ಗುವಾಹಟಿ: ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತ್ರಿಪುರಾದಲ್ಲಿ ಮಾಜಿ ಶಾಸಕ ಅಶಿಸ್ ದಾಸ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮೂಲಕ ಟಿಎಂಸಿಗೆ ಭಾರೀ ಹಿನ್ನಡೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಮತಾಂಧ ಬಾಬರ್ ಮೂಲ ಹಾಗೂ ಇಂದಿರಾ ಗಾಂಧಿ ಮೂಲ ಒಂದೇ ಆಗಿದೆಯೇ: ಸಿದ್ದರಾಮಯ್ಯಗೆ BJP ತಿರುಗೇಟು
ಕಳೆದ ವರ್ಷ ಪರಿಶಿಷ್ಟ ಜಾತಿ ಸಮುದಾಯದ ಮುಖಂಡ ಅಶಿಸ್ ದಾಸ್ ಭಾರತೀಯ ಜನತಾ ಪಕ್ಷವನ್ನು ತೊರೆದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರ್ಪಡೆಗೊಂಡಿದ್ದರು.
ಪಕ್ಷದೊಳಗೆ ಆಂತರಿಕ ಗುಂಪುಗಾರಿಕೆ ಹೆಚ್ಚಾಗಿದ್ದು, ಟಿಎಂಸಿ ಪಕ್ಷ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದಾಸ್ ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡುವ ಮೂಲಕ ದೇಶದ ಇತರ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿ, ಪಶ್ಚಿಮಬಂಗಾಳದಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳಲು ಬಯಸುತ್ತಿದೆ ಎಂದು ದಾಸ್ ದೂರಿದ್ದಾರೆ.
ತೃಣಮೂಲ ಕಾಂಗ್ರೆಸ್ ನಿಂದ ದಾಸ್ ಹೊರಬಂದ ಎರಡು ದಿನಗಳ ನಂತರ ಚುನಾವಣಾ ಆಯೋಗ ತ್ರಿಪುರಾದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಘೋಷಿಸಿದೆ. ಇದರಲ್ಲಿ ದಾಸ್ ಅವರ ಸುರ್ಮಾ ಕ್ಷೇತ್ರವೂ ಸೇರಿದೆ.
ಕಳೆದ ವರ್ಷ ದಾಸ್ ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್ ಗೆ ಪಕ್ಷಾಂತರಗೊಂಡಿದ್ದು, ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಮೂಲಕ ಸುರ್ಮಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲು ದಾರಿ ಮಾಡಿಕೊಟ್ಟಂತಾಗಿತ್ತು.
ಜೂನ್ 23ರಂದು 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಇದು ತ್ರಿಪುರಾ ರಾಜಕೀಯ ಜಿದ್ದಾಜಿದ್ದಿಯ ಸೆಮಿ ಫೈನಲ್ ಆಗಿದ್ದು, 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.