ವಿಜಯಪುರ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರ ಬೆಂಬಲಿಸಿ ಸೋಮವಾರ ದೇಶಾದ್ಯಂತ ಖಾಸಗಿ ವೈದ್ಯರು ನಡೆಸಿದ ಮುಷ್ಕರದ ಬಿಸಿ ಆರೋಗ್ಯ ಸಚಿವರ ತವರು ವಿಜಯಪುರ ಜಿಲ್ಲೆಗೂ ತಟ್ಟಿದೆ. ಖಾಸಗಿ ವೈದ್ಯರ ಮುಷ್ಕರ ತಿಳಿಯದೇ ಚಿಕಿತ್ಸೆಗೆ ನಗರ ಪ್ರದೇಶಗಳಿಗೆ ಆಗಮಿಸಿದ್ದ ರೋಗಿಗಳು ಪರದಾಡುವಂತೆ ಮಾಡಿತು. ಮತ್ತೂಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯಕ್ಕಿಂತ ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಎಲ್ಲ ವೈದ್ಯರನ್ನು ರಜೆ ರಹಿವಾಗಿ ಸಂಪೂರ್ಣ ಸೇವೆ ಪಡೆಯಲು ಮುಂದಾಗಿದ್ದರೂ ಚಿಕಿತ್ಸೆ ಪಡೆಯಲು ರೋಗಿಗಳ ಪರದಾಟ ತಪ್ಪಲಿಲ್ಲ. ಆದರೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದ್ ಆಗಿದ್ದವು. ಮುಷ್ಕರದ ಕಾರಣ ಜೂ. 17ರಂದು ಬೆಳಗ್ಗೆ 6ರಿಂದ ಜೂ. 18ರಂದು ಬೆಳಗ್ಗೆ 6ರವರೆಗೆ ತಮ್ಮ ಆಸ್ಪತ್ರೆಯಲ್ಲಿ ಸೇವೆಯನ್ನು ಬಂದ್ ಮಾಡಿದ್ದಾಗಿ ಫಲಕ ಅಳವಡಿಸಿ, ಬೀಗ ಹಾಕಿದ್ದು ಸಾಮಾನ್ಯವಾಗಿತ್ತು. ಖಾಸಗಿ ವೈದ್ಯರ ಮುಷ್ಕರ ತಿಳಿಯದೇ ದೂರದ ಊರುಗಳಿಂದ ನೂರಾರು ರೂ. ಖರ್ಚು ಮಾಡಿಕೊಂಡು ಬಂದಿದ್ದ ರೋಗಿಗಳು, ರೋಗಿಗಳ ಸಹಾಯಕರು ಚಿಕಿತ್ಸೆ ದೊರಕದೇ ಪರದಾಡುವಂತೆ ಮಾಡಿತ್ತು.
ಮುಷ್ಕರ ನಡೆಸುವ ಕುರಿತು ಖಾಸಗಿ ವೈದ್ಯರು ಮುಂಚಿತವಾಗಿಯೇ ಸಾರ್ವಜನಿಕವಾಗಿ ಎಲ್ಲಿಯೂ ಘೋಷಣೆ ಮಾಡಿ, ಸಾರ್ವಜನಿಕರಿಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ರೋಗಿಗಳು ಖಾಸಗಿ ಆಸ್ಪತ್ರೆಗಳ ಎದುರು ವೈದ್ಯರು ಬಂದಾರೆಂದು ಕಾಯುತ್ತಿರುವುದು ಕೂಡ ಸಾಮಾನ್ಯವಾಗಿತ್ತು. ಜಿಲ್ಲೆಯಲ್ಲಿರುವ 239 ಖಾಸಗಿ ಆಸ್ಪತ್ರೆಗಳು, 402 ಕ್ಲಿನಿಕ್‌ಗಳು ಸಂಪೂರ್ಣ ಸೇವೆ ಬಂದ್ ಮಾಡಿದ್ದವು.
