Advertisement

ವಿರೋಧ‌ ಲೆಕ್ಕಿಸದೆ ಅಂಗೀಕಾರ

02:01 AM Jul 26, 2019 | mahesh |

ನವದೆಹಲಿ: ಪ್ರತಿಪಕ್ಷಗಳ ವಿರೋಧ, ಹೈವೋಲ್ಟೇಜ್‌ ವಾಗ್ವಾದಗಳ ನಡುವೆಯೇ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ವಿಧೇಯಕವು 3ನೇ ಬಾರಿಗೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

Advertisement

ಗುರುವಾರ ಅಂಗೀಕಾರಗೊಂಡಿರುವ ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕು ರಕ್ಷಣೆ) ವಿಧೇಯಕ 2019 ಇನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಬಾಕಿ ಉಳಿದಿದ್ದು, ಅಲ್ಲಿ ಅಂಗೀಕಾರವಾದರಷ್ಟೇ ಕಾನೂನಾಗಿ ಬದಲಾಗಲಿದೆ.

ವಿಧೇಯಕದ ಪ್ರಕಾರ, ಒಂದೇ ಬಾರಿಗೆ 3 ಬಾರಿ ತಲಾಖ್‌ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಪದ್ಧತಿಯು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂಥ ಪತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ನೀಡಲಾಗುತ್ತದೆ. ಇದನ್ನು ಪ್ರಶ್ನಿಸಿ ಪ್ರತಿಪಕ್ಷಗಳು ಪ್ರಸ್ತಾಪಿಸಿದ ಅನೇಕ ತಿದ್ದುಪಡಿಗಳನ್ನು ನಿರಾಕರಿಸಲಾಯಿತು. ಭಾರೀ ಚರ್ಚೆಯ ಬಳಿಕ, ಧ್ವನಿಮತದಿಂದ ವಿಧೇಯಕಕ್ಕೆ ಅಂಗೀಕಾರ ನೀಡಲಾ ಯಿತು. ವಿಧೇಯಕದ ಪರ 302 ಮತಗಳು ಬಿದ್ದರೆ, ವಿರುದ್ಧ 78 ಮತಗಳು ಬಿದ್ದವು.

ಲಿಂಗ ಸಮಾನತೆಯೇ ಉದ್ದೇಶ: ವಿಧೇಯಕದ ಕುರಿತು ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ‘ಲಿಂಗ ಸಮಾನತೆಗಾಗಿ ಈ ಕಾಯ್ದೆ ಜಾರಿಯಾಗಬೇಕಾದ ಅಗತ್ಯವಿದೆ. ಒಂದೇ ಬಾರಿಗೆ ತಲಾಖ್‌ ಹೇಳುವ ಪದ್ಧತಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಮೇಲೆಯೂ 2017ರ ಜನವರಿಯಿಂದ ಇಲ್ಲಿಯವರೆಗೆ 574 ತ್ರಿವಳಿ ತಲಾಖ್‌ ಪ್ರಕರಣಗಳು ದಾಖಲಾಗಿವೆ. ಹೀಗಿರುವಾಗ ಮುಸ್ಲಿಂ ಮಹಿಳೆಯರು ದೌರ್ಜನ್ಯಕ್ಕೀಡಾಗಲಿ ಎಂದು ಸುಮ್ಮನಿರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ, 1986ರಲ್ಲಿ ಕಾಂಗ್ರೆಸ್‌ ಮಾಡಿರುವ ಪಾಪಕ್ಕೆ ಈಗಲೂ ದೇಶ ನರಳುವಂತೆ ಆಗಿದೆ. 1986ರ ಮೇ 5ರಂದು ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಆದರೆ, ಆಗ ಈ ತೀರ್ಪನ್ನು ದುರ್ಬಲಗೊಳಿಸುವ ಸಲುವಾಗಿಯೇ ಸರ್ಕಾರ ಹೊಸ ಕಾನೂನೊಂದನ್ನು ಜಾರಿ ಮಾಡಿತು. ಅಂದಿನಿಂದ ಇಂದಿನವರೆಗೂ ಈ ಕಾನೂನು ಮುಸ್ಲಿಂ ಮಹಿಳೆಯರಿಗೆ ದೊಡ್ಡ ಶಿಕ್ಷೆಯನ್ನೇ ನೀಡಿದೆ ಎಂದರು.

Advertisement

ದುರುದ್ದೇಶದ ವಿಧೇಯಕ: ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಆರ್‌ಎಸ್‌ಪಿ ಸದಸ್ಯ ಎನ್‌.ಕೆ. ಪ್ರೇಮಚಂದ್ರ, ‘ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡುವ ಏಕೈಕ ಉದ್ದೇಶದಿಂದ ಇದನ್ನು ತರಲಾಗಿದೆ. ಜೈಲು ಸೇರಿದ ಪತಿಯು ಪತ್ನಿಗೆ ಪರಿಹಾರ ನೀಡಲು ಹೇಗೆ ಸಾಧ್ಯ? ಹಿಂದೂ ಮತ್ತು ಕ್ರಿಶ್ಚಿಯನ್‌ ಸಮುದಾಯದಲ್ಲಿ ವಿಚ್ಛೇನದಕ್ಕೆ ಎಲ್ಲಾದರೂ ಜೈಲು ಶಿಕ್ಷೆ ಇದೆಯೇ? ಹಾಗಿದ್ದರೆ ಮುಸ್ಲಿಮರಿಗೇಕೆ ಶಿಕ್ಷೆ? ಅಲ್ಪಸಂಖ್ಯಾತರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಥಳಿಸಿ ಹತ್ಯೆಯಂಥ ಪ್ರಕರಣಗಳ ವಿರುದ್ಧ ಏಕೆ ಕಾನೂನು ತರಬಾರದು, ಶಬರಿಮಲೆ ತೀರ್ಪಿಗೆ ಸಂಬಂಧಿಸಿ ನಿಮ್ಮ ನಿಲುವೇನು’ ಎಂದು ಪ್ರಶ್ನಿಸಿದರು. ಇದೇ ವೇಳೆ, ವಿಧೇಯಕವನ್ನು ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತು. ಈ ನಡುವೆ, ಬಿಜೆಪಿ ಮಿತ್ರಪಕ್ಷವಾಗಿರುವ ಜೆಡಿಯು ಈ ವಿಧೇಯಕ ವಿರೋಧಿಸಿ ಸಭಾತ್ಯಾಗ ಮಾಡಿದ್ದೂ ಕಂಡುಬಂತು.

