ಹೈದರಾಬಾದ್: ‘2015ರಲ್ಲಿ ನನ್ನನ್ನು ಮದುವೆಯಾಗಿದ್ದ ಪತಿ ಓವೇಸ್ ತಾಲಿಬ್ ನನಗೆ ವಾಟ್ಸಾಪ್ ಮೂಲಕ ಕಳೆದ ವರ್ಷ ನವೆಂಬರ್ 28ರಂದು “ತಲಾಕ್, ತಲಾಕ್, ತಲಾಕ್’ ಎಂಬ ಸಂದೇಶವನ್ನು ಕಳುಹಿಸಿ ನಮ್ಮೊಳಗಿನ ಮದುವೆಯು ಕೊನೆಗೊಂಡಿರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾನೆ’ ಎಂದು ಹೈದರಾಬಾದಿನ ಮುಸ್ಲಿಂ ಮಹಿಳೆ ಸುಮೈನಾ ಶಫೀ ಎಂಬಾಕೆ ಇಲ್ಲಿನ ಸನತ್‌ನಗರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಅಂತೆಯೇ ಪೊಲೀಸರು ಕಳೆದ ಮಾರ್ಚ್ 16ರಂದು ಐಪಿಸಿ ಸೆಕ್ಷನ್ 420, 406, ಸೆ.34ರೊಂದಿಗೆ ಓದಲ್ಪಡಬೇಕಾದ ಸೆ. 506ರ ಪ್ರಕಾರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸುಮೈನಾ ಪೊಲೀಸರಿಗೆ ಕೊಟ್ಟಿರುವ ತನ್ನ ದೂರಿನಲ್ಲಿ ಹೀಗೆ ಹೇಳಿದ್ದಾಳೆ :
“ನನ್ನ ಮದುವೆಯ ಬಳಿಕ ನನ್ನ ಗಂಡನ ರಕ್ಷಕರಾದ ಅಮ್ಮಾ ಜಾನ್ ಅವರು ದರ್ಬಾರ್‌ನಲ್ಲಿ ಮಾಟ ಮಂತ್ರದಲ್ಲಿ ತೊಡಗಿ ಕೊಂಡಿದ್ದುದು ನನಗೆ ಗೊತ್ತಾಯಿತು. ನಾವು ಪತಿ – ಪತ್ನಿ ಒಂದು ತಿಂಗಳು ದುಬೈನಲ್ಲಿ ವಾಸವಾಗಿದ್ದೆವು. ಅಲ್ಲಿಂದ ನಾವು ಮರಳಿದ ಬಳಿಕ, ನನ್ನ ಗಂಡನ ರಕ್ಷಕರಾದ ಅಮ್ಮಾ ಜಾನ್ ನನ್ನನ್ನು ಕೆಲಸದವಳಂತೆ ದುಡಿಸಿಕೊಂಡು ನನಗೆ, ಅನ್ನ, ನೀರು, ಆಹಾರ ಇತ್ಯಾದಿ ಯಾವುದನ್ನೂ ಕೊಡದೆ ಹಿಂಸಿಸಿದರು’
“ಅಮ್ಮಾ ಜಾನ್ ತನ್ನ ಎರಡನೇ ಪತಿಯೊಂದಿಗಿನ ತನ್ನ ಸಂಬಂಧವನ್ನು ಉಳಿಸಿಕೊಳ್ಳಲು ನನ್ನನ್ನು ಆತನ ಬಾಡಿಗೆ ಹೆಂಡತಿಯಂತೆ ಬಲಂತದ ಸೆಕ್ಸ್‌ಗಾಗಿ ದುಡಿಸಿಕೊಂಡರು. ಇದಕ್ಕೆ ನನ್ನ ಪತಿ ಕೂಡ ಆಕ್ಷೇಪ ಮಾಡಲಿಲ್ಲ. ನಾನು ಇದಕ್ಕೆ ನಿರಾಕರಿಸಿದಾಗ ಅವರು ನನ್ನ ದೇಹಕ್ಕೆ ಬಲವಂತದಿಂದ ಬೆಂಕಿಯ ಕೊಳ್ಳಿ ಇಟ್ಟರು ಮತ್ತು ಕೋಣೆಯೊಂದರಲ್ಲಿ ನನ್ನನ್ನು ಆರು ದಿನಗಳ ಕಾಲ ಅನ್ನ ಆಹಾರ ನೀಡದೆ ಚಿತ್ರಹಿಂಸೆ ನೀಡಿದರು. ಈ ವಿಷಯ ನನ್ನ ತಂದೆಗೆ ಗೊತ್ತಾಗಿ ಅವರು ಬಂದು ನನ್ನನ್ನು ಕಾಪಾಡಿ ತಮ್ಮ ಮನೆಗೆ ಒಯ್ದರು’
“ಅದಾಗಿ ನಾನು ನನ್ನ ಗಂಡನೊಡನೆ ಮಾತಾಡಿಸಿ ನಮ್ಮ ಸಮಸ್ಯೆ ಬಗೆಹರಿಸುವುದಕ್ಕಾಗಿ ಹಲವು ಬಾರಿ ಪ್ರಯತ್ನಿಸಿದೆ. ಹಲವು ಬಾರಿ ಕರೆ ಮಾಡಿದೆ. ಆತ ನನ್ನ ಯಾವ ಕರೆಯನ್ನೂ ಸ್ವೀಕರಿಸಲಿಲ್ಲ. ಕೊನೆಗೆ ನನಗೆ ವಾಟ್ಸಾಪ್‌ನಲ್ಲಿ ಆತನಿಂದ “ತಲಾಕ್ ತಲಾಕ್ ತಲಾಕ್ ‘ ಎಂಬ ಮೂರು ಪದಗಳ ಒಂದು ಸಂದೇಶ ಬಂತು. ಇದರೊಂದಿಗೆ ನಮ್ಮ ದಾಂಪತ್ಯ ಮುಗಿದು ಹೋಯಿತೆಂಬುದನ್ನು ಆತ ಪರೋಕ್ಷವಾಗಿ ಸೂಚಿಸಿದ !’
ಪೊಲೀಸರಿಗೆ ಸುಮೈನಾಳ ದೂರಿನ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ತ್ರಿವಳಿ ತಲಾಕ್ ವಿಷಯದಲ್ಲಿ ದೇಶಾದ್ಯಂತ ಚರ್ಚೆ, ವಾದ-ವಿವಾದಗಳು ಮುಂದುವರಿದಿರುವ ನಡುವೆಯೇ ಸುಮೈನಾಳ ದಾರುಣ ಪ್ರಕರಣ ಈಗ ಬಹಿರಂಗವಾಗಿದೆ.