Advertisement
ಚಿಕ್ಕೋಡಿ ತಾಲೂಕಿನ ಚೆಂದೂರ ಮತ್ತು ಸುಕ್ಷೇತ್ರ ಯಡೂರ ಗ್ರಾಮದ ಸಂತ್ರಸ್ತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕಣ್ಣೀರು ಬತ್ತಿದೆ. ಕಷ್ಟಗಳ ವರ್ಣಿಸಲು ಗಂಟಲು ಒಣಗಿದೆ. ಕೇಳುವವರಿಗಂತೂ ಕಣ್ಣೀರ ಧಾರೆ ಹರಿಯುವುದರಲ್ಲಿ ಸಂದೇಹವೇ ಇಲ್ಲ.
Related Articles
Advertisement
ಶ್ರಾವಣ ಮಾಸ ಹಾಗೂ ಪಂಚಮಿ ಹಬ್ಬದಲ್ಲಿ ಸಂಭ್ರಮ ಪಡಬೇಕಾದ ತಂದೆ-ತಾಯಿ ಮತ್ತು ಮಕ್ಕಳು ಪ್ರವಾಹ ಸ್ಥಿತಿಗೆ ಸಿಕ್ಕು ದಿಕ್ಕಾಪಾಲಾಗಿದ್ದಾರೆ. ಕೆಲವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದರೆ ಕೆಲವರು ಸಂಬಂಧಿಕರ ಕಡೆಗೆ ಹೋಗಿದ್ದಾರೆ. ಎಲ್ಲರೂ ಕೂಡಿಕೊಂಡು ಮತ್ತೆ ಹೊಸ ಬದುಕು ಕಟ್ಟಲು ಎಷ್ಟು ದಿನ ಬೇಕೋ ಅಂದಾಜಿಲ್ಲ.
ಜಾನುವಾರುಗಳಿಗೆ ಮೇವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯ ದಯನೀಯವಾಗಿದೆ. ಮನುಷ್ಯ ಎಲ್ಲಿಯಾದರೂ ಹೋಗಿ ಊಟ ಮಾಡಿ ಬರಬಹುದು ಆದರೆ ಮೂಕ ಪ್ರಾಣಿಗಳ ಸ್ಥಿತಿ ನೋಡಿ ಸಂತ್ರಸ್ತರು ಮಮ್ಮಲ ಮರಗುತ್ತಿದ್ದಾರೆ.
ಶಾಲೆ-ಹಾಸ್ಟೆಲ್ಗಳು ನೀರಿನಲ್ಲಿ: ಚೆಂದೂರ ಗ್ರಾಮದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ನೀರು ತುಂಬಿಕೊಂಡಿದೆ. ಹಾಸ್ಟೆಲ್ ಒಳಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅದೇ ರೀತಿ ಯಡೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಶಾಲೆಯಲ್ಲಿರುವ 13 ಗಣಕಯಂತ್ರಗಳು, ಟ್ರೆಜರಿ, ಮಕ್ಕಳ ಪುಸ್ತಕಗಳು ಹಾಳಾಗಿವೆ. ಶಾಲೆಯು ರಾಡಿಯಿಂದ ತುಂಬಿಕೊಂಡಿದೆ.
ಯಡೂರ ಮತ್ತು ಚೆಂದೂರ ಗ್ರಾಮದಲ್ಲಿ ವಾಸ ಮಾಡುವ ಜನರ ಪರಿಸ್ಥಿತಿಗಿಂತಲೂ ತೋಟಪಟ್ಟಿ ಪ್ರದೇಶದಲ್ಲಿ ವಾಸ ಮಾಡುವ ಜನರ ಸ್ಥಿತಿ ಶೋಚನಿಯವಾಗಿದೆ. ಪ್ರವಾಹದ ರಭಸಕ್ಕೆ ಮನೆ ಕೊಚ್ಚಿಕೊಂಡು ಹೋಗುವುದರ ಜೊತೆಗೆ ಮನೆಯಲ್ಲಿರುವ ಟಿವಿ, ಫ್ರಿಜ್ ಸೇರಿದಂತೆ ಅನೇಕ ಸಾಮಾನುಗಳನ್ನು ಕೊಚ್ಚಿಕೊಂಡು ಹೋಗಿರುವುದು ನೋವು ತರಿಸಿದೆ ಎನ್ನುತ್ತಾರೆ ದಾದಾ ಕಾಂಬಳೆ.
ನೀರು ಕ್ಷಣ ಕ್ಷಣಕ್ಕೆ ಏರುತ್ತಿದೆ ಎಂದ ತಕ್ಷಣ ಏನು ಮಾಡಲು ತೋಚದೇ ಒಂಬತ್ತು ಎಮ್ಮೆಗಳನ್ನು ಮನೆ ಎರಡನೇ ಮಹಡಿ ಮೇಲೆ ಕಟ್ಟಿದರೆ ಸುರಕ್ಷಿತವಾಗಿರಬಹುದೆಂದು ಯೋಚಿಸಿ ಅಲ್ಲೇ ಕಟ್ಟಿ ಹೋಗಿದ್ದ ಚೆಂದೂರ ಗ್ರಾಮದ ರೈತ ಮಾಯಪ್ಪ ರಾಮಾ ಡೋಣಿ ಎಂಬುವವರ ಮೂರು ಜಾನುವಾರುಗಳು ಶನಿವಾರ ಸತ್ತು ಹೋಗಿವೆ. ಕೆಲ ಎಮ್ಮೆಗಳು ಅಸ್ವಸ್ಥಗೊಂಡಿರುವುದನ್ನು ನೋಡಿದ ರೈತನ ಕಣ್ಣಲ್ಲಿ ನೀರೇ ನಿಲ್ಲುತ್ತಿಲ್ಲ. ಮನೆ ಸದಸ್ಯರನ್ನು ಕಳೆದುಕೊಂಡ ದುಃಖ ಅವರ ಹೃದಯದಲ್ಲಿ ಮನೆ ಮಾಡಿದೆ. ಪ್ರವಾಹದಲ್ಲಿ ಸಿಲುಕಿದ್ದ ಮಾಯಪ್ಪ ಡೋಣಿಯನ್ನು ಹೆಲಿಕಾಪ್ಟರ ಮೂಲಕ ಸೇನಾ ತಂಡ ರಕ್ಷಣೆ ಮಾಡಿತ್ತು. ಆದರೆ ಎರಡನೇ ಮಹಡಿ ಮೇಲೆ ಕಟ್ಟಿ ಬಂದ ಜಾನುವಾರುಗಳು ಆಹಾರವಿಲ್ಲದೇ ಅಸ್ವಸ್ಥಗೊಂಡಿವೆ. ಪ್ರವಾಹ ಇಳಿದ ಮೇಲೆ ಮನೆಗೆ ಹೋದ ಬಳಿಕ ಕಣ್ಣುಮುಂದೆ ಎಮ್ಮೆಗಳು ಸಾಯುತ್ತಿರುವುದು ನೋಡಿ ನಿಜಕ್ಕೂ ನನ್ನ ಬಾಳ್ಯೆ ಮ್ಯಾಲೆ ಕಲ್ಲು ಹಾಕಿದಂತಾಗಿದೆ ಎಂದು ಮರುಗುತ್ತಿದ್ದಾರೆ.
•ಮಹಾದೇವ ಪೂಜೇರಿ