ಅವನು ಮಧ್ಯಮ ಕುಟುಂಬದ ಹುಡುಗ ವಿಕ್ರಂ. ಮನೆಯ ಅಚ್ಚುಮೆಚ್ಚಿನ ಕೊನೆಯ ಮಗ. ಫ್ಯಾಮಿಲಿಗಾಗಿ ಏನು ಬೇಕಾದ್ರೂ ಮಾಡಬಲ್ಲ, ಎಂಥ ರಿಸ್ಕ್ಗಳನ್ನು ತೆಗೆದುಕೊಳ್ಳಲು ತಯಾರಿರುವ ವಿಕ್ರಂ ನೋಡುಗರ ಕಣ್ಣಿಗೆ ಖಡಕ್ ಲುಕ್‌ನ ಪಕ್ಕಾ ಮಾಸ್ ಹೀರೋ. ಇಂಥ ಡೇರಿಂಗ್ ನೇಚರ್ ಹುಡುಗನ ಕಣ್ಣಿಗೆ ಒಮ್ಮೆ ಅಪರೂಪದ, ಕೋಮಲ ಮನಸ್ಸಿನ ಹುಡುಗಿ ತ್ರಿಷಾ ಬೀಳುತ್ತಾಳೆ. ಮೊದಲ ನೋಟದಲ್ಲೆ ಮನ ಸೆಳೆಯುವ ಹುಡುಗಿ ಹಿಂದೆ ಬೀಳುವ ವಿಕ್ರಂ, ಅಲ್ಲಿಂದ ಅವಳನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಾನೆ. ಕೊನೆಗೂ ಈ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ. ಎಲ್ಲವೂ ಸರಿಯಾಯಿತು ಎನ್ನುವಾಗಲೇ ವಿಕ್ರಂ ಮತ್ತು ತ್ರಿಷಾ ಪ್ರೀತಿಯನ್ನು ದೂರ ಮಾಡುವಂಥ ಸನ್ನಿವೇಶವೊಂದು ಸೃಷ್ಟಿಯಾಗುತ್ತದೆ. ಸಲೀಸಾಗಿ ಸಾಗುತ್ತಿದ್ದ ಪ್ರೇಮಕಥೆಯಲ್ಲಿ ಬರುವ ಕೆಲವೊಂದು ತಿರುವುಗಳು ಇಬ್ಬರನ್ನೂ ಇನ್ನಷ್ಟು ದೂರ ಮಾಡುತ್ತದೆ. ಕೊನೆಗೂ ವಿಕ್ರಂ ತನ್ನ ಪ್ರೀತಿಯಲ್ಲಿ ಗೆದ್ದು “ತ್ರಿವಿಕ್ರಮ’ನಾಗುತ್ತಾನಾ ಅನ್ನೋದು ಕ್ಲೈಮ್ಯಾಕ್ಸ್. ಇದು ಈ ವಾರ ತೆರೆಗೆ ಬಂದಿರುವ “ತ್ರಿವಿಕ್ರಮ’ ಚಿತ್ರದ ಕಥಾಹಂದರ.
ಈಗಾಗಲೇ ಬಿಡುಗಡೆಯಾಗಿದ್ದ ಟ್ರೇಲರ್, ಸಾಂಗ್ಸ್ ಎಲ್ಲದರಲ್ಲೂ ಕಾಣುತ್ತಿದ್ದಂತೆ, “ತ್ರಿವಿಕ್ರಮ’ ಔಟ್ ಆ್ಯಂಡ್ ಔಟ್ ಲವ್ ಕಂ ಆ್ಯಕ್ಷನ್ ಕಥಾಹಂದರದ ಸಿನಿಮಾ. ಲವ್, ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಒಂದು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೆಲ್ಲ ಸಿದ್ಧ ಸೂತ್ರಗಳು ಇರಬೇಕೂ ಅದೆಲ್ಲವೂ “ತ್ರಿವಿಕ್ರಮ’ನಲ್ಲಿದೆ. ಅದರಲ್ಲೂ ಮೊದಲ ಬಾರಿಗೆ ನವ ನಟನೊಬ್ಬನನ್ನು ಹೀರೋ ಆಗಿ ತೆರೆಗೆ ಪರಿಚಯಿಸಲು ಒಂದು ಸಿನಿಮಾದಲ್ಲಿ ಏನೇನು ಮಾಸ್ ಕಂಟೆಂಟ್ ಇರಬೇಕೋ ಅದೆಲ್ಲವೂ “ತ್ರಿವಿಕ್ರಮ’ನಲ್ಲಿ ಹೇಳಿ ಮಾಡಿಸಿದಂತಿದೆ.
ಇದನ್ನೂ ಓದಿ:‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್
ಮೊದಲ ಚಿತ್ರದಲ್ಲೇ ವಿಕ್ರಂ ರವಿಚಂದ್ರನ್ ಮಧ್ಯಮ ಕುಟುಂಬದ ಹುಡುಗನಾಗಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲವರ್‌ಬಾಯ್ ಆಗಿ, ಆ್ಯಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ವಿಕ್ರಂ ಹಾಕಿರುವ ಪರಿಶ್ರಮ ತೆರೆಮೇಲೆ ಕಾಣುತ್ತದೆ. ಡೈಲಾಗ್ಸ್ ಡೆಲಿವರಿ ಮತ್ತು ಕಾಮಿಡಿ ಟೈಮಿಂಗ್ ಕಡೆಗೆ ಇನ್ನಷ್ಟು ಗಮನ ನೀಡಿದರೆ ವಿಕ್ರಂ ಭವಿಷ್ಯದಲ್ಲಿ ಮಾಸ್ ಹೀರೋ ಆಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷಣಗಳಿವೆ.
ಇನ್ನು ನಾಯಕಿ ಆಕಾಂಕ್ಷಾ ಶರ್ಮ ಕೂಡ ಗ್ಲಾಮರಸ್ ಮತ್ತು ಹೋಮ್ಲಿ ಲುಕ್ ಎರಡರಲ್ಲೂ ಇಷ್ಟವಾಗುತ್ತಾರೆ. ಉಳಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅದ್ಧೂರಿ ಲೊಕೇಶನ್, ಮೇಕಿಂಗ್ ತಾಂತ್ರಿಕವಾಗಿ ಸಿನಿಮಾವನ್ನು ತೆರೆಮೇಲೆ ರಿಚ್ ಆಗಿ ಕಾಣುವಂತೆ ಮಾಡಿದೆ. ಒಂದೆರಡು ಸಾಂಗ್ಸ್ ಥಿಯೇಟರ್ ಹೊರಗೂ ಗುನುಗುವಂತಿದೆ. ಒಟ್ಟಾರೆ ಪಕ್ಕಾ ಮಾಸ್ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗೆ “ತ್ರಿವಿಕ್ರಮ’ ವಾರಾಂತ್ಯದಲ್ಲಿ ಒಳ್ಳೆಯ ಎಂಟರ್ ಟೈನ್ಮೆಂಟ್ ಕೊಡಬಲ್ಲ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್