ಕಲಬುರಗಿ: ಸೇಡಂ ತಾಲೂಕಿನ ಮುಗನೂರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೂವರನ್ನು ಹತ್ಯೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ ಎಂದು ಈಶಾನ್ಯ ವಲಯದ ಐಜಿಪಿ ಆಲೋಕಕುಮಾರ ತಿಳಿಸಿದರು.
ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವರನ್ನು ಹತ್ಯೆ ಮಾಡಿ ವಿವಿಧೆಡೆ ಪರಾರಿಯಾಗಿದ್ದ ಆರೋಪಿಗಳನ್ನು ನಾಲ್ಕು ತಂಡದವರು ದಾಳಿ ನಡೆಸಿ ಹರಸೂರಲ್ಲಿ ಚಂದ್ರಕಾಂತ ಅಮಲಯ್ಯ ಕಲಾಲ, ಮಲ್ಲಿಕಾರ್ಜುನ ಚಂದ್ರಕಾಂತ ಕಲಾಲರನ್ನು, ಗಡಿಕೇಶ್ವರದಲ್ಲಿ ಲಕ್ಷ್ಮಯ್ಯ ಹಣಮಯ್ಯ ಈಳಗೇರ, ಚಂದ್ರಮ್ಮ ಚಂದ್ರಕಾಂತ ಕಲಾಲ, ಬೆಂಗಳೂರಿನ ಯಲಹಂಕದಲ್ಲಿ ನಾರಾಯಣ ಚಂದ್ರಕಾಂತ ಕಲಾಲ ಎನ್ನುವರನ್ನು ಬಂಧಿಸಲಾಗಿದೆ ಎಂದರು.
ಮುಗನೂರದ ಸರ್ವೇ ಸಂಖ್ಯೆ 73’1 ರಲ್ಲಿನ ಜಮೀನು ಕಲಾಲ ಮತ್ತು ಕೊಳ್ಳಿ ಕುಟುಂಬದವರ ಮಧ್ಯ ಕಳೆದ 16 ವರ್ಷಗಳಿಂದ ವಿವಾದವಿದ್ದು, ಕೊಳ್ಳಿ ಕುಟುಂಬದವರು ಜು.16 ರಂದು ಉಳುಮೆ ಮಾಡಲು ಹೋದಾಗ ಚಂದ್ರಕಾಂತ ಕಲಾಲ ಹಾಗೂ ಆತನ ಮನೆಯವರು ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ದೇವರಾಯ ಅಡಿವೆಪ್ಪ ಕೊಳ್ಳಿ(60), ಕಾಳಮ್ಮಾ ದೇವರಾಯ ಕೊಳ್ಳಿ(53) ಹಾಗೂ ರಾಜಶೇಖರ ಬಸವರಾಜ ಕೊಳ್ಳಿ(24) ಎಂಬುವವರನ್ನು ಕೊಲೆ ಮಾಡಿದ್ದರು. ಪ್ರಕರಣದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಚಿಂಚೋಳಿ ಡಿಎಸ್‌ಪಿ ಯು.ಶರಣಪ್ಪ, ಸೇಡಂ ಸಿಪಿಐ ಪಿ.ವಿ.ಸಾಲಿಮಠ, ಮುಧೋಳ ಪಿಐ ತಮ್ಮರಾಯ ಪಾಟೀಲರ ನೇತೃತ್ವದಲ್ಲಿ ಮಿರಿಯಾಣ ಪಿಎಸ್‌ಐ ಎಸ್.ಎ.ಪಟೇಲ, ಚಿಂಚೋಳಿ ಪಿಎಸ್‌ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳಾದ ಹಣಮಂತ, ಬಸವರಾಜ,ಗೌತಮ, ಶ್ರೀನಿವಾಸರೆಡ್ಡಿ, ಆಸೀಫ್‌ಮಿಯಾ, ಇಂದುಮತಿ, ಶಿವಕುಮಾರ, ಮಲ್ಲಿಕಾರ್ಜುನ ಸೇರಿ ಆರೋಪಿಗಳನ್ನು ಬಂಧಿಸಿ ಅವರಿಂದ ಮಾರಕಾಸ್ತ್ರ ಹಾಗೂ ದ್ವಿಚಕ್ರವಾಹನಗಳನ್ನು ಜಪ್ತಿಮಾಡಲಾಗಿದೆ ಎಂದರು.
24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಮೆಚ್ಚಿ 10 ಸಾ.ರೂ.ಗಳ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು. ಎಸ್‌ಪಿ ಎನ್.ಶಶಿಕುಮಾರ, ಡಿಎಸ್‌ಪಿ ಯು.ಶರಣಪ್ಪ ಹಾಗೂ ಇತರರು ಇದ್ದರು.