ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ ಮೂರು ಲಕ್ಷ ಜನರ ಕೋವ್ಯಾಕ್ಸಿನ್ ಎರಡನೇ ಡೋಸ್ ಕಾಲಾವಧಿ ಮೀರಿದ್ದು, ಇಂದಿಗೂ ಲಸಿಕೆ ಸಿಗದೇ ಪರದಾಡುತ್ತಿದ್ದಾರೆ. ಇವರು ಕನಿಷ್ಠ ಇನ್ನೂ ಒಂದು ವಾರ ಲಸಿಕೆಗೆ ಕಾಯಬೇಕಿದೆ. ಆನಂತರವೂ ಎಲ್ಲರಿಗೂ ಸಿಗುವುದು ಅನುಮಾನ.
ಕೋವ್ಯಾಕ್ಸಿನ್ ಲಸಿಕೆ ಮೊದಲ ಡೋಸ್ ಪಡೆದು ನಾಲ್ಕರಿಂದ ಆರು ವಾರದೊಳಗೆ (28 ರಿಂದ 42 ದಿನ) ಎರಡನೇ ಡೋಸ್ ಪಡೆದುಕೊಳ್ಳಬೇಕು. ಸದ್ಯ ರಾಜ್ಯದಲ್ಲಿ ಮೊದಲ ಡೋಸ್ ಪಡೆದು ಏಳು ವಾರ ಪೂರ್ಣಗೊಂಡವರ ಸಂಖ್ಯೆ 2,95,795 ಮಂದಿ ಇದೆ.ಈ ಪೈಕಿ ಒಂದು ಲಕ್ಷ ಮಂದಿಯದ್ದು, ಎಂಟು ವಾರ ಪೂರ್ಣಗೊಂಡಿವೆ. ಆದರೆ, ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಕೊರತೆಯಿಂದ ಇಂದಿಗೂ ಎರಡನೇ ಡೋಸ್ ಸಿಕ್ಕಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಎರಡನೇ ಡೋಸ್ ಮೀರಿದವರಿದ್ದಾರೆ. ಪ್ರಮುಖವಾಗಿ ಮೂರು ಜಿಲ್ಲೆಗಳಲ್ಲಿ 20 ಸಾವಿರಕ್ಕೂ ಅಧಿಕ, 10 ಜಿಲ್ಲೆಗಳಲ್ಲಿ10 ಸಾವಿರಕ್ಕೂ ಅಧಿಕ ಜನರಿದ್ದಾರೆ.
ಎರಡನೇ ಡೋಸ್ ಕಾಲಾವಧಿ ಪೂರ್ಣಗೊಂಡಿದೆ, ಶೀಘ್ರ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಕೊರೊನಾ ಎರಡನೇ ಅಲೆ ಆತಂಕದಿಂದ ನಿತ್ಯ ವಿವಿಧ ಸರ್ಕಾರಿ ಅಲೆದು, ಖಾಸಗಿ ಆಸ್ಪತ್ರೆಗಳಲ್ಲಿಯೂ ವಿಚಾರಿಸುತ್ತಿದ್ದಾರೆ. ಎಲ್ಲಾ ಕಡೆಯೂ ನೋ ಸ್ಟಾಕ್ ಎಂಬ ಉತ್ತರವೇ ಸಿಗುತ್ತಿದೆ. ಇತ್ತ ಆರೋಗ್ಯ ಇಲಾಖೆ ಸದ್ಯ ದಾಸ್ತಾನು ಲಭ್ಯವಿಲ್ಲ ಎಂಬ ಕಾರಣಕ್ಕೆ ಕೋವ್ಯಾಕ್ಸಿನ್ ಎರಡನೇ ಡೋಸ್ ಬಾಕಿ ಇರುವವರಿಗೆ ಮೊಬೈಲ್ ಸಂದೇಶ ಬರುತ್ತದೆ, ಆಗ ಬನ್ನಿ ಎಂದು ಹೇಳಿದೆ. ಆದರೆ, ಯಾವಾಗ ಮೊಬೈಲ್ ಸಂದೇಶ ಬರುತ್ತದೆ, ನೋಂದಣಿ ವೇಳೆ ಮೊಬೈಲ್ ನಂಬರ್ ಇಲ್ಲದವರು ಏನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ, ಎರಡನೇ ಡೋಸ್ ಕಾಲಾವಧಿ ಮೀರಿದವರು ಆತಂಕದಲ್ಲಿದ್ದಾರೆ.