ಮಗುವಿಕೆ ತೀವ್ರ ಅನಾರೋಗ್ಯದ ಕಾರಣ ನಗರದ ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗೆ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಿಂದ ಬಂದಿದ್ದ ಅನಾರೋಗ್ಯ ಪೀಡಿತ ಮಗುವಿನ ಪಾಲಕರು ಪರದಾಡುತ್ತಿದ್ದರು. ನಿರಂತರ ಒಬ್ಬರೇ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಿದ್ದು ಸರ್ಕಾರಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲು ವೈದ್ಯಕೀಯ ಚಿಕಿತ್ಸೆ ಬೇರೆ ಆಗುವ ಭೀತಿ ಇದೆ. ಹೀಗಾಗಿ ಬಾಗಿಲು ಹಾಕಿದ್ದರೂ ವೈದ್ಯರು ಬಂದಾರೆಂದು ಕಾಯುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು.
ಇನ್ನು ಕಳೆದ ಮೂರು ದಶಕಗಳಿಂದ ತಮ್ಮ ಕುಟುಂಬ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ ಎಂಬ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯಿಂದ ಬಂದಿದ್ದವರು ತಮ್ಮ ನೆಚ್ಚಿನ ಆಸ್ಪತ್ರೆ ಬಾಗಿಲು ಹಾಕಿದ್ದರಿಂದ ಕಂಗಾಲಾಗಿದ್ದರು. ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಬಿಸನಾಳ ಗ್ರಾಮದ ರೇಣುಕಾ ಆಮಾತೆ ಎಂಬವರು ರೋಗಪೀಡಿತ ತಮ್ಮ ಮಗುವಿಗೆ ಚಿಕಿತ್ಸೆಗೆ ಪರದಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಇದ್ದರೂ ಒಬ್ಬರೇ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹೀಗಾಗಿ ಸರ್ಕಾರಿ ಮಾತ್ರವಲ್ಲ, ಬೇರೆ ಯಾವುದೇ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲು ಮನಸ್ಸಿಲ್ಲ ಎಂದು ಗೋಳಾಡುತ್ತಿದ್ದರು. ಇನ್ನು ಖಾಸಗಿ ವೈದ್ಯರ ಮುಷ್ಕರ ಘೋಷಣೆ ಆಗುತ್ತಲೇ ಮುಂಜಾಗೃತಾ ಕ್ರಮವಾಗಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ರಜೆ ಮೇಲಿದ್ದ ವೈದ್ಯರ ರಜೆಯನ್ನೂ ರದ್ದು ಮಾಡಿ ಎಲ್ಲ ವೈದ್ಯರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲು ಮುಂದಾಗಿತ್ತು. ಪರಿಣಾಮ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಸೇವೆಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಇದರಿಂದಾಗಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಕಂಡು ಬಂದರೆ, ಒಳ ರೋಗಿಗಳ ಸಂಖ್ಯೆಯಲ್ಲಿ ಶೇ. 25 ಹೆಚ್ಚಳವಾಗಿತ್ತು.
ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯವಾಗಿ ನಿತ್ಯವೂ 1,100 ಇರುತ್ತಿದ್ದ ಹೊರ ರೋಗಿಗಳ ಸಂಖ್ಯೆ 2,000 ಸಾವಿರ ಗಡಿಗೆ ಬಂದಿದ್ದರೆ, ಒಳ ರೋಗಿಗಳು ನಿತ್ಯವೂ 60-70 ಇರುತ್ತಿದ್ದುದು 85-90ರ ಹಂತಕ್ಕೆ ತಲುಪಿತ್ತು. ಹೀಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ 182 ವೈದ್ಯರ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಇದಲ್ಲದೇ ಜಿಲ್ಲೆಯಲ್ಲಿರುವ ಸರ್ಕಾರಿ ಆರೋಗ್ಯ ಸೇವೆಯ 4 ತಾಲೂಕಾಸ್ಪತ್ರೆಗಳು, 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 9 ಸಮುದಾಯ ಆರೋಗ್ಯ ಕೇಂದ್ರಗಳು, 63 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 6 ಆರೋಗ್ಯ ವಿಸ್ತರಣಾ ಕೇಂದ್ರಗಳಲ್ಲಿ ನಿರಂತರ ವೈದ್ಯಕೀಯ ಸೇವೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಎಲ್ಲಿಯೂ ಸರ್ಕಾರಿ ವೈದ್ಯರ ಮುಷ್ಕರದ ಮಧ್ಯೆಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.