Advertisement

ನೆರೆ ಮನೆ ಸಂಕಟ!

12:03 PM Sep 23, 2019 | Suhan S |

ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಇಲ್ಲವೇ ಎಲೆ, ಅಡಕೆ ಜಗಿಯುತ್ತ ಕುಳಿತಿರುವ ಜನ ಕಾಣುವುದಿಲ್ಲ.

Advertisement

ಬಿದ್ದ ಮನೆಗಳನ್ನು ಸರಿಪಡಿಸಿಕೊಳ್ಳುವವರು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಪಾತ್ರೆ, ಬಟ್ಟೆ ಬರೆ, ತಗಡುಗಳನ್ನು ಹುಡುಕಿ ಮೊದಲಿನಂತೆ ಮಾಡುವವರು, ಮಕ್ಕಳನ್ನು ಎಂದಿನಂತೆ ಶಾಲೆಗೆ ತಯಾರು ಮಾಡುವವರು, ನಷ್ಟದ ಅಂದಾಜನ್ನು ಅಂಕಿ-ಅಂಶಗಳ ಸಮೇತ ಸಿದ್ಧಪಡಿಸಲು ತಮ್ಮ ಊರಿಗೆ ಬರುವ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನಷ್ಟದ ದಾಖಲೆಗಳನ್ನು ಫೋಟೋ ಸಮೇತ ಸಿದ್ಧ ಮಾಡಿಕೊಳ್ಳುವವರು ಸಿಗುತ್ತಾರೆ. ಮುಳುಗಡೆ ಹಾಗೂ ಜಲಾವೃತವಾಗಿದ್ದ ಗ್ರಾಮಗಳಲ್ಲಿ ಈಗ ಕೆಲಸ ಮಾಡದವರೇ ಇಲ್ಲ. ಸೋಮಾರಿಗಳಿದ್ದರೂ ಅವರ ಸಂಖ್ಯೆ ಬಹಳ ಕಡಿಮೆ. ಗ್ರಾಮಕ್ಕೆ ಯಾರಾದರೂ ಅಧಿಕಾರಿಗಳು, ಅಪರಿಚಿತರು ಅಥವಾ ಸಂಘ ಸಂಸ್ಥೆಗಳ ಸದಸ್ಯರು ಬಂದರೆ ಸಾಕು ಇಡೀ ಗ್ರಾಮಕ್ಕೆ ಗ್ರಾಮವೇ ಅವರನ್ನು ಮುತ್ತಿಕೊಳ್ಳುತ್ತದೆ. ಆಸೆಗಣ್ಣಿನಿಂದ ಹೊಸ ಆಸರೆಗಾಗಿ ಹಾತೊರೆಯುತ್ತಾರೆ. ಬಂದವರು ಅಲ್ಲಿಂದ ಹೋಗಿದ್ದೇ ತಡ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ಕಾಯಕ ಆರಂಭವಾಗುತ್ತದೆ.

