ಹೊಸದಿಲ್ಲಿ: ಆ್ಯಂಡ್ರಾಯ್ಡ ಫೋನ್ ಗ್ರಾಹಕರೇ ಎಚ್ಚರಿಕೆಯಿಂದ ಇರಿ. ಆದಾಯ ತೆರಿಗೆ ರೀ ಫಂಡ್ ಮಾಡಿಕೊಡಲಾಗುತ್ತದೆ ಎಂಬ ಆಕರ್ಷಕ ಸಂದೇಶದ ಲಿಂಕ್ ಇರುವ ಟ್ರೋಜನ್ ಮಾಲ್‌ವೇರ್ ದೇಶದ ಬ್ಯಾಂಕ್‌ಗಳ ಗ್ರಾಹಕರಿಗೆ ಬರುತ್ತಿದೆ.
ಈಗಾಗಲೇ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ 27ಬ್ಯಾಂಕ್‌ಗಳ ಗ್ರಾಹಕರಿಗೆ ಇಂಥ ಸಂದೇಶ ರವಾನೆಯಾಗಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಮಂಗಳವಾರ ಈ ಎಚ್ಚರಿಕೆ ನೀಡಿದೆ.
ಆದಾಯ ತೆರಿಗೆ ರೀ ಫಂಡ್ ಮಾಡಲಾಗುತ್ತದೆ ಎಂಬ ಆಮಿಷವಿರುವ ಸಂದೇಶ ಲಿಂಕ್ ಮೊಬೈಲ್‌ಗೆ ಬರುತ್ತದೆ. ಅದನ್ನು ಓಪನ್ ಮಾಡಿದಾಗ ಗ್ರಾಹಕರ ಖಾಸಗಿ ಮಾಹಿತಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.
ಈ ಮಾಲ್‌ವೇರ್‌ಗೆ “ಡ್ರಿನಿಕ್’ ಎಂದು ಹೆಸರಿಸಲಾಗಿದ್ದು, 2016ರಿಂದಲೇ ಅದು ಕಾರ್ಯಾಚರಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆ್ಯಂಡ್ರಾಯ್ಡ ತಂತ್ರಜ್ಞಾನ ಇರುವ ಮೊಬೈಲ್‌ಗಳ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಸಂದೇಶ ರವಾನೆಯಾಗುತ್ತಿದೆ ಎಂದು ಸರಕಾರದ ತಂಡ ತಿಳಿಸಿದೆ.
ರೀ ಫಂಡ್ ಹೆಸರಿನಲ್ಲಿ ಬರುವ ಲಿಂಕ್ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸುತ್ತದೆ. ಎಸ್‌ಎಂಎಸ್, ಕಾಲ್ ಲಾಗ್, ಕಾಂಟಾಕ್ಟ್ಸ್ ಸೇರಿದಂತೆ ಹಲವು ವಿಭಾಗಗಳ ಪ್ರವೇಶಕ್ಕೆ ಅನುಮತಿ ಕೇಳುತ್ತದೆ. ಅದಕ್ಕೆ ಅವಕಾಶ ನೀಡಕೂಡದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.
ಅಂಥ ಸಮಸ್ಯೆಗಳು ಕಂಡುಬಂದಲ್ಲಿ incident@cert-in.org.in ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಲು ಅವಕಾಶ ಇದೆ.