Advertisement

ಚಂದ್ರನಂಗಳಕ್ಕೆ ಲಗ್ಗೆಯಿಟ್ಟ ತ್ರಿಪುರಾಸುರರು

06:17 PM Sep 12, 2019 | mahesh |

ಅಂತರಿಕ್ಷ ವಿಜ್ಞಾನಿಗಳ ಪರಿಶ್ರಮದಿಂದ ಇಸ್ರೋದ ಚಂದ್ರಯಾನ ಜಗತ್ತಿನ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾರಕಾಕ್ಷ ಸಹೋದರರು ಯಾರಿಂದಲೂ ಪ್ರವೇಶ ಸಾಧ್ಯವಾಗದ ಚಂದ್ರಲೋಕಕ್ಕೆ ಲಗ್ಗೆ ಇಟ್ಟು ಚಂದ್ರನನ್ನು ಅಟ್ಟಿಸಿಕೊಂಡು ಹೋದ ಪ್ರಸಂಗ
ವೀಕ್ಷಿಸಲು ಮುದ ನೀಡಿತು.

Advertisement

ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರು “ತ್ರಿಪುರ ಮಥನ’ ಯಕ್ಷಗಾನ ಪ್ರಸ್ತುತಪಡಿಸಿದರು. ಜಾತಸ್ಯ ಮರಣಂ ಧ್ರುವಂ ಅರ್ಥಾತ್‌ ಹುಟ್ಟಿದ ಪ್ರತಿಯೊಬ್ಬನೂ ಸಾಯಲೇ ಬೇಕು ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ತಾರಕಾಸುರನ ಮಕ್ಕಳಾದ ತಾರಕಾಕ್ಷ, ತಾಮ್ರಾಕ್ಷ ಮತ್ತು ವಿದ್ಯುನ್ಮಾಲಿ ತಮ್ಮ ತಪಸ್ಸಿಗೆ ಒಲಿದು ಬಂದ ಬ್ರಹ್ಮನಿಂದ ಅಜೇಯರಾಗಿಯೂ, ಅಮರರಾಗಿಯೂ ಇರಲು ಒಂದು ವಿಶೇಷ ವರದಾನವನ್ನು ಬಯಸುತ್ತಾರೆ. ಕೇವಲ ಒಂದೇ ಒಂದು ಬಾಣದಿಂದ ಮಾತ್ರ ನಿರ್ನಾಮವಾಗಬಹುದಾದ, ಅಷ್ಟೇ ಅಲ್ಲದೆ ಕೇವಲ ಸಾವಿರ ವರ್ಷಕ್ಕೊಮ್ಮೆ ಒಂದು ಸರಳ ರೇಖೆಯಲ್ಲಿ ಬರಬಹುದಾದ ಸದಾ ಚಲಿಸುವ, ತೇಲಾಡುವ ಮೂರು ನಗರಗಳ ವರದಾನವನ್ನು ಪಡೆದು ತಾವಿನ್ನು ಅಮರರು ಎಂದು ಬೀಗುತ್ತಾರೆ. ಬ್ರಹ್ಮನ ವರದಾನದ ಬಲದಿಂದ ಸಕಲ ಭೋಗ-ಭಾಗ್ಯಗಳನ್ನು ಪಡೆದು, ಲೋಕಕಂಟಕರಾಗಿ ಮೆರೆಯುತ್ತಿದ್ದ ಅಹಂಕಾರಿಗಳಾದ ತಾರಕಾಕ್ಷ ಸಹೋದರರ ಉಪಟಳ ಎಲ್ಲೆ ಮೀರಿದಾಗ ದೇವಾಧಿದೇವತೆಗಳ ಕೋರಿಕೆಯನ್ನು ಮನ್ನಿಸಿ ಪರಶಿವನು ತ್ರಿಪುರಾಸುರರನ್ನು ಸಂಹರಿಸುವ “ತ್ರಿಪುರ ಮಥನ’ ರಂಜಿಸಿತು.

