ಶಿರಸಿ: ಕೋವಿಡ್ ಕರ್ಫ್ಯೂ ವೇಳೆ ಕೃಷಿ ಉತ್ಪನ್ನಗಳ ವಹಿವಾಟಿಗೆ ತೊಂದರೆ ಇಲ್ಲ ಎಂದು ರಾಜ್ಯ ಸರಕಾರ ಘೋಷಿಸಿದ ಬೆನ್ನಲ್ಲೇ ಎಪಿಎಂಸಿ ಪ್ರಾಂಗಣದ ಸಮಯ ಮಿತಿ ಅಡಕೆ, ಕಾಳು ಮೆಣಸು ಬೆಳೆಗಾರರಿಗೆ ಸಂಕಷ್ಟ ತಂದಿಟ್ಟಿದೆ.
ಮುಂಜಾನೆ 6ರಿಂದ 10 ಗಂಟೆಯಯೊಳಗೆ ಕೃಷಿ ಉತ್ಪನ್ನಗಳ ವಹಿವಾಟು ನಡೆಸಲು ಎಪಿಎಂಸಿಗಳಿಗೆ ಸರಕಾರ ಸೂಚಿಸಿದ ಕಾರಣದ ಅಡಕೆ ವಹಿವಾಟಿಗೂ ಇದು ತೊಡಕಾಗಿದೆ. ಬೆಳೆಗಾರರು ಹಳ್ಳಿಯಿಂದ ಬೆಳೆ ತಂದು, ವಿಕ್ರಿ ಮಾಡಿ, ಟೆಂಡರ್ ಪ್ರಕ್ರಿಯೆಯಲ್ಲಿ ಮಾರಾಟ ಮಾಡಿದರೆ ಅದನ್ನು ತೂಕ ಮಾಡಿ, ವರ್ತಕರಿಗೆ ಕಳಿಸಲು ಕನಿಷ್ಠ 6ರಿಂದ 7 ತಾಸು ಬೇಕೇಬೇಕು. ಆದರೆ, ಇಲ್ಲಿ ಕೇವಲ ನಾಲ್ಕು ತಾಸಿನ ಮಿತಿ ಹಾಕಿದ್ದು ಸಮಸ್ಯೆಗೆ ಕಾರಣವಾಗಿದೆ. ಈ ಮಧ್ಯೆ ಕೆಡಿಸಿಸಿ ಬ್ಯಾಂಕ್ ಕೂಡ ಬೆಳೆಸಾಲ ಮರುಪಾವತಿಗೆ ಏ.30 ಕಡೇ ದಿನ ಎಂದು ಘೊಷಣೆ ಹೊರಡಿಸಿದೆ.
ನೇರವಾಗಿ ಅಲ್ಲವಾದರೂ ಆರ್ ಟಿಜಿಎಸ್ ಮೂಲಕ ಪಾವತಿ ಮಾಡಿದರೂ ತೊಂದರೆ ಇಲ್ಲ, ಸಮಯ ಮಿತಿಯಲ್ಲಿ ಪಾವತಿಸಬೇಕು ಎಂದಿದೆ. ಇದರಿಂದ ಕೋವಿಡ್ ಸಂಕಷ್ಟದಲ್ಲೂ ಅಡಕೆ ಬೆಳೆಗಾರರು ನಿತ್ಯ 4000ದಷ್ಟು ಅಡಕೆ ಚೀಲಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ, ಈ ನಿರ್ಬಂಧ ರೈತರಿಗೆ ಬೆಳೆ ಮಾರಾಟ ಮಾಡಲು ಆಗುತ್ತಿಲ್ಲ.
ಶಿರಸಿಯ ಪ್ರಸಿದ್ಧ ಅಡಕೆ ಬೆಳೆಗಾರರ ಸಂಸ್ಥೆ ಟಿಎಸ್‌ಎಸ್ ಅಡಕೆ ಟೆಂಡರ್ ಪ್ರಕ್ರಿಯೆಯನ್ನು ಬುಧವಾರದಿಂದ ನಿಲ್ಲಿಸಿ ಬೆಳಗ್ಗೆ 9:45ರೊಳಗೆ ಅಡಕೆ ತಂದರೆ ಇರಿಸಿಕೊಳ್ಳಲು ಮಾತ್ರ ಅವಕಾಶ ಮಾಡಲಾಗಿದೆ. ಬೆಳೆಗಾರರಿಗೆ ಕಷ್ಟದ ಕಾಲದಲ್ಲಿ ಬೆಳೆ ಮಾರಾಟ ಮಾಡಲು, ಸಹಕಾರಿ ಸಂಘಗಳು ಮಾರಾಟ ಮಾಡಿಕೊಡಲು ತೊಂದರೆ ಆಗುತ್ತವೆ.
ಕೃಷಿ ಉತ್ಪನ್ನಗಳ ಮಾರಾಟ, ಟೆಂಡರ್‌ಗೆ ಕೊರೊನಾ ಕರ್ಫ್ಯೂ ಅನ್ವಯ ಇಲ್ಲ ಎಂದು ಹೇಳಿದರೆ, ಸಾಮಾಜಿಕ ಅಂತರ, ಕೋವಿಡ್ ಎಚ್ಚರಿಕೆಯಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಸಹಕಾರಿ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಒಮ್ಮೆ ಸಹಕಾರಿ ಸಂಘಗಳು, ಅಡಿಕೆ ಮಂಡಿಗಳು ವಹಿವಾಟು ಸ್ಥಗಿತಗೊಳಿಸಿದರೆ, ಬೆಳೆಸಾಲ, ಮಾಧ್ಯಮಿಕ ಸಾಲ ಮರುಪಾವತಿ ಸಂದರ್ಭದಲ್ಲಿ ಸಂಕಷ್ಟವಾಗಲಿದೆ. ಸರಕಾರವೇ ಕೃಷಿ ಉತ್ಪನ್ನಗಳ ವಹಿವಾಟಿಗೆ ಏನೂ ಸಮಸ್ಯೆ ಇಲ್ಲ ಎಂದಾಗಲೂ ಇಂಥ ಗೊಂದಲ ಆಗಬಾರದು. ಹಾಗೂ ಈ ನಿಯಮ ಸಡಿಲಿಸಿ ಕೊಡಬೇಕು ಎಂದು ರೈತರು, ಸಹಕಾರಿಗಳು ಮನವಿ ಮಾಡಿಕೊಂಡಿದ್ದಾರೆ.