Advertisement

ಜನಮನ ಸೆಳೆದ ಗಿರಿಜನ ಉತ್ಸವ

06:13 PM Oct 01, 2021 | Team Udayavani |

ಬೀದರ: ಭಾರತ ಕಲೆ ಮತ್ತು ಸಂಸ್ಕೃತಿಯಿಂದಲೇ ಶ್ರೀಮಂತಿಕೆ ಪಡೆದಿದೆ. ಇಂದು ಟಿವಿ ಮತ್ತು ಮೊಬೈಲ್‌ ಪ್ರಭಾವದಿಂದ ನಶಿಸಿ ಹೋಗುತ್ತಿರುವ ಶ್ರೇಷ್ಠ ಕಲೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಅಗತ್ಯವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಕರೆ ನೀಡಿದರು.

Advertisement

ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಗಿರಿಜನ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತಿ ಹಾಳಾದರೆ ಎಲ್ಲವೂ ಹಾಳಾದಂತೆ. ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೊರಕುವ ಖುಷಿ ಬೇರೆಲ್ಲೂ ಸಿಗುವುದಿಲ್ಲ ಎಂದರು.

ಜಿಪ ಸಿಇಒ ಜಹೀರಾ ನಸೀಮ್‌ ಮಾತನಾಡಿ, ಶಿಕ್ಷಣದೊಂದಿಗೆ ಮಕ್ಕಳಲ್ಲಿ ಜಾನಪದ ಕಲೆಗಳ ಬಗ್ಗೆಯೂ ಆಸಕ್ತಿ ಮೂಡಿಸಬೇಕು. ದೇಶದ ಸಂಸ್ಕೃತಿ ವೈವಿಧ್ಯತೆಯಂದ ಕೂಡಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಲಹೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಜಾನಪದ ಸೊಗಡು ವಿಪುಲ ಇದೆ.

ಪರಿಶಿಷ್ಟ ಪಂಗಡದ ಕಲಾ ತಂಡಗಳಿಗೆ ಉತ್ತೇಜನ ನೀಡಲು ಪ್ರತಿ ವರ್ಷ ಗಿರಿಜನ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು. ಬೀದರ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೀರ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ರಂಗಮಂದಿರ ಆವರಣದಲ್ಲಿ ಜರುಗಿದ ಮೆರವಣಿಗೆಗೆ ಜೇವರ್ಗಿಯ ಪ್ರಕಾಶ ಮಂದೆ ಮತ್ತು ತಂಡದ ಚಿಟ್ಟೆ ಮೇಳ, ಬಸವಕಲ್ಯಾಣದ ರಾಮಲಿಂಗ ವಗ್ಗೆ ಹಾಗೂ ತಂಡದ ಡೊಳ್ಳು ಕುಣಿತ ಹಾಗೂ ಕೌಠಾದ ಶ್ರೀದೇವಿ ಮತ್ತು ತಂಡದ ಕೋಲಾಟ ಪ್ರದರ್ಶನ ಮೆರುಗು ನೀಡಿದವು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 2021-22ನೇ ಸಾಲಿನ ಗಿರಿಜನ ಉಪ ಯೋಜನೆಯಡಿ ಉತ್ಸವ ಆಯೋಜಿಸಲಾಗಿತ್ತು.

Advertisement

ಜಾನಪದ ಕಲೆಗಳ ಅನಾವರಣ
ಗಿರಿಜನ ಉತ್ಸವದಲ್ಲಿ ಪರಿಶಿಷ್ಟ ಪಂಗಡ ಕಲಾ ತಂಡಗಳು ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದವು. ಕಲೆ ಜತೆಗೆ ಕಲಾವಿದರ ವಿಭಿನ್ನ, ಭಾವ ಭಂಗಿಗಳೂ ಸಭಿಕರನ್ನು ಪುಳುಕಿತಗೊಳಿಸಿದವು. ಜಲಸಂಗಿಯ ಮಂಜುನಾಥ ತಂಡ ವಚನ ಗಾಯನ, ಚಿಟ್ಟಾದ ಅನಿಲಕುಮಾರ ತಂಡ ಜನಪದ ಗಾಯನ, ನಾಗೂರದ ಶಾಂತಮ್ಮ ತಂಡ ಸಂಪ್ರದಾಯ ಪದ, ಡೊಣಗಾಪುರದ ಶಾಂತಮ್ಮ ತಂಡ ದಾಸರ ಪದ, ಬೀದರನ ತುಕಾರಾಮ ಭೋಲೆ ಜಾನಪದ ಜಾದೂ, ಚಳಕಾಪುರದ ಯಲ್ಲಾಲಿಂಗ ರೊಟ್ಟೆ ತಂಡ ಶಾಸ್ತ್ರೀಯ ಸಂಗೀತ, ಬೀದರನ ಗೀತಾ ತಂಡ ಕುಟ್ಟುವ ಪದ, ಭಾಲ್ಕಿಯ ರೇಣುಕಾ ತಂಡ ಜಾನಪದ ಕಲೆ, ಕೌಠಾ(ಕೆ)ದ ಬೀರಪ್ಪ ತಂಡ, ಸಂಗೋಳಗಿಯ ಮಾರುತಿ ತಂಡ ಭಜನೆ, ಬೀದರನ ಓಂಶೇಖರ ತಂಡ ಭಾವಗೀತೆ, ಔರಾದನ ಸಂಗಮ್ಮ ತಂಡ ಸಾಂಪ್ರದಾಯಿಕ ಪದ, ಬಾಬು ತಂಡ ಜಾನಪದ ಕಲೆ, ಬೀದರನ ಸೃಜನ್ಯ ತಂಡ ಜಾನಪದ ಗಾಯನ, ಮೋಳಕೇರಿಯ ಮಲ್ಲಮ್ಮ ತಂಡ ಸುಗಮ ಸಂಗೀತ, ಜಲಸಂಗಿಯ ಸೋನಮ್ಮ ತಂಡ ಜಾನಪದ ಗಾಯನ, ಹುಮನಾಬಾದನ ನಿತಿನ್‌ ತಂಡ ತತ್ವಪದ, ಹಳ್ಳಿಖೇಡದ ಶಿವಾನಂದ ತಂಡ ಜಾನಪದ ಗಾಯನ, ಘಾಟಬೋರಾಳದ ಸುನೀಲ್‌ ತಂಡ ಡಪ್ಪಿನ ಪದ, ಯಲ್ಲಾಲಿಂಗ ತಂಡ ಮಿಮಿಕ್ರಿ ಹಾಗೂ ಭಾಲ್ಕಿಯ ಕವಿತಾ ತಂಡ ಭಜನೆ ಪ್ರದರ್ಶಿಸಿ ಕಲಾಸಕ್ತರ ಮನ ತಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next