ಅಂತರಿಕ್ಷ ವಿಜ್ಞಾನಿಗಳ ಪರಿಶ್ರಮದಿಂದ ಇಸ್ರೋದ ಚಂದ್ರಯಾನ ಜಗತ್ತಿನ ಗಮನ ಸೆಳೆಯುತ್ತಿರುವ ಹೊತ್ತಿನಲ್ಲಿ, ಸಾವಿರಾರು ವರ್ಷಗಳ ಹಿಂದೆ ತಾರಕಾಕ್ಷ ಸಹೋದರರು ಯಾರಿಂದಲೂ ಪ್ರವೇಶ ಸಾಧ್ಯವಾಗದ ಚಂದ್ರಲೋಕಕ್ಕೆ ಲಗ್ಗೆ ಇಟ್ಟು ಚಂದ್ರನನ್ನು ಅಟ್ಟಿಸಿಕೊಂಡು ಹೋದ ಪ್ರಸಂಗ ವೀಕ್ಷಿಸಲು ಮುದ ನೀಡಿತು. ವಿಹಾರಾರ್ಥವಾಗಿ ಸ್ತ್ರೀ ವೇಷತಳೆದು ಸಂಚರಿಸುತ್ತಿದ್ದ ಸರಸ್ವತಿ ನದಿಯ ಸೌಂದರ್ಯಕ್ಕೆ ಮಾರು ಹೋದ ತಾಮ್ರಾಕ್ಷ (ಅಮ್ಮುಂಜೆ ಮೋಹನ್‌) ಆಕೆಯನ್ನು ಮದುವೆಯಾಗುವಂತೆ ಕಾಡುವ-ಪೀಡಿಸುವ, ಮೋಹಕ ಭಾವ-ಭಂಗಿ, ಮಾತುಗಾರಿಕೆ ಮನಗೆದ್ದಿತು. ವಾಸ್ತವದಲ್ಲಿ ಆಕೆ ಸ್ತ್ರೀಯಲ್ಲ ನದಿ ಎಂದು ತಿಳಿದು ತಮ್ಮ ಪುರಕ್ಕೆ ಬಾ ಎಂದು ನದಿ ತಿರುವು ಯೋಜನೆಯ ಪ್ರಸ್ತಾವ ಇಡುವ ರೋಚಕ ಸನ್ನಿವೇಶ ನಕ್ಕುನಗಿಸಿತು.

ಯುದ್ಧದಲ್ಲಿ ಗೆದ್ದ ತಾರಕಾಕ್ಷನ (ನಿಡ್ಲೆ ಗೋವಿಂದ ಭಟ್‌) ಪರಾಜಿತ ಇಂದ್ರನ ಪಟ್ಟದರಸಿ ಶಚಿಯನ್ನು ಹೊಂದುವ ಬಯಕೆ, ಅದಕ್ಕೆ ಆತನ ಪತ್ನಿಯಿಂದ ಎದುರಾದ ಪ್ರತಿರೋಧ, ಶಚಿಯ ಧರ್ಮ ಪಾರಾಯಣತೆ ಮತ್ತು ಹಿತೋಪದೇಶಗಳು, ಇಂದ್ರನ ಅಸಹಾಯಕತೆ ಚೆನ್ನಾಗಿ ಮೂಡಿಬಂತು. ಸರ್ವಾಲಂಕಾರ ಭೂಷಿತೆ, ಸೌಂದರ್ಯವತಿ ಶಚಿಯ ಘನಗಾಂಭೀರ್ಯದ ನಡೆನುಡಿ ಗಮನಸೆಳೆಯುವಂತಿತ್ತು. ತಾರಕಾಸುರನ ಪತ್ನಿಯ (ಕೆದಿಲೆ ಜಯರಾಮ ಭಟ್‌) ಒನಪು-ಒಯ್ನಾರಗಳು, ಮಾತಿನ ಓಘ ಮನಸೆಳೆಯಿತು. ನಶ್ವರ ಬದುಕಿನ ವಾಸ್ತವನ್ನರಿಯದ ಮನುಷ್ಯ ಅಹಂಕಾರಿಯೂ, ಮತಿಹೀನನೂ ಆಗಿ ತಾಮಸ ಪೃವೃತ್ತಿ ರೂಢಿಸಿಕೊಂಡು ಬದುಕನ್ನು ವ್ಯರ್ಥಮಾಡಿಕೊಳ್ಳುವ ಕುರಿತು ಎಚ್ಚರಿಸುವ ಪ್ರಸಂಗ ಪಾವನ ಪರ್ವವಾದ ಗಣೇಶ ಚತುರ್ಥಿಯ ಸಂದರ್ಭಕ್ಕೆ ಪ್ರಾಸಂಗಿಕವಾಗಿತ್ತು. ಭಾಗವತರ ಲಯಬದ್ಧ ಹಾಡುಗಾರಿಕೆ ಮತ್ತವರ ತಂಡದ ಪರಿಶ್ರಮ ಪ್ರಸಂಗದ ಯಶಸ್ಸಿಗೆ ಪೂರಕವಾದವು.

ಬೈಂದೂರು ಚಂದ್ರಶೇಖರ ನಾವಡ

Advertisement
Advertisement

Udayavani is now on Telegram. Click here to join our channel and stay updated with the latest news.

Next