ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಕಂಗೆಟ್ಟಿರುವ ವಲಸೆ ಕಾರ್ಮಿಕರು, ಉದ್ಯೋಗವೂ ಇಲ್ಲದೆ ತಮ್ಮ ರಾಜ್ಯಕ್ಕೆ ತೆರಳಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದರೂ ತಮ್ಮ ತವರಿಗೆ ತೆರಳಲೇಬೇಕೆಂಬ ಹಂಬಲದಿಂದ ಹಠಕ್ಕೆ ಬಿದ್ದು ಕೆಲವರು ಸೈಕಲ್, ಬೈಕ್‌ಗಳಲ್ಲಿ ಹೊರಟಿದ್ದರೆ ಮತ್ತೆ ಕೆಲವರು ಪಾದಯಾತ್ರೆ ಕೈಗೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಕೆಲ ರಾಜ್ಯಗಳಲ್ಲಿ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದ್ದು, ಕೋವಿಡ್ ಕಂಟಕಕ್ಕೆ ಹೆದರಿ ಇಷ್ಟು ದಿನ ಲಾಕ್ ಡೌನ್‌ನಲ್ಲಿ ಸಿಲುಕಿದ್ದವರೆಲ್ಲ ಒಮ್ಮೆಲೆ ತಮ್ಮ ಊರು ಸೇರುವ ತವಕದಲ್ಲಿದ್ದಾರೆ. ಹೀಗಾಗಿ ಕೆಲವರು ಸಿಕ್ಕ-ಸಿಕ್ಕ ವಾಹನ ಏರಿ ಪ್ರಯಾಣ ಆರಂಭಿಸಿದ್ದರೆ ಇನ್ನು ಕೆಲವರು ಕಾಲ್ನಡಿಗೆಯಲ್ಲೇ ಊರು ತಲುಪುವ ತವಕದಲ್ಲಿದ್ದಾರೆ.
ಮಹಾನಗರದ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ಕೆಲಸ ಮಾಲೀಕರಿಂದ ನಡೆಯತ್ತಿದೆ. ಈಗಾಗಲೇ ಸಾರಿಗೆ ಸಂಸ್ಥೆಯ ಆರು ಬಸ್‌ಗಳನ್ನು ಬಾಡಿಗೆ ಪಡೆದು ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಆದರೆ ಕೆಲ ಅಸಂಘಟಿತ ಕಾರ್ಮಿಕರಿಗೆ ಇಷ್ಟೊಂದು ಹಣ ಪಾವತಿ ಮಾಡಿ ಊರಿಗೆ ತಲುಪುವ ಶಕ್ತಿಯಿಲ್ಲ. ಹೀಗಾಗಿ ತಮ್ಮಲ್ಲಿದ್ದ ಸೈಕಲ್, ಬೈಕ್‌ಗಳ ಮೂಲಕ ತಮ್ಮೂರಿನತ್ತ ಹೊರಟಿದ್ದಾರೆ. ವಾಹನ ಸೌಲಭ್ಯವಿಲ್ಲದ ಕಾರ್ಮಿಕರು ತಮ್ಮ ಕಾಲನ್ನೇ ನಂಬಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಇಡೀ ಕುಟುಂಬ ಬೈಕ್ ಮೇಲೆ: ಗೋವಾಕ್ಕೆ ವಲಸೆ ಹೋಗಿದ್ದ ಹಲವರು ಬೈಕ್‌ಗಳಲ್ಲಿ ತಮ್ಮ ಊರಿನತ್ತ ಹೊರಟಿದ್ದಾರೆ. ವ್ಯಕ್ತಿಯೊಬ್ಬ ಬೈಕ್ ಮೇಲೆ ತನ್ನ ಪತ್ನಿ, ಮಕ್ಕಳೊಂದಿಗೆ ಸಾಮಾನು ಸರಂಜಾಮಿನ ಗಂಟು ಕಟ್ಟಿಕೊಂಡು ಸ್ವಗ್ರಾಮಕ್ಕೆ ಹೊರಟಿದ್ದು ಕಂಡು ಬಂತು.
