“ಈ ಸಾಂಗ್ ಕೇಳಿದಾಗ ಮೊದಲು ನನಗೆ ಇದು ಬೇಕಾ? ಯಾಕೋ ಪಂಪ್ ಹೊಡೆಯೋ ಥರ ಇದೆಯಲ್ಲ ಸ್ವಲ್ಪ ಓವರ್ ಆಯ್ತೇನೋ ಅಂಥ ಅನಿಸ್ತು. ಆದರೆ ನಮ್ಮ ನಿರ್ದೇಶಕರು ಮತ್ತು ನಮ್ಮ ಟೀಮ್ ಇದೇ ಲೈನ್ ಇರಲಿ, ಇದು ನಿಮಗೆ ಪಕ್ಕಾ ಸೂಟ್ ಆಗುತ್ತೆ ಅಂದ್ರು. ಕೊನೆಗೆ ಅವರ ಒತ್ತಾಯಕ್ಕೆ ನಾನೂ ಒಪ್ಪಿಕೊಂಡೆ… ಈ ಹಾಡು ಏನಾದ್ರೂ ಇಷ್ಟೊಂದು ಚೆನ್ನಾಗಿ ಬಂದಿದೆ ಅಂದ್ರೆ, ಅದರ ಕ್ರೆಡಿಟ್ ಇಡೀ ಟೀಮ್‌ಗೆ ಸೇರಬೇಕು…’ –
ಹೀಗೆ ಹೇಳುತ್ತ ಮಾತಿಗಿಳಿದವರು ನಟ ಗೋಲ್ಡನ್ ಸ್ಟಾರ್ ಗಣೇಶ್. ಅಂದಹಾಗೆ, ಗಣೇಶ್ ಹೀಗೆ ಮಾತನಾಡಿದ್ದು ತಮ್ಮ ಮುಂಬರುವ “ತ್ರಿಬಲ್ ರೈಡಿಂಗ್’ ಸಿನಿಮಾದ “ಟ್ವಿಂಕಲ್ ಟ್ವಿಂಕಲ್ ಲಿಟ್ಲ ಸ್ಟಾರ್ ಹಿ ಇಸ್ ದ ಗೋಲ್ಡನ್ ಸ್ಟಾರ್…’ ಎಂಬ ಹಾಡಿನ ಬಗ್ಗೆ.
ಇತ್ತೀಚೆಗಷ್ಟೇ “ತ್ರಿಬಲ್ ರೈಡಿಂಗ್’ ಸಿನಿಮಾದ ಈ ಹಾಡು ಬಿಡುಗಡೆಯಾಗಿದ್ದು, ಗಣೇಶ್ ಮ್ಯಾನರಿಸಂ, ಹೀರೋಯಿಸಂ ಎಲ್ಲವನ್ನೂ ಇಟ್ಟುಕೊಂಡು ಚಿತ್ರತಂಡ ಹಾಡಿನ ಮೂಲಕ ಗಣಿ ಗುಣಗಾನ ಮಾಡಿದೆ. ಇನ್ನು ಹಾಡು ಬಿಡುಗಡೆಯ ವೇಳೆ ಸ್ವಲ್ಪ ಅಂಜಿಕೆಯಿಂದಲೇ ಹಾಡಿನ ಬಗ್ಗೆ ಮಾತಿಗಿಳಿದ ಗಣೇಶ್, “ಈ ಹಾಡಿಗೆ ಸಿಗುತ್ತಿರುವ ಎಲ್ಲ ಪ್ರತಿಕ್ರಿಯೆ, ಯಶಸ್ಸು ಚಿತ್ರತಂಡಕ್ಕೆ ಸೇರಬೇಕು. ಚಿತ್ರತಂಡದ ಅಭಿರುಚಿಯಂತೆ ಒಳ್ಳೆಯ ಡ್ಯಾನ್ಸಿಂಗ್ ನಂಬರ್ ಇರುವಂಥ ಹಾಡು ಸಿಕ್ಕಿದೆ’ ಎಂದರು.
ಸಾಯಿ ಕಾರ್ತಿಕ್ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ವಿಜಯ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ.
“ಈಗಾಗಲೇ ಬಿಡುಗಡೆಯಾಗಿರುವ “ತ್ರಿಬಲ್ ರೈಡಿಂಗ್’ ಸಿನಿಮಾದ ಎರಡೂ ಹಾಡುಗಳೂ ಸೂಪರ್ ಹಿಟ್ ಆಗಿದ್ದು, ಈಗ ಮೂರನೇ ಹಾಡು ಬಿಡುಗಡೆ ಮಾಡಿದ್ದೇವೆ. ಈ ಹಾಡಿನಲ್ಲಿ ಡಿಫರೆಂಟ್ ಲುಕ್‌ನಲ್ಲಿ ಗಣೇಶ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಗಣೇಶ್ ಫ್ಯಾನ್ಸ್‌ಗೆ ಇಷ್ಟವಾಗುವಂತಿರುವ, ಈ ಹಾಡು ಕೂಡ ಹಿಟ್ ಲಿಸ್ಟ್ ಸೇರಲಿದೆ’ ಎಂಬುದು ನಿರ್ದೇಶಕ ಮಹೇಶ್ ಗೌಡ ಅವರ ವಿಶ್ವಾಸದ ಮಾತು.
“ಕೃಪಾಲು ಎಂಟರ್‌ಟೈನ್ಮೆಂಟ್ಸ್’ ಬ್ಯಾನರ್‌ನಲ್ಲಿ ವೈ. ಎಂ ರಾಮ್ ಗೋಪಾಲ್ “ತ್ರಿಬಲ್ ರೈಡಿಂಗ್’ ಸಿನಿಮಾವನ್ನು ನಿರ್ಮಿಸಿದ್ದಾರೆ. “ಪ್ರೇಕ್ಷಕರ ಅಭಿರುಚಿಕೆ ತಕ್ಕಂತೆ, ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಹಾಡುಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಅದರಂತೆ, ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬುದು ನಿರ್ಮಾಪಕರ ಮಾತು.
ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ನಾಯಕಿ ಅದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ, “ಆನಂದ್ ಆಡಿಯೋ’ದ ಶ್ಯಾಮ್, ಛಾಯಾಗ್ರಹಕ ಜೈ ಗಣೇಶ್, ಸಂಭಾಷಣೆಗಾರ ರಾಜಶೇಖರ್ ಸಿನಿಮಾದ ಹಾಡುಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
ಸದ್ಯ ಬ್ಯಾಕ್ ಟು ಬ್ಯಾಕ್ ಹಾಡುಗಳ ಬಿಡುಗಡೆಯ ಮೂಲಕ ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ನವೆಂಬರ್ 25ಕ್ಕೆ “ತ್ರಿಬಲ್ ರೈಡಿಂಗ್’ ಸಿನಿಮಾವನ್ನು ಥಿಯೇಟರ್‌ಗೆ ತರುತ್ತಿದೆ.