ಕೃಷ್ಣಾ ನದಿ ತೀರದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಜನರಿಗೆ ಪ್ರವಾಹ ರೂಢಿಯಾದಂತಾಗಿದೆ. 14 ವರ್ಷಗಳ ಹಿಂದಿನ ಪ್ರವಾಹ ಭೀಕರತೆಯನ್ನು ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಎರಡು ಲಕ್ಷ ಕ್ಯೂಸೆಕ್‌ ನೀರು ಅಂದರೆ ಅವರಿಗೆ ಏನೂ ಅಲ್ಲ. ಭಯದ ಮಾತೂ ದೂರ. ಆದರೆ ಈ ಬಾರಿ ಹೆಚ್ಚು ಹೊಡೆತ ತಿಂದವರು ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು. ಈ ನದಿಗೆ ನಿರ್ಮಾಣ ಮಾಡಿರುವ ಹಿಡಕಲ್‌ ಹಾಗೂ ಮಲಪ್ರಭಾ ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದು ಬಂತು. ಇದರ ನೇರ ಪರಿಣಾಮ ಆಗಿದ್ದು ನದಿ ತೀರದ ಗ್ರಾಮಗಳ ಮೇಲೆ. ರಾತ್ರೋರಾತ್ರಿ ಬರುತ್ತಿದ್ದ ನೀರು ನೆಮ್ಮದಿಯಿಂದ ಇದ್ದ ಜನರ ದಿಕ್ಕು ತಪ್ಪಿಸಿತು. ಮೈಲುಗಟ್ಟಲೇ ನೀರೇ ನೋಡದೇ ಇದ್ದ ಗ್ರಾಮಸ್ಥರು ಯಾಕಾದರೂ ಮಳೆ ಬಂತು ಎಂದು ಶಪಿಸಿಕೊಳ್ಳುವಂತಾಯಿತು. ಒಂದು ತಿಂಗಳ ಹಿಂದೆ ಪ್ರವಾಹ ಸಂತ್ರಸ್ತರ ಕಂಡು ಮರುಗಿದ್ದ ಕಣ್ಣುಗಳು ಈಗ ಅವರ ಧೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗುತ್ತಿವೆ. ಗಂಜಿ ಕೇಂದ್ರಗಳಲ್ಲಿ ಇವರಿಗೆ ಊಟ ಹಾಗೂ ವಸತಿಯ ತೊಂದರೆ ಇರಲಿಲ್ಲ. ಆದರೆ ಬಟ್ಟೆ ಬರೆ ಇಲ್ಲದೆ ಭಿಕ್ಷುಕರಂತೆ ಜೀವನ ನಡೆಸಬೇಕಾಗಿದ್ದು ತೀರಾ ನೋವಿನ ಸಂಗತಿ. ಹದಿನೈದು ದಿನಗಳಲ್ಲಿ ನೀರು ಮಾಡಿದ ಅನಾಹುತ ಈಜನರ ಮನದಲ್ಲಿ ಮರೆಯದ ಆಚ್ಚೊತ್ತಿ ನಿಂತಿದೆ.

ಹೊಲದಲ್ಲಿ ಮರಳು ಸಾಮ್ರಾಜ್ಯ : ನನಗೀಗ 75 ವರ್ಷ. 1962ರಿಂದ ಇದುವರೆಗೆ ನಾಲ್ಕೈದು ಪ್ರವಾಹ ನೋಡಿದ್ದೇನೆ. ಆಗ ಇಷ್ಟೊಂದು ನಷ್ಟ ಅಥವಾ ಹೆದರಿಕೆ ಎಂದೂ ಆಗಿಲ್ಲ. ಆದರೆ ಈ ಬಾರಿ ಹೇಳಲೂ ಭಯ. ಮನೆಗಳು ಬಿದ್ದವು. ಹೊಲದಾಗ ನೀರು ಮಾತ್ರ ಅಲ್ಲ ರಾಶಿ ರಾಶಿ ಉಸುಕು ಹಾಗೂ ಕಲ್ಲುಗಳು ಬಂದು ಬಿದ್ದವು. ಅದನ್ನು ಹೇಗೆ ತೆಗೆಯಬೇಕು. ಇದಕ್ಕೆ ನೀವೇ ಪರಿಹಾರ ತೋರಿಸಿ ಎಂದು ಹನುಮಂತಪ್ಪ ಹೇಳಿದಾಗ ಅವರ ಮುಂದಿನ ಬದುಕಿನ ದಾರಿಯ ದುರ್ಗಮತೆಯ ಅರಿವಾಗುತ್ತದೆ. ಈ ಸಲದ ಪ್ರವಾಹ ಭೀಕರ ಹಾಗೂ ಭಯಾನಕ. 14 ವರ್ಷದ ಹಿಂದೆ ಇದೇ ರೀತಿ ಪ್ರವಾಹದಿಂದ ಮನೆ ಮುಳುಗಿತ್ತು. ಈಗ ಮನೆಯ ಜೊತೆಗೆ ಬದುಕೂ ಮುಳುಗಿದೆ. ಸಕ್ಕರೆ, ಕಡ್ಡಿಪೆಟ್ಟಿಗೆ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಖರೀದಿ ಮಾಡಬೇಕಿದೆ. ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಮುಂದಿನ ದಾರಿ ಗೊತ್ತಿಲ್ಲ ಎಂದು ಚಿಕ್ಕೋಡಿ ತಾಲೂಕಿನ ಕಲ್ಲೋಳದ ಚಂದ್ರಕಾಂತ ನೋವು ತೋಡಿಕೊಳ್ಳುತ್ತಾರೆ.

