Advertisement
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳಿಗೆ ಅಳವಡಿಸಿರುವ ಜಿಪಿಎಸ್ (ಜಿಯೊ ಪೊಸಿಷನಿಂಗ್ ಸಿಸ್ಟ್‌ಂ) ಹಾಗೂ ನಿರ್ವಾಹಕರು ನಿತ್ಯ ಬಳಸುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್ (ಇಟಿಎಂ)ಗಳ ಸಂಪೂರ್ಣ ನಿರ್ವಹಣೆಯ ಗುತ್ತಿಗೆಯನ್ನು ಟ್ರೈಮ್ಯಾಕ್ಸ್ ಐಟಿ ಇನ್‌ಫ್ರಾಸ್ಟ್ರಕ್ಚರ್ ಆಂಡ್ ಸರ್ವಿಸ್ ಲಿ., ಪಡೆದಿತ್ತು.
Related Articles
Advertisement
ಈ ಐಟಿಎಸ್‌ಗೆ ಸಂಬಂಧಿಸಿದ ಉಪಕರಣಗಳ ಖರೀದಿಗಾಗಿ ಬಿಎಂಟಿಸಿಯು ಯಾವುದೇ ಬಂಡವಾಳ ಹೂಡಿಕೆ ಮಾಡಿಲ್ಲ. ಆದರೆ, ಯಂತ್ರಗಳನ್ನು ಪೂರೈಸಿ, ನಿರ್ವಹಣೆ ಮಾಡುತ್ತಿರುವುದರ ಬದಲಿಗೆ ಮಾಸಿಕ ಸುಮಾರು ಒಂದು ಕೋಟಿ ರೂ. ಪಾವತಿಸುತ್ತಿತ್ತು. ಕೆಲ ದಿನಗಳಿಂದ ಈ ಹಣ ಪಾವತಿಯನ್ನು ತಡೆಹಿಡಿಯಲಾಗಿದೆ.
ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಟೆಂಡರ್ ಪಡೆದ ಕಂಪೆನಿಗೂ ನಿರಂತರವಾಗಿ ಎಚ್ಚರಿಕೆ ನೀಡುತ್ತ ಬರಲಾಗಿತ್ತು. ಈ ಮಧ್ಯೆ ಅದು ಆರ್ಥಿಕ ದಿವಾಳಿ ಆಗಿರುವುದು ಬೆಳಕಿಗೆಬಂದಿದೆ. ಇದರಿಂದ ಸಂಸ್ಥೆಗೆ ಯಾವುದೇ ನಷ್ಟ ಆಗುವುದಿಲ್ಲ. ಆದರೆ, ನಿಗಮದ ಐಟಿ ಸೇವೆಗಳಿಗೆ ತುಸು ಹಿನ್ನಡೆ ಆದಂತಾಗಿದೆ. 2016ರ ಜುಲೈನಲ್ಲಿ ಟ್ರೈಮ್ಯಾಕ್ಸ್ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಟೆಂಡರ್ ರದ್ದು?: ಬಿಎಂಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಬಸ್‌ಗಳ ಸಂಖ್ಯೆ ಆರು ಸಾವಿರ. ಪೂರೈಕೆ ಆಗಿರುವ ಇಟಿಎಂಗಳ ಸಂಖ್ಯೆ 10,500-11,000. ಅಂದರೆ ಶೇ. 40ರಷ್ಟು ನಮ್ಮ ಬಳಿ ಹೆಚ್ಚುವರಿ ಮಷಿನ್‌ಗಳಿವೆ. ಇನ್ನು ಈಗೆಲ್ಲಾ ಮೊಬೈಲ್‌ನಲ್ಲೇ ಜಿಪಿಎಸ್ ವ್ಯವಸ್ಥೆ ಲಭ್ಯ ಆಗುವುದರಿಂದ ಬಸ್‌ಗಳಿಗೆ ಅಳವಡಿಸಿರುವ ಜಿಪಿಎಸ್ ಕೈಕೊಟ್ಟರೆ ಅಷ್ಟೇನೂ ಸಮಸ್ಯೆ ಆಗದು.
ಅಷ್ಟಕ್ಕೂ ಟ್ರೈಮ್ಯಾಕ್ಸ್‌ಗೆ ಟೆಂಡರ್ ನೀಡಿದ್ದರೂ, ವಾಸ್ತವವಾಗಿ ನಿರ್ವಹಣೆ ಮಾಡುತ್ತಿರುವುದು ಉಪ ಗುತ್ತಿಗೆದಾರ ಕಂಪೆನಿಗಳಾಗಿವೆ. ಅವುಗಳೊಂದಿಗೆ ಈಗಾಗಲೇ ನಿರಂತರ ಸಂಪರ್ಕದಲ್ಲಿದ್ದೇವೆ. ನೇರವಾಗಿ ಹಣ ಪಾವತಿಸಲಿದ್ದು, ನಿಯಮಿತ ನಿರ್ವಹಣೆ ಮಾಡುವಂತೆ ಕೋರಲಾಗಿದೆ. ಮತ್ತೂಂದೆಡೆ ಐಆರ್‌ಪಿ ಜತೆಗೂ ಪತ್ರ ವ್ಯವಹಾರ ನಡೆಸಲಾಗಿದೆ.
ಮುಂದಿನ ದಿನಗಳಲ್ಲಿ ಟ್ರೈಮ್ಯಾಕ್ಸ್‌ಗೆ ನೀಡಿದ ಟೆಂಡರ್ ಕೂಡ ರದ್ದುಪಡಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಐಟಿಎಸ್ ಅನುಷ್ಠಾನಗೊಳಿಸಲಾಗಿತ್ತು. ಈ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಸಂಸ್ಥೆಯಲ್ಲಿ ಸೋರಿಕೆ ಪ್ರಮಾಣ ಕೂಡ ಇಳಿಕೆ ಆಗಿತ್ತು. ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಯಲ್ಲಿ ಮ್ಯಾನ್ಯುವಲ್ ವ್ಯವಸ್ಥೆ ಬಂದರೆ, ಮತ್ತಷ್ಟು ಸಮಸ್ಯೆ ಆಗಲಿದೆ.
ಕೆಎಸ್‌ಆರ್‌ಟಿಸಿಯಲ್ಲಿ ವ್ಯವಸ್ಥೆ ಭಿನ್ನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಯಲ್ಲೂ ನಿರ್ವಾಹಕರಿಗೆ ಇದೇ ರೀತಿಯ ಇಟಿಎಂಗಳನ್ನು ನೀಡಲಾಗಿದೆ. ಆದರೆ, ಅವುಗಳನ್ನು ಕ್ವಾಂಟಮ್ ಎಂಬ ನಿಗಮವು ಖರೀದಿ ಮಾಡಿದ್ದು, ಮೂರು ವರ್ಷ ವಾರಂಟಿ ಅವಧಿ ಇರುತ್ತದೆ. ಆ ಯಂತ್ರಗಳನ್ನು ಪೂರೈಸಿದ ಕಂಪೆನಿಯೇ ನಿರ್ವಹಣೆ ಮಾಡುತ್ತಿದೆ ಎನ್ನಲಾಗಿದೆ.
* ವಿಜಯಕುಮಾರ್ ಚಂದರಗಿ