ಕಾರ್ಮಿಕರಿಗೆ ಕಾಲ್ನಡಿಗೆ ಗತಿ!: ಈ ಮಧ್ಯೆ ಮಂಗಳೂರಿನಿಂದ ಕಾಲ್ನಡಿಗೆ ಮೂಲಕ ಮಧ್ಯಪ್ರವೇಶಕ್ಕೆ ಹೊರಟಿದ್ದ ವಲಸೆ ಕಾರ್ಮಿಕರಿಗೆ ನಗರದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ತಮ್ಮ ರಾಜ್ಯಕ್ಕೆ ತಲುಪಿಸುವ ಭರವಸೆ ಸಿಗದಿದ್ದರಿಂದ ಸುಮಾರು 29 ಮಂದಿ ತಮ್ಮ ಪಾದಯಾತ್ರೆ ಮುಂದುವರಿಸಿದ್ದಾರೆ. ಮಂಗಳೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಮೂಲಕ ಹೊರಟಿದ್ದ ಕಾರ್ಮಿಕರು ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಚೆಕ್‌ಪೋಸ್ಟ್ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿದ್ದರು. ಹೀಗಾಗಿ ಮೇ 7ರಂದು ಸಂಜೆ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಅಂತಾರಾಜ್ಯ ಕಾರ್ಮಿಕರಿಗೆ ಉಚಿತ ಸಾರಿಗೆ ಸಂಚಾರಕ್ಕೆ ಸರಕಾರದ ಅನುಮತಿ ಇಲ್ಲದ ಪರಿಣಾಮ ಬಸ್ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದರು.
ಈ ಮಾಹಿತಿ ಪಡೆದ ಗೋಕುಲ ಠಾಣೆ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಅಲ್ಲಿಂದ ಸಂಬಂಧಿಸಿದ ಇಲಾಖೆಗೆ ವಿಷಯ ತಿಳಿಸಲಾಗಿತ್ತು. ಹೊರ ರಾಜ್ಯಗಳಿಗೆ ತೆರಳಲು ಇ-ಪಾಸ್ ಅಗತ್ಯವಿದ್ದ ಕಾರಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಆಗಮಿಸಿ ಅವರನ್ನು ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೋಂದಾಯಿಸುವ ಕೆಲಸ ಮಾಡಿದ್ದರು. ಹೀಗಾಗಿ ಕಾರ್ಮಿಕರು ಎರಡು ದಿನ ಬಸ್ ನಿಲ್ದಾಣ ಹಾಗೂ ಇನ್ನಿತರೆಡೆ ಕಾಲ ಕಳೆದಿದ್ದರು. ನಂತರ ಈ ಕಾರ್ಮಿಕರು ಎಲ್ಲಿ ಹೋದರು ಎಂಬುದೇ ತಿಳಿದು ಬಂದಿಲ್ಲ.
ಎಲ್ಲಿದ್ದಾರೆ ಗೊತ್ತಿಲ್ಲ ಕಾಲ್ನಡಿಗೆ ಮೂಲಕ ಬಂದಿದ್ದ ಮಧ್ಯ ಪ್ರ ದೇಶದ ಕಾರ್ಮಿಕರು ನಗರದಲ್ಲಿ ಇದ್ದಾರೋ ಅಥವಾ ಹೋಗಿದ್ದಾರೋ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಕಾರ್ಮಿಕರು ವಸತಿ ಕುರಿತು ಕೇಳಲಿಲ್ಲ, ಹೀಗಾಗಿ ಅವರಿಗೆ ಯಾವ ವ್ಯವಸ್ಥೆ ಮಾಡಲಿಲ್ಲ. ಈಗ ಎಲ್ಲಿದ್ದಾರೆ ಎನ್ನುವ ಮಾಹಿತಿಯಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಈ ನಡುವೆ ಪಕ್ಷದ ಮುಖಂಡರೊಬ್ಬರು ಕಾರ್ಮಿಕರು ಊರು ಸೇರಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿ ಅತ್ತ ಮುಖ ಮಾಡಿರಲಿಲ್ಲ. ಇದೀಗ ಬಸ್ ನಿಲ್ದಾಣದಲ್ಲೂ ಕಾರ್ಮಿಕರು ಇಲ್ಲ.
-ಬಸವರಾಜ ಹೂಗಾರ