ನರಗುಂದ: ಹಗಲಿರುಳು ಮಳೆ-ಗಾಳಿ ಲೆಕ್ಕಿಸದೇ ಅತಂತ್ರ ಸ್ಥಿತಿಯಲ್ಲೇ ಬದುಕು ಸಾಗಿಸಬೇಕು. ಮಕ್ಕಳು ಮರಿ ಕಟ್ಟಿಕೊಂಡು ಆತಂಕದಲ್ಲೇ ಜೀವನ ಸಾಗಿಸಬೇಕು. ಹೀಗೆ ಕಳೆದ ಒಂದು ತಿಂಗಳಿನಿಂದ ಜೋಪಡಿಯಲ್ಲೇ ಬೆಂದು ಹೋಗಿದೆ ಸಂತ್ರಸ್ತರ ಬದುಕು!
ಇದು ಮಲಪ್ರಭಾ ನದಿ ಪ್ರವಾಹದಿಂದ ಅತಂತ್ರಗೊಂಡು ನವಗ್ರಾಮದಲ್ಲಿ ತಾಡಪಾಲಿನಿಂದ ಜೋಪಡಿಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿರುವ ತಾಲೂಕಿನ ನೆರೆ ಪೀಡಿತ ವಾಸನ ಗ್ರಾಮದ ಸಂತ್ರಸ್ತರ ಗೋಳು.
ಆಗಸ್ಟ್ ತಿಂಗಳ ಆರಂಭದಲ್ಲಿ ಉಕ್ಕಿ ಹರಿದು ತಮ್ಮ ಬದುಕನ್ನೇ ಕಿತ್ತುಕೊಂಡ ನೆರೆ ಹಾವಳಿಯಿಂದ ಇಂದಿಗೂ ತಾತ್ಕಾಲಿಕ ಸೂರು ಸಿಗದೇ ಜೀವನ ಸಾಗಿಸುತ್ತಿದ್ದಾರೆ. ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಂಡು ತಿಂಗಳು ಗತಿಸಿವೆ. ಈಗ ಮತ್ತೇ ಪ್ರವಾಹ ಭೀತಿ ತಲೆದೋರಿದ್ದರೂ ಇವರಿಗೆ ಮಾತ್ರ ತಾತ್ಕಾಲಿಕ ಶೆಡ್ ನಿರ್ಮಾಣವಾಗಿಲ್ಲ.
ಸ್ಥಳಾಂತರ ಗ್ರಾಮ: 1960ರ ದಶಕದಲ್ಲಿ ಮಲಪ್ರಭೆಗೆ ಸಮೀಪವಿದ್ದ ವಾಸನ ಸ್ಥಳಾಂತರ ಮಾಡಲಾಗಿತ್ತು. 2009ರ ಪ್ರವಾಹಕ್ಕೆ ಅತಂತ್ರಗೊಂಡ ಕೆಲ ಕುಟುಂಬಗಳಿಗೆ ಮತ್ತೂಂದು ನವಗ್ರಾಮದಲ್ಲಿ ಮನೆ ಕಟ್ಟಿಕೊಡಲಾಗಿತ್ತು. ಸ್ಥಳಾಂತರ ಗ್ರಾಮಕ್ಕೂ ಕಳೆದ ತಿಂಗಳ ಪ್ರವಾಹ ಅಪ್ಪಳಿಸಿದ್ದರಿಂದ ಹಳೆ ಕಾಲದ ಮನೆಗಳು ನೆಲಕಚ್ಚಿದ ಪರಿಣಾಮ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ನವಗ್ರಾಮಕ್ಕೆ ಸ್ಥಳಾಂತರಗೊಂಡಿವೆ.
ಜೋಪಡಿಗಳೇ ಆಶ್ರಯ: ತಾತ್ಕಾಲಿಕ ಶೆಡ್ ನಿರೀಕ್ಷೆಯಲ್ಲಿ ಈ ಕುಟುಂಬಗಳು ನವಗ್ರಾಮದಲ್ಲಿ ತಾಡಪಾಲಿನಿಂದ ಜೋಪಡಿ ನಿರ್ಮಿಸಿಕೊಂಡು ಅತಂತ್ರ ಬದುಕು ಸಾಗಿಸುತ್ತಿವೆ. ಈ ಜನರು ಅಕ್ಷರಶಃ ಬಯಲಿನಲ್ಲೇ ಬದುಕುವಂತಾಗಿದ್ದು ವಿಪರ್ಯಾಸ.
ಜಾನುವಾರುಗಳ ಪರದಾಟ: ತಮಗೆ ಮನೆಯಿಲ್ಲದೇ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರಿಗೆ ಜಾನುವಾರುಗಳದೇ ದೊಡ್ಡ ಚಿಂತೆ. ಸಂತ್ರಸ್ತರ ಜಾನುವಾರುಗಳಿಗೆ ಮಳೆ ಗಾಳಿಯೆನ್ನದೇ ಬಯಲೇ ಆಶ್ರಯವಾಗಿದ್ದು, ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