ರಾಜ್ಯಕ್ಕೆ ಜೂನ್ ಮೊದಲ ವಾರ 1.6 ಲಕ್ಷ ಡೋಸ್: ರಾಜ್ಯಕ್ಕೆ ಜೂನ್ ಮೊದಲ ವಾರ 1.6 ಲಕ್ಷ ಡೋಸ್ ಕೋವ್ಯಾಕ್ಸಿನ್ ಬರಲಿದೆ. ಆದರೂ, ಇನ್ನೂ ಅರ್ಧದಷ್ಟು ಮಂದಿಗೆಕೊರತೆಯಾಗಲಿದೆ. ಅಲ್ಲದೆ, ಸದ್ಯ ಮೊದಲ ಡೋಸ್ ಕೋವ್ಯಾಕ್ಸಿನ್ ಪಡೆದು ಐದು ವಾರ ಪೂರ್ಣಗೊಂಡವರ ಸಂಖ್ಯೆ 4.55 ಲಕ್ಷವಿದ್ದು, ಜೂನ್ ಮೊದಲ ವಾರಕ್ಕೆ ಅವರದ್ದು, ಎರಡನೇ ಡೋಸ್ ಕಾಲಾವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ಕಾಲಾವಧಿ ಮೀರಿದವರಿಗೆ ದಿನಾಂಕದ ಆದ್ಯತೆ ಮೇರೆಗೆ ನೀಡಲು ನಿರ್ಧರಿಸಲಾಗಿದೆ. ಅಂದರೆ, ಯಾರು ಮುಂಚೆ ಮೊದಲ ಡೋಸ್ ಪಡೆದಿರುತ್ತಾರೋ ಅವರಿಗೆ ಎರಡಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
ಬೇಕಿದೆ 10 ಲಕ್ಷಕ್ಕೂ ಅಧಿಕ ಡೋಸ್: ಈಗಾಗಲೇ ಕೋವ್ಯಾಕ್ಸಿನ್ ಮೊದಲ ಡೋಸ್ ಸ್ಥಗಿತಗೊಳಿಸಲಾಗಿದೆ. ಅದಕ್ಕೂ ಮುನ್ನ12.8 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಈ ಪೈಕಿ ಎರಡು ಲಕ್ಷ ಮಂದಿಗೆ ಮಾತ್ರ ಎರಡನೇ ಡೋಸ್ ಹಾಕಿದ್ದು, ಬಾಕಿ ಉಳಿದವರಿಗೆ 10.8 ಲಕ್ಷ ಡೋಸ್ ದಾಸ್ತಾನು ಅಗತ್ಯವಿದೆ.
ಯಾವ ಜಿಲ್ಲೆಗಳಲ್ಲಿ ಎಷ್ಟು ಮಂದಿ?: ಬಾಗಲಕೋಟೆ 28 ಸಾವಿರ, ¸ ಬೆಂಗಳೂರು 24 ಸಾವಿರ, ವಿಜಯಪುರ 23 ಸಾವಿರ, ರಾಯಚೂರು ಮತ್ತು ಕೊಪ್ಪಳ ತಲಾ18 ಸಾವಿರ, ದಕ್ಷಿಣ ಕನ್ನಡ 16 ಸಾವಿರ, ಬಳ್ಳಾರಿ ಮತ್ತು ಉಡುಪಿ ತಲಾ 14 ಸಾವಿರ, ಚಾಮರಾಜನಗರ, ಕೋಲಾರ, ಹಾಸನ ಹಾಗೂ ರಾಮನಗರ ತಲಾ 12 ಸಾವಿರ. ಬಾಕಿ ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿಯದ್ದು, ಎರಡನೇ ಡೋಸ್ ಅವಧಿ ಪೂರ್ಣಗೊಂಡಿದೆ.
ಎರಡನೇ ಡೋಸ್ ತಡವಾದರೆಯಾವುದೇ ಗಂಡಾಂತರವಿಲ್ಲ. ಅಲ್ಲದೆ, ದೇಹದಲ್ಲಿರುವ ಮೊದಲ ಡೋಸ್ ನಿಷ್ಕ್ರಿಯವಾಗುವುದಿಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಪಡೆದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಮೊದಲ ಡೋಸ್‌ನಿಂದ ರೋಗ ನಿರೋಧಕ ಮಧ್ಯಮ ಹಂತಕ್ಕೆ ಹೆಚ್ಚಿರುತ್ತದೆ. ಎರಡನೇ ಡೋಸ್ ಆ ಶಕ್ತಿಯನ್ನು ಇನ್ನಷ್ಟು ವೃದ್ಧಿ(ಬೂಸ್ಟ್) ಮಾಡುತ್ತದೆ. ಲಸಿಕೆ ಲಭ್ಯವಾದ ಬಳಿಕ ತಪ್ಪದೆ ಎರಡನೇ ಡೋಸ್ ಪಡೆಯಬೇಕು.-
ಡಾ.ಸುದರ್ಶನ್ ಬಲ್ಲಾಳ್, ಕೊರೊನಾ ತಜ್ಞರ ಸಲಹಾ ಸಮಿತಿ ಸದಸ್ಯ,/ ಅಧ್ಯಕ್ಷರು ಮಣಿಪಾಲ್ ಆಸ್ಪತ್ರೆ
ಜಯಪ್ರಕಾಶ್ ಬಿರಾದಾರ್