ಅಜಂ ಖಾನ್‌ ವಿವಾದ: ಲೋಕಸಭೆಯಲ್ಲಿ ಬಿಜೆಪಿ ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಎಸ್‌ಪಿ ಸಂಸದ ಅಜಂ ಖಾನ್‌ ಹೊಸ ವಿವಾದಕ್ಕೆ ನಾಂದಿ ಹಾಡಿದರು. ಅವರ ಅವಹೇಳನಕಾರಿ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದರೆ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ತಮ್ಮ ಸಂಸದನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದೂ ಕಂಡುಬಂತು. ಕ್ಷಮೆ ಯಾಚಿಸಬೇಕೆಂದು ಅಜಂ ಖಾನ್‌ಗೆ ರಮಾದೇವಿ ಅವರು ಸೂಚಿಸಿದರೂ, ಅವರು ಕ್ಷಮೆ ಯಾಚಿಸಲಿಲ್ಲ. ಈ ವಿಚಾರ ಸಂಬಂಧ ಪರಸ್ಪರ ವಾಗ್ವಾದ ನಡೆದ ಬಳಿಕ ಎಸ್‌ಪಿ-ಬಿಎಸ್ಪಿ ಸದಸ್ಯರು ಸಭಾತ್ಯಾಗ ಮಾಡಿದರು. ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ದೆಹಲಿ ಮಹಿಳಾ ಆಯೋಗ ಕೂಡ ಅಜಂ ಖಾನ್‌ ಹೇಳಿಕೆ ಖಂಡಿಸಿ ಪ್ರಕಟಣೆ ಹೊರಡಿಸಿವೆ.

ರಾಜ್ಯಸಭೆಯಲ್ಲಿ ಮಾಹಿತಿ ಹಕ್ಕಿಗಾಗಿ ಗದ್ದಲ

ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸುವ ವಿಚಾರ ಸಂಬಂಧ ರಾಜ್ಯಸಭೆಯಲ್ಲಿ ಹೈಡ್ರಾಮಾ ನಡೆದು, 4 ಬಾರಿ ಕಲಾಪ ಮುಂದೂಡಬೇಕಾದ ಸ್ಥಿತಿ ಎದುರಾಯಿತು. ವಿಧೇಯಕದ ಕುರಿತು ಚರ್ಚೆಗೆ ಮುನ್ನ ಅದನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಐವರು ಸದಸ್ಯರು ವಿಧೇಯಕವನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕೆಂಬ ನಿರ್ಣಯವನ್ನೂ ಮಂಡಿಸಿದರು. ಆದರೆ, ಇದರ ಪರ 75 ಸದಸ್ಯರು, ವಿರುದ್ಧ 117 ಸದಸ್ಯರು ಮತ ಚಲಾಯಿಸಿದ ಕಾರಣ, ನಿರ್ಣಯವನ್ನು ತಿರಸ್ಕರಿಸಲಾಯಿತು. ಕೂಡಲೇ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು. ಆದರೆ, ಟಿಆರ್‌ಎಸ್‌, ಬಿಜೆಡಿ ಹಾಗೂ ವೈಎಸ್ಸಾರ್‌ ಕಾಂಗ್ರೆಸ್‌ ಸದಸ್ಯರು ಸದನದಲ್ಲೇ ಉಳಿದರು. ಈ ವೇಳೆ, ವಿಧೇಯಕವನ್ನು ಧ್ವನಿಮತಕ್ಕೆ ಹಾಕಲಾಯಿತು. ಆಗ ಈ ಮೂರೂ ಪಕ್ಷಗಳ ಸದಸ್ಯರು ವಿಧೇಯಕದ ಪರವೇ ಮತ ಚಲಾಯಿಸುವ ಮೂಲಕ ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾಗಲು ನೆರವಾದರು.

ಅಧಿವೇಶನ ಆ.7ರವರೆಗೆ ವಿಸ್ತರಣೆ

ಪ್ರಸಕ್ತ ಸಂಸತ್‌ ಅಧಿವೇಶನವನ್ನು ಆಗಸ್ಟ್‌ 7ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಘೋಷಿಸಿದ್ದಾರೆ. ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾಗೆ ಮಾಹಿತಿ ನೀಡಿದ್ದಾರೆ. ಜೂ.17ರಂದು ಆರಂಭವಾಗಿದ್ದ ಅಧಿವೇಶನ ಜು.26ರಂದು ಮುಕ್ತಾಯವಾಗಬೇಕಾಗಿತ್ತು.
Advertisement

Udayavani is now on Telegram. Click here to join our channel and stay updated with the latest news.

Next