ಧಾರವಾಡ: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗ ಬಂದ್ ಮಾಡಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ.
ದೊಡ್ಡ ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗವನ್ನು ಸಂಪೂರ್ಣ ಬಂದ್ ಮಾಡಿ ತುರ್ತು ಸೇವೆಯನ್ನಷ್ಟೇ ನೀಡುತ್ತಿದ್ದರೆ ಸಣ್ಣ ಆಸ್ಪತ್ರೆಗಳು ಸಂಪೂರ್ಣ ಬಾಗಿಲು ಹಾಕಿಕೊಂಡಿವೆ. ಇದರಿಂದಾಗಿ ಸಣ್ಣ-ಪುಟ್ಟ ಕಾಯಿಲೆಗಳಿಗೂ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದವರು ಅನಿವಾರ್ಯವಾಗಿ ಇದೀಗ ಸರಕಾರಿ ಆಸ್ಪತ್ರೆಗಳ ಬಾಗಿಲು ತಟ್ಟುವಂತಾಗಿದೆ.
ಗ್ರಾಮೀಣದಲ್ಲಿ ತೊಂದರೆ: ನಗರ ಪ್ರದೇಶದಲ್ಲಿ ಕೆಲ ಆಸ್ಪತ್ರೆಗಳು ತುರ್ತು ಸೇವೆಯನ್ನಾದರೂ ಇಟ್ಟಿದರೆ ಗ್ರಾಮೀಣ ಭಾಗದ ಆಸ್ಪತ್ರೆಗಳು ಸಂಪೂರ್ಣ ಬಾಗಿಲು ಹಾಕಿವೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟಾಗುತ್ತಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಆಸ್ಪತ್ರೆಗಳಿಗೆ ಕೋವಿಡ್ 19 ಭೀತಿಯಿಂದ ಜನ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಲಾಕಡೌನ್ ಹಿನ್ನಲೆಯಲ್ಲಿ ಪರಸ್ಥಳದವರಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸೇವೆ ಸಿಗದಂತೆ ಪರದಾಡುವಂತಾಗಿದೆ.
ಒಳರೋಗಿಗಳ ಪರದಾಟ: ಹೊರ ರೋಗಿಗಳು ಸೇವೆ ಸಿಗದೆ ಪರದಾಡುತ್ತಿದ್ದರೆ ಒಳರೋಗಿಗಳ ಪರಿಸ್ಥಿತಿ ಮತ್ತೂಂದು ರೀತಿ. ಒಳರೋಗಿಗಳ ಜೊತೆ ಇದ್ದವರ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ. ಹೋಟೆಲ್‌ಗಳು ಬಂದಾಗಿರುವ ಕಾರಣ ಒಳರೋಗಿಗಳಿಗೆ ಹಾಗೂ ಅವರ ಜೊತೆ ಇದ್ದರಿಗೆ ಸರಿಯಾಗಿ ಊಟ, ಚಹಾ ಸಿಗದಂತಾಗಿದೆ. ಪರಸ್ಥಳದಿಂದ ಬಂದು ಆಸ್ಪತ್ರೆ ಸೇರಿದವರು ನರಕಯಾತನೆ ಅನುಭವಿಸುವಂತೆ ಮಾಡಿದೆ ಈ ಲಾಕಡೌನ್. ಇನ್ನು ಜಿಲ್ಲಾಸ್ಪತ್ರೆಯಲ್ಲಿರುವ ಒಳರೋಗಿಗಳ ಜೊತೆ ಇರುವವರಿಗೆ ಸಂಘ-ಸಂಸ್ಥೆಗಳು ಊಟ ಒದಗಿಸುವ ಕೆಲಸ ಮಾಡುತ್ತಿದ್ದು, ದಿನನಿತ್ಯ ಊಟ ವಿತರಣೆ ಮಾಡುವವರಿಗೆ ಕಾಯುವ ಸ್ಥಿತಿ ಬಂದೊದಗಿದೆ.
ಜಿಲ್ಲಾಸ್ಪತ್ರೆಯಲ್ಲೂ ಅವ್ಯವಸ್ಥೆ : ನಗರದ ಜಿಲ್ಲಾಸ್ಪತ್ರೆಗಳಿಗೆ ಬರುವ ಹೊರರೋಗಿಗಳನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸ್ಕ್ಯಾನಿಂಗ್‌ಗಾಗಿ ನೀಡಿದ್ದ ನಿಗದಿತ ದಿನಾಂಕಗಳಂದು ಗರ್ಭಿಣಿಯರು ಬಂದರೂ ಸ್ಕ್ಯಾನಿಂಗ್ ಬಂದ್ ಮಾಡಿರುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ. ತುರ್ತು ಸಮಯದಲ್ಲಿ ಸ್ಕ್ಯಾನಿಂಗ್ ಮಾಡುವುದಾಗಿ ಹೇಳುತ್ತಿರುವ ಕಾರಣ ಗರ್ಭಿಣಿಯರಲ್ಲಿ ಆತಂಕ ದೂರವಾಗಿದೆ. ಅಲ್ಲದೇ ಕೆಲ ಖಾಸಗಿ ಆಸ್ಪತ್ರೆಗಳಲ್ಲೂ ಸ್ಕ್ಯಾನಿಂಗ್ ಸೇವೆ ಬಂದ್ ಆಗಿರುವ ಕಾರಣ ಈ ಲಾಕಡೌನ್ ಯಾವಾಗ ಮುಗಿಯುತ್ತೋ ಅನ್ನುವಂತಾಗಿದೆ.
ಕೋವಿಡ್-19 ಸೋಂಕು ತಡೆಯಲು ಸರ್ಕಾರಿ ಆಸ್ಪತ್ರೆಗಳು ಶ್ರಮಿಸುತ್ತಿವೆ. ಆದರೆ ಉಳಿದ ಸಣ್ಣಪುಟ್ಟ ಸಾಮಾನ್ಯ ಖಾಯಿಲೆಗಳು ಹಾಗೂ ತುರ್ತು ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳು ಒದಗಿಸಬೇಕು. ಈ ಕುರಿತು ಚರ್ಚಿಸಲು ಏ.4ರಂದು ಅವಳಿನಗರದ ಖಾಸಗಿ ವೈದ್ಯರ ಸಭೆ ನಡೆಸಲಾಗುವುದು. –
ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