ಹುಬ್ಬಳ್ಳಿ: ತ್ರಿವಿಕ್ರಮ ಸಿನಿಮಾ ಎರಡು ವರ್ಷದ ಶ್ರಮವಾಗಿದ್ದು, ಜೂ. 24ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಸಹನಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಡುಗಡೆ ಮಾಡಿರುವ ಹಾಡುಗಳು ಜನರಿಗೆ ಸಾಕಷ್ಟು ಇಷ್ಟವಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದಿಂದಲೇ ಚಿತ್ರದ ಪ್ರಚಾರ ನಡೆಸಬೇಕು ಎನ್ನುವ ಕಾರಣಕ್ಕೆ ಇಲ್ಲಿಗೆ ಬಂದಿದ್ದು, ಜನರು ಒಳ್ಳೆಯ ಪ್ರೀತಿ ನೀಡಿದ್ದಾರೆ. 10 ಕೋಟಿ ರೂ. ಬಜೆಟ್ ಸಿನಿಮಾ ಇದ್ದಾಗಿದ್ದು, ಜನರ ಪ್ರೀತಿ ಗಳಿಸಲಿದೆ. ಸಾಧು ಕೋಕಿಲ, ಚಿಕ್ಕಣ್ಣ, ಆದಿ ಸೇರಿದಂತೆ ಅನುಭವಿ ತಾರಾ ಬಳಗವಿದೆ. ಕೊಡಚಾದ್ರಿ, ರಾಜಸ್ಥಾನ, ಕಾಶ್ಮೀರ ಸೇರಿದಂತೆ ಹಲವು ಸ್ಥಗಳಲ್ಲಿ ಚಿತ್ರೀಕರಣವಾಗಿದೆ. ಬ್ಯಾಂಕಾಂಕ್ ನಲ್ಲಿ ಹುಲಿಯೊಂದಿಗೆ ನೈಜವಾಗಿ ನಾಯಕನ ಫೈಟ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದರು.
ಚಿತ್ರದಲ್ಲಿ ಆರು ಹಾಡುಗಳು ಇವೆ. ಲೋಕಲ್ ಹುಡುಗನೊಬ್ಬ ಜೈನ ಸಮುದಾಯಕ್ಕೆ ಸೇರಿದ ಶ್ರೀಮಂತರ ಹುಡುಗಿಯನ್ನು ಪ್ರೀತಿ ಮಾಡುವ ಕಥೆ, ತೊಳಲಾಟದ ವಿಭಿನ್ನ ಕಥೆಯ ಹಂದರವಾಗಿದೆ. ಸಮಾಜದಲ್ಲಿ ನಡೆಯುವ ಸನ್ನಿವೇಶದ ಅಂಶಗಳನ್ನು ಆಧರಿಸಿ ಕಥೆಯಿದೆ. ಯಾವುದೇ ಧರ್ಮಕ್ಕೆ ಅವಹೇಳನವಾಗದಂತೆ ಅವರ ಸಂಸ್ಕೃತಿ ಸಂಪ್ರದಾಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಕಥೆ ನಿರ್ಮಿಸಲಾಗಿದೆ. ಚಿತ್ರದ ಹೆಸರಲ್ಲಿಯೇ ದೊಡ್ಡ ಅರ್ಥವಿದೆ. ಈಗಾಗಲೇ 200 ಚಿತ್ರಮಂದಿರಗಳನ್ನು ಗುರುತಿಸಿದ್ದು, ಇನ್ನೂ 50 ಟಾಕೀಸ್‌ಗಳ ನಿರೀಕ್ಷೆಯಿದೆ ಎಂದು ಹೇಳಿದರು.
ಚಿತ್ರದ ನಾಯಕ ವಿಕ್ರಮ ರವಿಚಂದ್ರನ್ ಮಾತನಾಡಿ, ಮೊದಲ ಚಿತ್ರದಲ್ಲಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಇದೊಂದು ಒಳ್ಳೆಯ ಚಿತ್ರವಾಗಿದ್ದು, ಕೇವಲ ಪ್ರೀತಿಯನ್ನು ತೋರಿಸುವುದಕ್ಕಾಗಿಯೇ ಮಾಡಿರುವ ಚಿತ್ರವಲ್ಲ. ಹುಲಿಯೊಂದಿಗೆ ಚಿಂಕೆಯ ಪ್ರೀತಿ ಆಗುತ್ತದೆಯೇ ಎನ್ನುವ ಚಿತ್ರದ ಒಳಸುಳಿ ಜನರಿಗೆ ಇಷ್ಟವಾಗುತ್ತದೆ. ಈ ಮೊದಲ ಚಿತ್ರದಿಂದ ಸಾಕಷ್ಟು ಕಲಿತಿದ್ದೇನೆ. ತಂದೆ ರವಿಚಂದ್ರನ್ ಅವರಿಗೆ ನಾಡಿನ ಜನರು ಸಾಕಷ್ಟು ಪ್ರೀತಿ ನೀಡಿದ್ದಾರೆ. ನನಗೆ ಒಂದು ಅವಕಾಶ ನೀಡುತ್ತಾರೆ ಎನ್ನುವ ಬಲವಾದ ಭರವಸೆಯಿದೆ ಎಂದರು.
ಇನ್ನೂ ಯಾವ ಸಿನಿಮಾಗೆ ಆಫರ್‌ಗಳು ಬಂದಿಲ್ಲ. ಬಹುಮುಖ ವ್ಯಕ್ತಿತ್ವ ಇಟ್ಟುಕೊಂಡು ನಟ, ನಿರ್ದೇಶಕ, ನಿರ್ಮಾಪಕನಾಗಿ ಬರಬೇಕು ಎನ್ನುವ ಆಸೆಯಿದೆ. ಸಿನಿಮಾ ಕ್ಷೇತ್ರದಲ್ಲಿ ಹುಟ್ಟಿದ್ದೇವೆ, ಇದರೊಂದಿಗೆ ಮುಂದೆ ಹೋಗುತ್ತೇವೆ. ಈ ಬದುಕು ಬಿಟ್ಟು ಬೇರೆಡೆಗೆ ಹೋಗುವ ಮಾತಿಲ್ಲ ಎಂದು ಹೇಳಿದರು.
ನಟಿ ಆಕಾಂಕ್ಷಾ ಶರ್ಮಾ ಮಾತನಾಡಿ, ಹಿಂದೆ ಆಲ್ಬಂ ಸಾಂಗ್, ಜಾಹೀರಾತಿನಲ್ಲಿ ನಟಿಸಿದ ಅನುಭವ ಇತ್ತು. ನನ್ನ ಮೇಲೆ ದೊಡ್ಡ ಭರವಸೆ ಇಟ್ಟುಕೊಂಡು ಅವಕಾಶ ನೀಡಿದ್ದಾರೆ. ಸಿನಿಮಾ ಮಂದಿರಕ್ಕೆ ಹೋಗಿ ವೀಕ್ಷಿಸಿ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದರು.
ಧಾರವಾಡದ ಸಾಂಸ್ಕೃತಿಕ ಲೋಕ ಆರ್ಟ್ಸ್ ಆ್ಯಂಡ್ ಕಲ್ಚರ್ ಅಕಾಡೆಮಿಯ ವಿದ್ಯಾರ್ಥಿಗಳೊಂದಿಗೆ ನಟ ವಿಕ್ರಮ ಹಾಗೂ ನಟಿ ಆಕಾಂಕ್ಷಾ ಶರ್ಮಾ ಅವರು ತ್ರಿವಿಕ್ರಮ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದರು. ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಹಾಗೂ ಇನ್ನಿತರರಿದ್ದರು.