 ಗೋಗರೆದಾಗ ನೀರು ಬಿಡಲಿಲ್ಲ!:  ತನ್ನ 80 ವರ್ಷದ ಜೀವನದಲ್ಲಿ ಒಮ್ಮೆಯೂ ಇಷ್ಟೊಂದು ನೀರು ನೋಡದೇ ಇದ್ದ ರಾಮದುರ್ಗ ತಾಲೂಕಿನ ಚಿಕ್ಕಹಳ್ಳಿ ಹಂಪಿಹೊಳಿಯ ಭೀಮಪ್ಪ, ಇದು ನಮ್ಮ ಮೇಲೆ ದೇವರ ಸಿಟ್ಟೋ ಅಥವಾ ಅಧಿಕಾರಿಗಳ ಸಿಟ್ಟೋ ಗೊತ್ತಿಲ್ಲ. ನಮ್ಮಲ್ಲಿ ಮೊದಲೇ ಮಳೆ ಕಡಿಮೆ. ಮೂರು ತಿಂಗಳ ಹಿಂದೆ ಕುಡಿಯಲು ನೀರು ಬಿಡಿ ಎಂದು ಗೋಗರೆದುಕೊಂಡೆವು. ಡ್ಯಾಮ್‌ದಿಂದ ನೀರು ಬಿಡ್ರಿ ಎಂದ್ರೂ ಬಿಡಲಿಲ್ಲ. ಈಗ ನೀರು ಬಿಡಬ್ಯಾಡ್ರಪ ಬಂದ್‌ ಮಾಡಿ ಎಂದರೂ ಬಂದ್‌ ಮಾಡವಲ್ಲರು. ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋತು ಎಂದು ಅಳುತ್ತಲೇ ಹೇಳಿದಾಗ ಅಲ್ಲಿನ ಜನ ಎದುರಿಸಿದ ಭಯಾನಕತೆಯ ಅರಿವಾಗುತ್ತದೆ.

Advertisement

ದಟ್ಟ ಮೋಡ ಕವಿದರೆ ಢವಢವ:  ಮನೆಯಲ್ಲಿ ತುಂಬಿಕೊಂಡಿದ್ದ ಕೆಸರು, ನೀರಿನ ಪ್ರವಾಹದ ಜೊತೆಗೆ ಮನೆ ಸುತ್ತಲೂ ಬಂದು ಬಿದ್ದಿದ್ದ ಕಸ ಗುಡಿಸಿ ಸ್ವತ್ಛ ಮಾಡುವದರಲ್ಲಿ ತಲ್ಲೀನವಾಗಿದ್ದ ಹಂಪಿಹೊಳಿಯ ಚಂದ್ರವ್ವ ಚಿಕ್ಕನರಗುಂದ ಈಗ ನೀರು ಕಂಡರೆ ಬೆಚ್ಚಿ ಬೀಳುತ್ತಾರೆ. ನದಿ ಪಕ್ಕದಲ್ಲೇ ಮನೆ ಇರದಿದ್ದರೂ ತಮ್ಮ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ನೀರಿನಿಂದ ಹೆದರಿಕೊಂಡಿರುವ ಚಂದ್ರವ್ವ ಇದುವರೆಗೂ ಅದರಿಂದ ಹೊರಬಂದಿಲ್ಲ. ಮೇಲೆ ದಟ್ಟ ಮೋಡ ಕಾಣಿಸಿದರೆ ಸಾಕು ಎಲ್ಲಿ ಮತ್ತೆ ಡ್ಯಾಮ್‌ದಿಂದ ನೀರು ಬಿಡುತ್ತಾರೆ ಎಂಬ ಚಿಂತೆ ಅವರದ್ದು. ಇದೇ ಭಯದಲ್ಲೇ ಎಲ್ಲವನ್ನೂ ಕಳೆದುಕೊಂಡೆ ಎನ್ನುತ್ತಾರೆ ಒಂದೇ ಮಾತಿನಲ್ಲಿ. ಇದು ಒಬ್ಬಿಬ್ಬರ ನೋವಿನ ಕತೆ. ಸಂಕಟ ಅಲ್ಲ. ಪ್ರವಾಹಕ್ಕೆ ಸಿಲುಕಿದ ಸಾವಿರಾರು ಮಂದಿಯ ಬದುಕಿನ ಚಿತ್ರ. ಒಂದು ರೀತಿಯಲ್ಲಿ ಎಲ್ಲ ಇದ್ದೂ ಇಲ್ಲದಂತಾದವರು. ನದಿಗಳ ಅಬ್ಬರ ಇಳಿದು ಗಂಜಿ ಕೇಂದ್ರಗಳು ಮುಚ್ಚಿದ ನಂತರ ಮತ್ತೂಂದು ಬದುಕು ಕಟ್ಟಿಕೊಳ್ಳಲು ಬಂದಿರುವ ನೂರಾರು ಗ್ರಾಮಗಳ ಜನರಿಗೆ ಈಗ ನಷ್ಟದ ಜೊತೆಗೆ ರೋಗಗಳ ಆತಂಕ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಂತ್ರಸ್ತರ ಮುಖದಲ್ಲಿ ಮೊದಲಿನ ನಗು ಕಾಣುತ್ತಿಲ್ಲ.

