆದ 5 ತಿಂಗಳುಗಳಿಂದಲೂ ಆಮೆಗತಿಯಲ್ಲಿ ಕುಟುಂತ್ತಾ ಸಾಗುತ್ತಿದೆ. ಇದು ಅಂಬಳೆ ಗ್ರಾಮದಿಂದ ಹೊಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದರೆ, ಮಾರ್ಗ ಮಧ್ಯದಲ್ಲಿ ರಸ್ತೆಗಿಂತ 3 ಅಡಿ ಎತ್ತರಕ್ಕೆ ಸ್ಲಾಬ್ ನಿರ್ಮಿಸಲಾಗಿದೆ. ಇಲ್ಲಿ ದಿನನಿತ್ಯ ಬಸ್, ಲಾರಿ, ಟ್ರಾಕ್ಟರ್, ಆಟೋ, ಬೈಕ್ ಸೇರಿದಂತೆ ನೂರಾರು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಈ ಕೂಡಲೇ ಎತ್ತರವನ್ನು ಕಡಿಮೆಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ ಎಂದು ವಾಹನ ಸವಾರರು ಆಗ್ರಹಿದ್ದಾರೆ.
ತಮಗೆ ಇಷ್ಟ ಬಂದಂತೆ ಚರಂಡಿ ನಿರ್ಮಾಣ: ಐದು ತಿಂಗಳು ಕಳೆದರೂ ಕಾಮಗಾರಿ ಮುಗಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಚರಂಡಿಯನ್ನು ಮಾತ್ರ ನಿರ್ಮಾಣ ಮಾಡಿ, ಹಾಗೇ ಬಿಟ್ಟಿದ್ದಾರೆ. ಬಾಕಿ ಇರುವ ರಸ್ತೆ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ತಮಗೆ ಇಷ್ಟ ಬಂದ ರೀತಿಯಲ್ಲಿ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಆಮೆ ಗತಿಯಲ್ಲಿ ಸಾಗಿದೆ ಕಾಮಗಾರಿ: ಕಡಿಮೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಚರಂಡಿಯನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಕುಡಿಯುವ ನೀರಿನ ಕೈ ಪಂಪು ಕೂಡ ಪಕ್ಕದಲ್ಲಿದ್ದು, ಇದನ್ನೂ ಸೇರಿಸಿಕೊಂಡು ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ ಕೈ ಪಂಪ್ ಒತ್ತಲು ತೊಂದರೆಯಾಗುತ್ತದೆ. ಈ ಬಗ್ಗೆ ಸಂಬಂದಪಟ್ಟ ಎಇಇ ಹಾಗೂ ಮೇಲಾಧಿಕಾರಿಗಳು ಭೇಟಿ ನೀಡಿ ಕಾಮಗಾರಿಯು ಪರಿಶೀಲಿಸಬೇಕು. ಅಲ್ಲದೆ, ಆಮೆ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಸೇರಿದಂತೆ ಇತರೇ ಕೆಲಸಗಳನ್ನು ಶೀಘ್ರದಲ್ಲಿಯೇ ಮುಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ ಎಂಬ ಆಗ್ರಹ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ನಡೆಯುತ್ತಿರುವ ಕಾಮಗಾರಿಯು ಅಂಬಳೆ ಗ್ರಾಮದಲ್ಲಿ ಬಡವಾಣೆಯು ಎತ್ತರದಲ್ಲಿರುವುದರಿಂದ ಅಲ್ಲಿಂದ ಚರಂಡಿ ನೀರು ಹಾದು ಹೋಗುವ ಉದ್ದೇಶದಿಂದ ಸ್ಲಾಬ್ ಎತ್ತರಿಸಲಾಗಿದೆ. ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ತೊಡಕುಂಟಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಈ ಕೂಡಲೇ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು.
-ರಾಜು, ಜೆಇ ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ
* ಫೈರೋಜ್ ಖಾನ್