ಬೀದರ: ತಾಲೂಕಿನ ಬಾವಗಿ ಗ್ರಾಮದ ಶ್ರೀಗುರು ಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2020-21ನೇ ಸಾಲಿನ
ಗಿರಿಜನ ಉಪಯೋಜನೆಯಡಿ “ಗಿರಿಜನ ಉತ್ಸವ’ ಕಾರ್ಯಕ್ರಮ ನಡೆಯಿತು.
ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶಂಪುರ್ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಿರಿಜನ ಉತ್ಸವದಂತ ಕಾರ್ಯಕ್ರಮಗಳು ಅಭಿವೃದ್ಧಿಗೆ ಪೂರಕವಾಗಲಿವೆ. ಸರ್ಕಾರಗಳು ಗಿರಿಜನರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಯೋಜನೆ, ಕಾರ್ಯಕ್ರಮ ರೂಪಿಸಬೇಕಾಗಿದೆ. ನನ್ನ ಕ್ಷೇತ್ರದ ಜನತೆಗಾಗಿ ಉತ್ತಮ ಯೋಜನೆಗಳನ್ನು ತರಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಗಿರಿಜನರು ಸದುಪಯೋಗ ಪಡೆದುಕೊಳ್ಳಬೇಕು. ಗಿರಿಜನರಿಗಾಗಿಯೇ ಸರ್ಕಾರದ ಅನೇಕ ಯೋಜನೆಗಳು ಇದ್ದಾವೆ. ಸಂಬಂಧಿ ಸಿದ ಇಲಾಖೆಗಳಿಗೆ ಭೇಟಿ ನೀಡಿ ಯೋಜನೆಗಳು, ಸೌಲಭ್ಯಗಳ ಮಾಹಿತಿ ಪಡೆದು ಅಭಿವೃದ್ಧಿ ಪಥದೆಡೆಗೆ ಸಾಗಬೇಕೆಂದು ಹೇಳಿದರು. ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಪಿಡಿಒ ಸುಜಾತ ನಂದಿ, ಮಂದಿರದ ಅರ್ಚಕ ಶಿವಕುಮಾರ ಸ್ವಾಮಿ, ರೇವಣಸಿದ್ದ ಸ್ವಾಮಿ, ಅನಿಲ ಪಾಟೀಲ ಇದ್ದರು.