ಬಳ್ಳಾರಿ: ಮಹಾನಗರ ಪಾಲಿಕೆಯ 22 ನೇ ಅವಧಿಯ ನೂತನ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 4 ನೇ ವಾರ್ಡ್ ನ ಡಿ.ತ್ರಿವೇಣಿ, ಉಪ ಮೇಯರ್ ಆಗಿ 33 ನೇ ವಾರ್ಡ್ ನ ಬಿ.ಜಾನಕಿ ಆಯ್ಕೆಯಾಗಿದ್ದಾರೆ.
ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ(ಸಾಮಾನ್ಯ) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 4 ನೇ ವಾರ್ಡ್ ನ ಡಿ.ತ್ರಿವೇಣಿ, 7 ನೇ ವಾರ್ಡ್ ನ ಉಮಾದೇವಿ ಶಿವರಾಜ್, 38 ನೇ ವಾರ್ಡ್ ನ ಕುಬೇರ ಮತ್ತು 16 ನೇ ವಾರ್ಡ್ ಬಿಜೆಪಿ ಸದಸ್ಯೆ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್‌ನ ವಿ.ಕುಬೇರ, ಉಮಾದೇವಿ ಶಿವರಾಜ್ ನಾಮಪತ್ರ ಹಿಂಪಡೆದರು. ಬಳಿಕ ಕಾಂಗ್ರೆಸ್ ಡಿ.ತ್ರಿವೇಣಿ, ಬಿಜೆಪಿಯ ನಾಗರತ್ನಮ್ಮ ನಡುವೆ ಚುನಾವಣೆ ನಡೆಯಿತು.39 ಪಾಲಿಕೆ ಸದಸ್ಯರು, ಇಬ್ಬರು ಸಂಸದರು, ಮೂವರು ಶಾಸಕರು ಸೇರಿ ಒಟ್ಟು 44 ಮತಗಳ ಪೈಕಿ ಡಿ.ತ್ರಿವೇಣಿ ಅವರ ಪರವಾಗಿ 28 , ವಿರೋಧವಾಗಿ 16 ಮತಗಳು ಬಿದ್ದಿದ್ದವು. ಅದೇ ರೀತಿ ಬಿಜೆಪಿಯ ನಾಗರತ್ನಮ್ಮರ ಪರವಾಗಿ 16, ವಿರುದ್ಧವಾಗಿ 28 ಮತಗಳು ಬಿದ್ದಿದ್ದ ಹಿನ್ನೆಲೆಯಲ್ಲಿ ಅತಿಹೆಚ್ಚು ಮತಗಳನ್ನು ಗಳಿಸಿದ್ದ ನಾಲ್ಕನೇ ವಾರ್ಡ್ ನ ತ್ರಿವೇಣಿ ಡಿ.ಸೂರಿ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪಾಯ್ ಘೋಷಿಸಿದರು.
ಇನ್ನು ಉಪಮೇಯರ್ ಸ್ಥಾನಕ್ಕೆ 33 ನೇ ವಾರ್ಡ್ ಸದಸ್ಯೆ ಬಿ.ಜಾನಕಮ್ಮ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಮೇಯರ್ ತ್ರಿವೇಣಿ ಡಿ.ಸೂರಿ, ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ತುಂಬ ಖುಷಿಯಾಗಿದೆ. 21 ನೇ ವಯಸ್ಸಿಗೆ ಪಾಲಿಕೆ ಸದಸ್ಯೆಯಾಗಿದ್ದ ನಾನು ಇದೀಗ 23 ನೇ ವಯಸ್ಸಿಗೆ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದೇನೆ. ನನ್ನೆಲ್ಲ ಕನಸುಗಳು ನನ್ನ ತಂದೆ ಈಡೇರಿಸಿದ್ದಾರೆ. ಆರೋಗ್ಯ ನಿರೀಕ್ಷಕರ ಕೋರ್ಸ್ ವ್ಯಾಸಂಗ ಮಾಡಿದ್ದೇನೆ. ಪಾಲಿಕೆಯ ಎಲ್ಲ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಅವರೊಂದಿಗೆ ಸೇರಿ ಕೆಲಸ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.