Advertisement
2017ರ ಜನವರಿಯಲ್ಲಿ ಕೇರಳ – ಕರ್ನಾಟಕ ಸರಕಾರಗಳ ಸಹಯೋಗದೊಂದಿಗೆ ರಾಷ್ಟ್ರಕವಿ ಗೋವಿಂದ ಪೈಯವರ ಮನೆಯು ರಾಷ್ಟ್ರೀಯ ಕವಿಸ್ಮಾರಕವಾಗಿ ಪುನರ್ನಿರ್ಮಿಸಲ್ಪಟ್ಟು ಲೋಕಾರ್ಪಣೆಗೊಂಡಿತು. ಕವಿ, ಸಂಶೋಧಕ, ವಿದ್ವಾಂಸ ಹೀಗೆ ಹಲವು ಆಯಾಮಗಳಿಂದ ಗುರುತಿಸಲ್ಪಟ್ಟ ಕನ್ನಡದ ಪ್ರಬುದ್ಧ ಸಾಹಿತಿಯಾದ ಗೋವಿಂದ ಪೈಯವರ ಕುರಿತ ಅಧ್ಯಯನಗಳಿಗೆ ಈ ಮೂಲಕ ಹೊಸ ವೇಗ ಲಭಿಸಬಹುದೇನೋ. ಪೈಯವರ ಮನೆಯೇ ಅಧ್ಯಯನ ಕೇಂದ್ರವೂ ಆಗಿ ಗಿಳಿವಿಂಡು ಎಂದು ನಾಮಾಂಕಿತಗೊಂಡಿದೆ. ಇದರ ಮೇಲ್ವಿಚಾರಣೆಗಾಗಿ ಆಡಳಿತ ಟ್ರಸ್ಟ್ ನೇಮಕಗೊಂಡಿದ್ದು, ಅದರ ಆಶ್ರಯದಲ್ಲಿ ಪೈಯವರ ಸಾಹಿತ್ಯದ ಕುರಿತಾದ ಕಾರ್ಯಕ್ರಮವನ್ನು ತಿಂಗಳಲ್ಲೊಂದರಂತೆ ನಡೆಸುವುದೆಂದು ತೀರ್ಮಾನಿಸಲಾಗಿದೆ.
Related Articles
Advertisement
” ಕನ್ನಡಿಗರ ತಾಯಿ’ ಎಂಬ ತಾಯ್ನುಡಿಯ, ತಾಯ್ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಪ್ರಚುರಪಡಿಸುವ ಜನಪ್ರಿಯ ಕವನವನ್ನು ಎಳೆಯ ನೃತ್ಯ ಕಲಾವಿದರು ತಮ್ಮ ಚುರುಕಾದ ಹಾವಭಾವಗಳೊಂದಿಗೆ ಸಹೃದಯರ ಮನಸೂರೆಗೊಳ್ಳುವಂತೆ ಅಭಿವ್ಯಕ್ತಗೊಳಿಸಿದರು.
ಪೈಯವರು ಭಾರತ ದೇಶವನ್ನು, ತಾಯ್ನುಡಿ ಕನ್ನಡವನ್ನು ಮತ್ತು ಹೆತ್ತಬ್ಬೆ ತುಳುನಾಡನ್ನು ಬಿಟ್ಟವರಲ್ಲ. ಇದರಲ್ಲಿ ಒಂದು ಹೆಚ್ಚು, ಒಂದು ಕಮ್ಮಿ ಎಂಬುದು ಅವರ ಭಾವಕ್ಕೆ ಒಪ್ಪಿತವಲ್ಲ. ಅವರ “ತೌಳವ ಮಾತೆ’ ಪದ್ಯದಲ್ಲಿ ತ್ರಿದಿವ ಎಂಬ ಮಾತು ಬರುತ್ತದೆ. ಸ್ವರ್ಗ ಎಂಬುದು ಅದರ ಅರ್ಥ. ಪೈಯವರ ಪಾಲಿಗೆ ಈ ಮೂರು ಸ್ವರ್ಗಗಳೇ ಆಗಿವೆ. ತುಳುನಾಡಿನ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವಗಳನ್ನು ಕಟ್ಟಿಕೊಡುವ ಈ ಕವಿತೆಯ ನೃತ್ಯಾವಿಷ್ಕಾರವು ಚೇತೋಹಾರಿಯಾಗಿದ್ದು, ತುಳುನಾಡಿನ ಗತವೈಭವದತ್ತ ಸಹೃದಯರ ಮನವನ್ನು ಕೊಂಡೊಯ್ಯುವಲ್ಲಿ ಸಫಲವಾಗಿತ್ತು.
ಒಟ್ಟಂದದಲ್ಲಿ ಉತ್ತಮ ಪ್ರಯೋಗ ಎನ್ನಬಹುದಾದರೂ ಭಾವಾಭಿನಯ, ಹೆಜ್ಜೆಯ ಗತಿ, ಭಾವಗಳಿಗೆ ಜತಿ ಹಿಡಿಯುವಂತಿದ್ದರೂ, ಮುದ್ರೆಗಳು ಸರಳಗೊಳ್ಳ ಬೇಕಾದ ಅಗತ್ಯ ಎದ್ದು ಕಾಣುತ್ತಿತ್ತು. ಪ್ರಥಮ ಪ್ರಯೋಗದ ಕೆಲಕೆಲವು ಹೊಂದಾಣಿಕೆಯ ಅಂತರಗಳು ಗೋಚರಿಸುತ್ತಿದ್ದವು, ಅದಿನ್ನೂ ಹದಗೊಂಡು ಭಾವದ ಪೂರ್ಣ ಪ್ರಮಾಣದ ಅಭಿವ್ಯಕ್ತಿ ಆಗಬೇಕಾದದ್ದಿದೆ. ಕವನವೊಂದನ್ನು ಶುದ್ಧ ಶಾಸ್ತ್ರೀಯ ನೃತ್ಯ ತಾಳಕ್ಕೆ ಹೊಂದಿಸುವುದು ಕಷ್ಟ ಸಾಧ್ಯ. ನಿರಂತರ ಶ್ರಮ, ಕವನದ ಆತ್ಮವನ್ನು ಅರಿತು ಭಾವಲಹರಿಯನ್ನು ಶಾಸ್ತ್ರದ ಚೌಕಟ್ಟಿಗೆ ಒಳಪಡಿಸಿ ಅಭಿವ್ಯಕ್ತಿಸುವ ಕೌಶಲ ಅಗತ್ಯ. ಅದಕ್ಕೆ ರೂಪಾಕಾಭಿವ್ಯಕ್ತಿ ಹೆಚ್ಚು ಸಮಂಜಸ ಹಾಗೂ ಪರಿಣಾಮಕಾರಿ ಆಗಬಹುದೇನೊ. ಪೈಯವರ ಭಾಷೆಯಂತೂ ಪ್ರಬುದ್ಧ, ಪ್ರಖರ. ಅದನ್ನು ನೃತ್ಯದ ಚೌಕಟ್ಟಿಗೆ ಹೊಂದಿಸಿ ಆ ಮೂಲಕ ಅವರ ಕವಿತೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಆಸ್ವಾದನೆಗೆ ಅನುವು ಮಾಡಿಕೊಡುವ ಈ ಪ್ರಯತ್ನ ಮಾತ್ರ ನಿಜಕ್ಕೂ ಶ್ಲಾಘನೀಯ.
ಕವಿತಾ