ಸಿಂದಗಿ: ಕೋವಿಡ್-19 ಸಮಸ್ಯೆಯಿಂದಾಗಿ ರಾಜ್ಯದೆಲ್ಲೆಡೆ ಮಾರ್ಚ್ ತಿಂಗಳಾರ್ಧದಲ್ಲೇ ಶಾಲಾ ಮತ್ತು ಕಾಲೇಜುಗಳು ಮುಚ್ಚಿದ್ದವು. ಪ್ರಸ್ತುತ ಸಂದರ್ಭದಲ್ಲಿ 2020-21ನೇ ಶೈಕ್ಷಣಿಕ ವರ್ಷ ಪ್ರಾರಂಭದ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿವೆ.
ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗದೇ ಇರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿದೆ. ಸಂಸ್ಥೆಯಲ್ಲಿ ಕೆಲಸ ಮಾಡುವ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ವೇತನ ನೀಡುವುದು, ಶಾಲಾ ವಾಹನಗಳಿಗಾಗಿ ಮಾಡಿದ ಬ್ಯಾಂಕ್ ಸಾಲದ ಮಾಸಿಕ ಕಂತು ತುಂಬುವುದು ಕಷ್ಟಕರವಾಗಿದೆ.
ಇಂಥ ಸಂದರ್ಭದಲ್ಲಿ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆರ್ಥಿಕ ನೆರವು ನೀಡಬೇಕು ಮತ್ತು ಅವರಿಗೆ ಸರಕಾರ ಜೀವ ವಿಮೆ ಸೌಲಭ್ಯ ಕಲ್ಪಸಿಕೊಡಬೇಕು ಎನ್ನುವುದು ಸಿಂದಗಿ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಒತ್ತಾಯವಾಗಿದೆ.
ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಿಲ್ಲ. ಒಂದು ವೇಳೆ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಶಾಲಾ ಅವಧಿಯನ್ನು ಬದಲಿಸಲು ಕೂಡ ಕಷ್ಟಕರವಾಗುವ ಸಾಧ್ಯತೆ ಹೆಚ್ಚು. ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆ ಬಗೆಗೆ ಹಲವು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವ ಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯನ್ನು ಅನವಶ್ಯಕ,ಪುನರಾವರ್ತಿತ ಪಠ್ಯವನ್ನು ಕೈಬಿಡಬೇಕು. ಅತ್ಯವಶ್ಯಕ ಪಠ್ಯಗಳನ್ನು ಉಳಿಸಿಕೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು. –
ಹ.ಮ. ಪೂಜಾರ, ನಿವೃತ್ತ ಶಿಕ್ಷಕ, ಸಿಂದಗಿ
ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಬಗೆಗೆ ಹಲವಾರು ಕ್ರಮ ಕೈಗೊಳ್ಳುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಜತೆಗೆ ಪೋಷಕರ ಹಾಗೂ ಸಮುದಾಯದ ಪಾತ್ರ ಹಿರಿದಾಗಿದೆ.
– ಪ್ರಕಾಶ ಚೌಧರಿ, ಅಧ್ಯಕ್ಷರು, ವೇಂಕಟೇಶ್ವರ ಶಿಕ್ಷಣ ಸಂಸ್ಥೆ, ಸಿಂದಗಿ
–ರಮೇಶ ಪೂಜಾರ