ಎಲ್ಲಿದೆ ನನ್ನ ಆಸ್ತಿ?:  ದಾನಿಗಳು, ಸಂಘ ಸಂಸ್ಥೆಗಳು ಮತ್ತು ಸರ್ಕಾರ ಏನೇ ಕೊಟ್ಟರೂ ಅವರಿಗೆ ಮೊದಲಿದ್ದ ಭದ್ರತೆ, ನೆಮ್ಮದಿ, ಉತ್ಸಾಹ ಹಾಗೂ ಭರವಸೆಗಳನ್ನು ಕೊಡಲಾಗದು. ಸಂಪೂರ್ಣವಾಗಿ ಕುಸಿದು ಹೋದ ಕುಟುಂಬದ ಅರ್ಥಿಕ ಸ್ಥಿತಿಯನ್ನು ಮರು ಸ್ಥಾಪಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನೀರಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೇ ಗೊತ್ತು. ಸರ್ಕಾರ ಒಂದಿಷ್ಟು ಪರಿಹಾರ, ತಾತ್ಕಾಲಿಕ ಮನೆ, ತಕ್ಷಣಕ್ಕೆ ಅಕ್ಕಿ, ಬೇಳೆ, ಪಾತ್ರೆ ಕೊಡಬಹುದು. ಆದರೆ ಮನೆಯಲ್ಲಿ ಇಟ್ಟಿದ್ದ ಆಪದ್ಧನ, ಬಂಗಾರ, ದವಸ ಧಾನ್ಯದ ದಾಸ್ತಾನು, ಬಟ್ಟೆ ಬರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ನನ್ನದೇ ಆಸ್ತಿ ಎಂದು ಹೇಳುವ ದಾಖಲೆ, ಕಾಗದಪತ್ರಗಳನ್ನು ಯಾರು ಕೊಡುತ್ತಾರೆ. ಎಷ್ಟೋ ಕಡೆ ಹೊಲಗಳಲ್ಲಿ ಗೇಣುದ್ದ ಉಸುಕು ಹಾಗೂ ಕಲ್ಲುಗಳ ರಾಶಿ ಬಂದು ಬಿದ್ದಿದೆ. ಈ ಹೊಲಗಳು ಮತ್ತೆ   ಉಳುಮೆ ಮಾಡಲು ಬರಬೇಕೆಂದರೆ ಅದಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಬೇಕು. ಇದೆಲ್ಲವೂ ಸರಿಹೋಗುವದು ಯಾವಾಗ ಎಂಬುದು ಮಾತ್ರ ಯಕ್ಷ ಪ್ರಶ್ನೆ.

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next