ಕೊರಟಗೆರೆ: ಕ್ಷುಲ್ಲಕ ಕಾರಣಕ್ಕೆ ಕಾರಿನವರು ಹಾರನ್ ಹೊಡೆದರು ಎಂದು ಅಡ್ಡ ಗಟ್ಟಿ ದ್ವಿಚಕ್ರ ವಾಹನ ಸವಾರರಿಬ್ಬರು ವ್ಯಕ್ತಿಗೆ ಚಾಕುವಿನಿಂದ ಮನಸೋ ಇಚ್ಚೆ ಇರಿದಿರುವ ಘಟನೆಯೊಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಬೈರೇನಹಳ್ಳಿ ಬಳಿ ಭಾನುವಾರ ಸಂಜೆ 7 ಗಂಟೆ ವೇಳೆ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದ್ದು, ಕೊರಟಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿನ ಸವಾರರಿಗೆ ಹಾರನ್ ಹೊಡೆದರು ಎಂಬ ಕಾರಣಕ್ಕೆ ದ್ವಿಚಕ್ರ ವಾಹನದ ಇಬ್ಬರು ಯುವಕರು ಕಾರನ್ನು ಅಡ್ಡಗಟ್ಟಿ ಮನಸೋ ಇಚ್ಚೆ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಮೂಲದ ಅಮೃತಹಳ್ಳಿಯ ನಾಲ್ಕು ಜನ ತನ್ನ ಅಕ್ಕನ ಮನೆಗೆ ಬಂದು ಕೊರಟಗೆರೆ ತಾಲೂಕಿನ ಬಿದಲೋಟಿ ಗ್ರಾಮದಿಂದ ಬೆಂಗಳೂರಿನ ಕಡೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಬೈರೇನಹಳ್ಳಿ ಕ್ರಾಸ್ ನಲ್ಲಿ ಇಬ್ಬರು ಕಾರಿನ ಮುಂದೆ ಹೋಗುತ್ತಿರುವಾಗ ಕಾರಿಗೆ ಎರಡು ಮೂರು ಬಾರಿ ಅಡ್ಡ ಬಂದ ಕಾರಣ ಕಾರಿನವರು ಎರಡು ಮೂರು ಬಾರಿ ಹಾರನ್ ಹೊಡೆದ ಕಾರಣಕ್ಕೆ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ತಾಲೂಕಿನ ಬಿದಲೋಟಿ ಗ್ರಾಮದ ಅಕ್ಕನ ಮನೆಗೆ ಬಂದಿದ್ದ ಮಾಲಿಂಗಯ್ಯ ಹಾಗೂ ಅವರ ಅಣ್ಣ ತಮ್ಮಂದಿರಾದ ಮಂಜುನಾಥ್, ಹೇಮಂತ್, ಯೋಗೇಶ್ ವಾಪಸ್ ಬೆಂಗಳೂರಿಗೆ ಹೋಗುತ್ತಿರುವಾಗ ಬೈರೇನಹಳ್ಳಿ ಬಳಿ ಈ ಘಟನೆ ಜರಗಿದ್ದು, ಬೈರೇನಹಳ್ಳಿ ಕ್ರಾಸ್‌ನ ಬಳಿ ಕಾರಿನ ಸವಾರ ಹೇಮಂತ್ ಮೇಲೆ ಎರಡು ಮೂರು ಬಾರಿ ಚಾಕುವಿನಿಂದ ಕುತ್ತಿಗೆ, ಎದೆ,ಭುಜಕ್ಕೆ ಇರಿಯಲಾಗಿದ್ದು, ಹೇಮಂತ್ ತೀವ್ರ ರಕ್ತಸ್ರಾವದಿಂದ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ತಾಳ್ಮೆ ಕಳೆದುಕೊಂಡು ಚಾಕುವಿನಲ್ಲಿ ಮನಸೋ ಇಚ್ಚೆ ಇರಿಯುತ್ತಾರೆ ಎನ್ನುವುದಾದರೆ ನಾಗರಿಕ ಸಮಾಜದಲ್ಲಿ ಮುಂದಿನ ದಿನದಲ್ಲಿ ಜನ ಯಾವ ರೀತಿ ಬದುಕಬೇಕು ಸಣ್ಣಪುಟ್ಟ ವಿಚಾರಗಳು ಮನುಷ್ಯನ ಪ್ರಾಣಕ್ಕೆ ಕುತ್ತು ತರುತ್ತದೆ ಎಂದರೆ ಗತಿ ಯಾರು ಎಂಬುದೇ ಕೆಲವು ಸ್ಥಳೀಯ ನಾಗರಿಕರ ಆತಂಕವಾಗಿದೆ.
ಗಾಯಾಳು ಕುರಿತು ಆಸ್ಪತ್ರೆಯ ಮಾಹಿತಿಯ ಮೇರೆಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ಕಲೆಹಾಕಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.