ಕೋಲ್ಕತಾ : ಇಂಡಿಯಾ ಮೈತ್ರಿಕೂಟದಲ್ಲಿ ಒಗ್ಗಟ್ಟು ಇಲ್ಲದಿರುವುದು ಸ್ಪಷ್ಟವಾಗಿದ್ದು, ಕಾಂಗ್ರೆಸ್‌ಗೆ ಶಾಕ್ ಎಂಬಂತೆ ಮೈತ್ರಿಕೂಟದ ಭಾಗವಾಗಿರುವ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಮುರ್ಷಿದಾಬಾದ್ ಜಿಲ್ಲಾ ನಾಯಕತ್ವದೊಂದಿಗೆ ತೃಣಮೂಲದ ಉನ್ನತ ನಾಯಕರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ವಿಶೇಷವೆಂದರೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಪ್ರತಿನಿಧಿಸುತ್ತಿರುವ ಬರ್ಹಾಂಪುರ ಲೋಕಸಭಾ ಕ್ಷೇತ್ರದಲ್ಲೂ ಟಿಎಂಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗಿದೆ.
ಮುರ್ಷಿದಾಬಾದ್ ಜಿಲ್ಲೆ ಮೂರು ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಜಂಗಿಪುರ್, ಬೆರ್ಹಾಂಪುರ ಮತ್ತು ಮುರ್ಷಿದಾಬಾದ್. 2019 ರ ಚುನಾವಣೆಯಲ್ಲಿ, ಕಾಂಗ್ರೆಸ್ ಬೆರ್ಹಾಮ್‌ಪುರ ಕ್ಷೇತ್ರವನ್ನು ಗೆದ್ದುಕೊಂಡರೆ, ಉಳಿದೆರಡು ಟಿಎಂಸಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚೌಧರಿ ಅವರು 1999 ರಿಂದ ಬರ್ಹಾಂಪುರ ಕ್ಷೇತ್ರವನ್ನು ಗೆಲ್ಲುತ್ತಲೇ ಬಂದಿದ್ದಾರೆ, ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿದೆ.
ಟಿಎಂಸಿ ಜತೆಗಿನ ಒಪ್ಪಂದದ ಭಾಗವಾಗಿ ಸ್ಪರ್ಧಿಸಲು ಪಕ್ಷವು ಹೆಚ್ಚಿನ ಸೀಟುಗಳನ್ನು ನಿರೀಕ್ಷಿಸುತ್ತಿದ್ಧ ಕಾಂಗ್ರೆಸ್ ಕಾಂಗ್ರೆಸ್‌ಗೆ ಈ ನಿರ್ಧಾರ ಶಾಕ್ ನೀಡಿದೆ. ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ನೀಡಲು ಟಿಎಂಸಿ ನಿರ್ಧರಿಸಿತ್ತು.
2019 ರಲ್ಲಿ ಬಿಜೆಪಿ ಬಂಗಾಳದಲ್ಲಿ 42 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿಗೆ ಪ್ರಬಲ ಸ್ಪರ್ಧೆ ಒಡ್ಡಿತ್ತು. ಕಾಂಗ್ರೆಸ್ ಎರಡನ್ನು ಮಾತ್ರ ಗೆದ್ದಿತ್ತು, ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು.