ರಾಣಿ ಅಬ್ಬಕ್ಕ (1525-1570):ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಬಿರುದು ಸಲ್ಲುವುದು ತುಳುನಾಡಿನ ರಾಣಿ ಅಬ್ಬಕ್ಕಳಿಗೆ. ಐರೋಪ್ಯ ವಸಾಹತುಶಾಹಿಗಳ ವಿರುದಟಛಿ ಹೋರಾಟಕ್ಕೆ ಇಳಿದ ಮೊತ್ತಮೊದಲ ವೀರಾಂಗನೆ ಈಕೆ. ಭಾರತಕ್ಕೆ ಕಾಲಿರಿಸಿದ್ದ ಮೊದಲ ಐರೋಪ್ಯ ವಸಾಹತುಶಾಹಿಗಳು ಪೋರ್ಚುಗೀಸರು. 1498ರಲ್ಲಿ ವಾಸ್ಕೋ ಡ ಗಾಮಾ ಭಾರತಕ್ಕೆ ಬಂದ ಬೆನ್ನಿಗೇ ಪೆದ್ರೋ ಅಲ್ವಾರಿಸ್ ಕಾಬ್ರಾಲ್, ಫ್ರಾನ್ಸಿಸ್ಕೋ ಡಿ’ಅಲ್ಮೇಡಾ, ಅಲ್ಫಾನ್ಸೋ ಅಲ್ಬುಕರ್ಕ್ ಮುಂತಾದ ಪೋರ್ಚುಗೀಸ್ ದಂಡನಾಯಕರು ಭಾರತದ ಪಶ್ಚಿಮ ಕರಾವಳಿಯನ್ನು ಆಕ್ರಮಿಸಿ ಕೇರಳದ ಕ್ವಿಲೋನ್ (ಕೊಲ್ಲಂ)ನಿಂದ ಗುಜರಾತ್ ನದಿಯ ತನಕ ಅಲ್ಲಲ್ಲಿ ವಸಾಹತುಗಳನ್ನು ಸ್ಥಾಪಿಸಿದ್ದರು.
ಕಲ್ಲಿಕೋಟೆಯ ಜಾಮೋರಿನ್‌ನಿಂದ ಹಿಡಿದು ಗುಜರಾತ್‌ನ ಸುಲ್ತಾನನ ತನಕ ಎಲ್ಲ ದೊರೆಗಳೂ ಪೋರ್ಚುಗೀಸರಿಗೆ ತಲೆಬಾಗಿಸಿದ್ದರು. ಅವರ ನೌಕಾಬಲಕ್ಕೆ ಎದುರಾಗಿ ನಿಲ್ಲುವ ಶಕ್ತಿ ಯಾರಿಗೂ ಇರಲಿಲ್ಲ . ಅವರನ್ನು ಸಮರ್ಥವಾಗಿ
ಎದುರಿಸಿದ್ದು ಕರಾವಳಿ ಕರ್ನಾಟಕದ ವೀರ ರಾಣಿ ಅಬ್ಬಕ್ಕ ಮಾತ್ರ! ರಾಣಿ ಅಬ್ಬಕ್ಕ ಕ್ರಿ.ಶ. 1525ರಿಂದ 1570ರ ನಡುವೆ ಕರಾವಳಿ ಕರ್ನಾಟಕದ ತುಳುನಾಡಿನ ರಾಣಿಯಾಗಿದ್ದಳು. ರ್ಚುಗೀಸರ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದ ವೀರ ಯೋಧೆ ಈಕೆ. ಮುಂದಿನ ಪೀಳಿಗೆಯ ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ, ಕೆಳದಿಯ ಚೆನ್ನಮ್ಮ ಮುಂತಾದ ವೀರ ವನಿತೆಯರಿಗೆ
ಪ್ರೇರಣೆಯಾಗಿದ್ದಳು ರಾಣಿ ಅಬ್ಬಕ್ಕ .
ಉಳ್ಳಾಲ ಆ ಕಾಲದಲ್ಲಿ ಒಂದು ಶ್ರೀಮಂತ ಬಂದರಾಗಿತ್ತು. ಅಲ್ಲಿಂದ ಅರಬ್ ರಾಷ್ಟ್ರಗಳಿಗೆ ಸಂಬಾರ ಜೀನಸುಗಳು ರಫ್ತಾಗುತ್ತಿದ್ದವು. ಇಲ್ಲಿನ ವ್ಯಾಪಾರ ಲಾಭದಾಯಕವಾಗಿದ್ದ ಕಾರಣ ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು
ಉಳ್ಳಾಲವನ್ನು ವಶಪಡಿಸಿಕೊಳ್ಳಲು ಸೆಣಸುತ್ತಿದ್ದರು. ಆದರೆ ಚೌಟರ ಬಲಾಡ್ಯ ಸೈನ್ಯವನ್ನು ಸೋಲಿಸುವುದು ಸುಲಭವಾಗಿರಲಿಲ್ಲ .
ರಾಣಿ ಅಬ್ಬಕ್ಕ ತನ್ನ ರಾಜ್ಯದಲ್ಲಿ ಜನಪ್ರಿಯಳಾಗಿದ್ದಳು. ಆಕೆಯನ್ನು “ಅಬ್ಬಕ್ಕ ಮಹಾದೇವಿ’ ಎಂದು ಕರೆಯುತ್ತಿದ್ದರು. ಆಕೆಯ ಶೌರ್ಯ- ಸಾಹಸಗಳ ಕಾರಣದಿಂದ ಅವಳಿಗೆ “ಅಭಯರಾಣಿ’ ಎಂಬ ಬಿರುದಿತ್ತು. ಯುದ್ಧ ತಂತ್ರಗಳಲ್ಲಿ ಅವಳನ್ನು ಮೀರಿಸುವವರಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಕರಾವಳಿಯ ಎಲ್ಲ ಚಿಕ್ಕ- ದೊಡ್ಡ ಪಾಳೆಯಗಾರರಿಗೆ ಅವಳೊಂದು ಮಾದರಿಯಾಗಿದ್ದಳು.
ಲೋಪೋ ವಾಜ್ ಡಿ ಸಂಪಾಯಿಯೋ ಎಂಬ ಪೋರ್ಚುಗೀಸ್ ದಂಡನಾಯಕ ಮಂಗಳೂರಿನಲ್ಲಿ ವೈಸರಾಯ್ ಆಗಿ
ನೇಮಕವಾಗಿದ್ದ . 1525ರಲ್ಲಿ ಉಡುಪಿ ಮತ್ತು ಮಂಗಳೂರು ಅವನ ವಶಕ್ಕೆ ಬಂದಿತ್ತು. ಆದರೆ ಉಳ್ಳಾಲದ ಮೇಲೆ ದಾಳಿ ಮಾಡಿದಾಗ ಭಾರೀ ಹೊಡೆತ ತಿಂದು ಪರಾರಿಯಾಗಿದ್ದ . 1525ರ ದುಸ್ಸಾಹಸದ ಬಳಿಕ 1555 ಮತ್ತು 1567, 1569…ರಲ್ಲಿ ಪೋರ್ಚುಗೀಸರು ಉಳ್ಳಾಲದ ಮೇಲೆ ನಿರಂತರ ದಾಳಿ ನಡೆಸಿದರು. ಪ್ರತಿಯೊಂದು ಬಾರಿಯೂ ಹೊಡೆತ ತಿಂದು ಹಿಮ್ಮೆಟ್ಟಿದ್ದರು.
1570ರಲ್ಲಿ ಬಲಾಡ್ಯ ಪೋರ್ಚುಗೀಸ್ ಸೈನ್ಯ ಉಳ್ಳಾಲದ ಮೇಲೆ ದಾಳಿ ಮಾಡಿತು. ಲಕ್ಷ್ಮಪ್ಪ ಅರಸನ ಕುತಂತ್ರದ ಕಾರಣ ಪೋರ್ಚುಗೀಸ್ ಸೈನ್ಯ ಯುದ್ಧ ಗೆದ್ದು , ಅರಮನೆಗೆ ನುಗ್ಗಿತು. ಭೀಕರ ಹೋರಾಟದಲ್ಲಿ ಗಾಯಾಳು ರಾಣಿ ಪೋರ್ಚುಗೀಸರಿಗೆ ಸೆರೆಸಿಕ್ಕಿದಳು. ರಾಣಿ ಅಬ್ಬಕ್ಕ ಪೋರ್ಚುಗೀಸರ ಸಾಮಂತ ರಾಣಿಯಾಗಿ ಬದುಕಬಹುದಿತ್ತು. ಆದರೆ, ಸ್ವಾತಂತ್ರ್ಯ ವೀರೆಗೆ ದಾಸ್ಯದ ಬದುಕು ಬೇಕಿರಲಿಲ್ಲ . ಅವಳು ಸೆರೆಯಲ್ಲೂ ಪೋರ್ಚುಗೀಸರಿಗೆ ತಲೆಬಾಗಿಸಲಿಲ್ಲ .
