Advertisement

ಮೃಗಾಲಯದ ಎದುರು ರಸ್ತೆಗೆ ಬಂದ ತ್ರಿಡಿ ಹುಲಿರಾಯ!

11:43 AM Jul 30, 2017 | Team Udayavani |

ಮೈಸೂರು: ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಶನಿವಾರ ಅಚ್ಚರಿಯೊಂದು ಕಾದಿತ್ತು. ಬೋನಿನೊಳಗೆ ಸೆರೆಯಾಗಬೇಕಿದ್ದ ಹುಲಿಯೊಂದು ಮೃಗಾಲಯದ ಎದುರಿನ ರಸ್ತೆಯಲ್ಲೇ ಪ್ರತ್ಯಕ್ಷವಾಗುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿತು.

Advertisement

ಅರೇ ಇದೇನಪ್ಪ ಮೃಗಾಲಯದ ಹುಲಿ ಏನಾದರೂ ತಪ್ಪಿಸಿಕೊಂಡು ಹೊರಬಂತೇ? ಎಂದು ಗಾಬರಿಯಾಗಬೇಡಿ, ಇದು ಕಲಾವಿದನ ಕೈಯಲ್ಲಿ ಅರಳಿದ 3ಡಿ ಹುಲಿ ಚಿತ್ರ. ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಗರದ ಚಾಮರಾಜೇಂದ್ರ ಮೃಗಾಲಯದ ಮುಂಭಾಗ ಹುಲಿ ಪ್ರೇಮಿಗಳು ಹುಲಿಯ ತ್ರೀಡಿ ಚಿತ್ರ ಬಿಡಿಸುವ ಮೂಲಕ ಹುಲಿ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇವರ ಈ ಪ್ರಯತ್ನಕ್ಕೆ ಗೆಳೆಯರಾದ ಶಿವರಂಜನ್‌ ಹಾಗೂ ವಸಂತ್‌ ಕೈಜೋಡಿಸಿದರು.

ನೋಡುಗರಿಂದ ಮೆಚ್ಚುಗೆ: ಹುಲಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಂಜನಗೂಡಿನ ಅನಿಲ್‌ಕುಮಾರ್‌ ಬೋಗಶೆಟ್ಟಿ ಹಾಗೂ ಗೆಳೆಯರು 3ಡಿ ಹುಲಿ ಚಿತ್ರವನ್ನು ಬಿಡಿಸುವ ಮೂಲಕ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

3ಡಿ ಹುಲಿಯ ಚಿತ್ರವನ್ನು ಬಿಡಿಸುವ ಸಲುವಾಗಿ ಸತತ 2 ದಿನಗಳ ಪರಿಶ್ರಮ ಹಾಕಿರುವ ಕಲಾವಿದ ಅನಿಲ್‌ ಮತ್ತು ಗೆಳೆಯರ ಈ ವಿಭಿನ್ನ ಪ್ರಯತ್ನಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಯಿತು. ಮೃಗಾಲಯದ ಮುಂಭಾಗ ರಚಿಸಿರುವ 20 ಅಡಿ ಎತ್ತರ ಹಾಗೂ 19 ಅಡಿ ಹಗಲದ ತ್ರೀಡಿ ಹುಲಿ ಚಿತ್ರವನ್ನು ವೀಕ್ಷಿಸಿದ ಮಕ್ಕಳು, ದೊಡ್ಡವರು ಸಹ ಅದರ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುವ ಮೂಲಕ ಖುಷಿಪಟ್ಟರು.

ಕಲಾವಿದನ ಪರಿಚಯ: ಮೈಸೂರಿನ ಕಾವಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಅನಿಲ್‌ಕುಮಾರ್‌ ಬೋಗಶೆಟ್ಟಿ, ವಿಶೇಷ ಅನಾಮಾರ್ಫಿಕ್‌ ಆರ್ಟ್‌ ಪೇಂಟಿಂಗ್‌ನಲ್ಲಿ ಪರಿಣಿತಿ ಹೊಂದಿದ್ದಾರೆ. ಈ ಹಿಂದೆ ಮೈಸೂರು ಮೃಗಾಲಯದ ಗೊರಿಲ್ಲಾ(ಪೋಲೋ) ಮೃತಪಟ್ಟ ವೇಳೆ ಮೃಗಾಲಯದ ಒಳ ಆವರಣದಲ್ಲಿ ಬಿಡಿಸಿದ್ದ ಪೋಲೋವಿನ ತ್ರೀಡಿ ಪೇಂಟಿಂಗ್‌ ಎಲ್ಲರನ್ನು ಆಕರ್ಷಿಸಿತ್ತು.

Advertisement

ಇದಲ್ಲದೆ ಎರಡು ವರ್ಷದ ಹಿಂದೆ ಕೆಪಿಎಲ್‌ ಪಂದ್ಯಾವಳಿ ಸಂದಭ‌ದಲ್ಲಿ ಅನಾಮಾರ್ಫಿಕ್‌ ಆರ್ಟ್‌ ಪೇಂಟಿಂಗ್‌ನಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಚಿತ್ರವನ್ನು ರಚಿಸುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಹುಲಿಗಳ ಬಗ್ಗೆ ವಿಶೇಷ ಪ್ರೀತಿಯೊಂದಿರುವ ಕಲಾವಿದ ಅನಿಲ್‌, ಕಳೆದ ವರ್ಷ ಹುಲಿ ದಿನಾಚರಣೆಯಂದು ಬಂಡೀಪುರದ ಮುಖ್ಯದ್ವಾರದಲ್ಲಿ ಹುಲಿಯ 3ಡಿ ಚಿತ್ರವನ್ನು ಬಿಡಿಸಿದ್ದರು.

ಹುಲಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಲಿ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಹುಲಿಯ ತ್ರೀಡಿ ಪೇಂಟಿಂಗ್‌ ಮಾಡುವ ಮೂಲಕ ಹುಲಿ ಸಂರಕ್ಷಣೆಯ ಬಗ್ಗೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
-ಅನಿಲ್‌ಕುಮಾರ್‌, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next