Advertisement

ತ್ರಿವಳಿ ತಲಾಖ್‌ ನಿಷೇಧಕ್ಕೆ ಅಧ್ಯಾದೇಶ

06:00 AM Sep 20, 2018 | Team Udayavani |

ಹೊಸದಿಲ್ಲಿ/ಹೈದರಾಬಾದ್‌: ಮುಸ್ಲಿಂ ಮಹಿಳೆಯರಿಗೆ ಮೂರು ಬಾರಿ ತಲಾಖ್‌ ಹೇಳಿ ವಿವಾಹ ವಿಚ್ಛೇದನ ನೀಡುವುದನ್ನು ತಡೆಯುವ ಅಧ್ಯಾದೇಶಕ್ಕೆ ಕೇಂದ್ರ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ. ಈ ಸಂಬಂಧದ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದರೂ ರಾಜ್ಯ ಸಭೆಯಲ್ಲಿ ಪಾಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರ ಅಧ್ಯಾದೇಶ ಮೂಲಕ ಜಾರಿಗೆ ತರಲು ಮುಂದಾಗಿದೆ.

Advertisement

 ಮಸೂದೆ ಬೆಂಬಲಿಸಿ ಎಂದು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಹಾಗೆಯೇ ಬಿಎಸ್‌ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿಯವರೂ ಸದ್ಯ ರಾಜ್ಯಸಭೆಯಲ್ಲಿರುವ ಮಸೂದೆ ಅಂಗೀಕಾರವಾಗುವಂತೆ ಬೆಂಬಲಿಸ‌ ಬೇಕು ಎಂದು ಸಚಿವ ಪ್ರಸಾದ್‌ ಮನವಿ ಮಾಡಿದ್ದಾರೆ. ಮಸೂದೆ ಅಂಗೀಕಾರಕ್ಕಾಗಿ 5-6 ಬಾರಿ ಕಾಂಗ್ರೆಸ್‌ ನಾಯಕರನ್ನು ಸಂಪರ್ಕಿಸಿದರೂ ಫ‌ಲ ಸಿಗಲಿಲ್ಲ. ತ್ರಿವಳಿ ತಲಾಖ್‌ಗೆ 22 ದೇಶಗಳಲ್ಲಿ ನಿಷೇಧ ಹೇರಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಅದನ್ನು ವೋಟ್‌ ಬ್ಯಾಂಕ್‌ ಆಗಿ ನೋಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನ ಮೂರು ಮಹತ್ವದ ಬದಲಾವಣೆಗಳನ್ನು ಕೇಂದ್ರ ಸರಕಾರ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕು ರಕ್ಷಣಾ ಮಸೂದೆಯಲ್ಲಿ ತಂದಿತ್ತು. ಮಹಿಳೆ ಅಥವಾ ಪತಿ ಮೂರು ಬಾರಿ ತಲಾಖ್‌ ಹೇಳಿದ್ದಕ್ಕೆ ಪೊಲೀಸರಿಗೆ ದೂರು ನೀಡಲು ಅವಕಾಶ ಕಲ್ಪಿಸ ಲಾಗಿದೆ. ತಲಾಖ್‌ ಹೇಳಿದ ಬಳಿಕ ಪತಿ ರಾಜಿ ಮಾಡಿ ಕೊಂಡು ಸಂಸಾರ ಮುಂದುವರಿಸಲು ಇಚ್ಛಿಸಿದಲ್ಲಿ ದೂರು ಹಿಂಪಡೆಯುವ ಅವಕಾಶ ನೀಡಲಾಗಿತ್ತು.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು
ಕಳೆದ ವರ್ಷದ ಆ.22ರಂದು ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ಐವರು ಸದಸ್ಯರ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ತೀರ್ಪು ನೀಡಿತ್ತು. ತಲಾಖ್‌ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿಲ್ಲ ಎಂದು ತೀರ್ಪಿನಲ್ಲಿ ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಅಧ್ಯಾದೇಶದ ಅಂಶಗಳೇನು?
ಮೂರು ಬಾರಿ ತಲಾಖ್‌ ಹೇಳಿದರೆ ದಂಡ ಸಹಿತ 3 ವರ್ಷಗಳ ಜೈಲು ಶಿಕ್ಷೆ.
ಪತ್ನಿ ಅಥವಾ ಆಕೆಯ ನಿಕಟ ಸಂಬಂಧಿ ಪೊಲೀಸರಿಗೆ ದೂರು ನೀಡಿದಾಗ ಮಾತ್ರ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ತಲಾಖ್‌ ಹೇಳಿದ ಬಳಿಕ ಪತಿ ರಾಜಿಗೆ ಬಂದರೂ ಪತ್ನಿ ಮ್ಯಾಜಿಸ್ಟ್ರೇಟ್‌ ಬಳಿ ಅದಕ್ಕೆ ಸಮ್ಮತಿ ಸೂಚಿಸಬೇಕು. ಪತ್ನಿ ಒಪ್ಪಿದರೆ ಮಾತ್ರ ಬಂಧನಕ್ಕೆ ಒಳಗಾಗಿರುವ ಪತಿಗೆ ಮ್ಯಾಜಿಸ್ಟ್ರೇಟ್‌ ಜಾಮೀನು ನೀಡಬಹುದು.
ಮಕ್ಕಳ ಮೇಲಿನ ಹಕ್ಕು ಮಹಿಳೆಗೆ ಇರುತ್ತದೆ.
ಮ್ಯಾಜಿಸ್ಟ್ರೇಟ್‌ ನಿರ್ಧಾರ ಮಾಡುವ ಜೀವನಾಂಶವನ್ನು ಪಾವತಿ ಮಾಡಬೇಕು.

Advertisement

ಕೇಂದ್ರ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾದದ್ದು. ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿರುವ ಈ ಪದ್ಧತಿ ನಿಲ್ಲಲಿ.
– ಇಶ್ರತ್‌ ಜಹಾನ್‌, ಸುಪ್ರೀಂಕೋರ್ಟಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆ
 

Advertisement

Udayavani is now on Telegram. Click here to join our channel and stay updated with the latest news.

Next