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬಲಾಡ್ಯ ಪೋರ್ಚುಗೀಸ್ ಸೈನ್ಯವನ್ನು ಧಿಕ್ಕರಿಸಿ ರಾಜ್ಯವಾಳಿದ್ದ ರಾಣಿ ಅಬ್ಬಕ್ಕ , ಅವರ ವಿರುದ್ಧ ಹೋರಾಡುತ್ತಲೇ ಪ್ರಾಣಾರ್ಪಣೆ ಮಾಡಿದ್ದಳು. ಇಂದಿಗೂ ಕರಾವಳಿ ಕರ್ನಾಟಕದಲ್ಲಿ ವೀರ ರಾಣಿ ಅಬ್ಬಕ್ಕಳನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಸ್ವತಂತ್ರ ಭಾರತದಲ್ಲಿ ರಾಣಿ ಅಬ್ಬಕ್ಕಳನ್ನು ನೆನಪಿಸಿಕೊಳ್ಳುವವರು ಇಲ್ಲ . ಭಾರತೀಯ ಚರಿತ್ರೆಯಲ್ಲಿ , ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಮಾತ್ರ ಕಾಣಿಸುತ್ತವೆ. ದಕ್ಷಿಣ ಭಾರತದ ಅದೆಷ್ಟೋ ವೀರರ ಹೆಸರುಗಳು ಇಲ್ಲಿಂದ ಕಾಣೆಯಾಗಿರುವುದು ದುರ್ದೈವ.
ದಶಕಗಳ ಕಾಲ ಹೋರಾಟದ ಬಳಿಕ ಕರಾವಳಿ ಕರ್ನಾಟಕದ ಅಭಿಮಾನಿಗಳು ಕೊನೆಗೂ ಅಬ್ಬಕ್ಕ ರಾಣಿಯ ವೀರಗಾಥೆಯನ್ನು ರಾಷ್ಟ್ರದ ಗಮನಕ್ಕೆ ತಂದರು. ಜನವರಿ 2003ರಲ್ಲಿ ಭಾರತ ಸರಕಾರ ಆಕೆಯ ಸ್ಮರಣಾರ್ಥವಾಗಿ ವಿಶೇಷ ಅಂಚೆಚೀಟಿಯನ್ನು ಹೊರಡಿಸಿತು. ಬೆಂಗಳೂರಿನ “ಕ್ವೀನ್ಸ್ ರೋಡ್’ಗೆ “ರಾಣಿ ಅಬ್ಬಕ್ಕ ದೇವಿ ರಸ್ತೆ’ ಎಂದು ನಾಮಕರಣ ಮಾಡಬೇಕೆಂದು ಕರ್ನಾಟಕ ಇತಿಹಾಸ ಅಕಾಡೆಮಿ ಆಗ್ರಹಿಸುತ್ತಿದೆ. ಪೋರ್ಚುಗೀಸರ ಬಳಿಕ ಕರಾವಳಿ ಕರ್ನಾಟಕವನ್ನು ವಶಪಡಿಸಿಕೊಂಡಿದ್ದ ಬ್ರಿಟಿಷರು ರಾಣಿ ಅಬ್ಬಕ್ಕಳ ಹೆಸರಿನ ಪಟ್ಟವನ್ನು ಬೇರೆ ಯಾವುದೋ ಕುಟುಂಬಕ್ಕೆ ನೀಡಿದರು. ನಿಜವಾದ ಉತ್ತರಾಧಿಕಾರಿ 1888ರಲ್ಲಿ ವಂಶಾವಳಿ ತಯಾರಿಸಿ 12 ವರ್ಷಗಳ ಕಾಲ ಕೋರ್ಟು- ಕಚೇರಿಗಳ ಹೋರಾಟದ ಬಳಿಕ ತಮ್ಮ ಹೆಸರಿಗೆ ಪಟ್ಟ ಬರೆಸಿಕೊಂಡರು.
2016ರಲ್ಲಿ ಮೊತ್ತಮೊದಲ ಬಾರಿಗೆ ಅಬ್ಬಕ್ಕ ರಾಣಿಯ 29ನೆಯ ತಲೆಮಾರಿನ ವಂಶಜ ಕುಲದೀಪ್ ಅವರನ್ನು ಆಮಂತ್ರಿಸಿ, ಗೌರವಿಸಲಾಗಿತ್ತು. “ಪಟ್ಟ ಇರುವುದು ಸಾಂಕೇತಿಕವಾಗಿ ಮಾತ್ರ. ಉಳ್ಳಾಲದ ಗತವೈಭವ ಇದರ ಜೊತೆಗಿಲ್ಲ . ಆದರೆ, ನಾವು ರಾಣಿ ಅಬ್ಬಕ್ಕನ ಸಂತಾನ ಎನ್ನುವುದೇ ಒಂದು ಹೆಮ್ಮೆ’ ಎಂದಿದ್ದರು ಇವರು.
*ತುಕಾರಾಮ್ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