ಚಿತ್ರದುರ್ಗ: ರಾಜ್ಯಮಟ್ಟದ ಬುಡಕಟ್ಟು ಉತ್ಸವವನ್ನು ನ.8 ಮತ್ತು 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಇತಿಹಾಸ, ಕಲೆ ಹಾಗೂ ಪರಂಪರೆ ಉಳಿಸುವ ಉದ್ದೇಶದಿಂದ ಸರ್ಕಾರದಿಂದ ಉತ್ಸವ ಆಚರಿಸಲಾಗುತ್ತಿದೆ ಎಂದರು.
ಉತ್ಸವದಲ್ಲಿ ಬುಡಕಟ್ಟು ಸಮುದಾಯದವರು ತಯಾರಿಸಿದ ಕರಕುಶಲ ವಸ್ತುಗಳು, ನಾಟಿ ಔಷ ಧ ಪ್ರದರ್ಶನ ಹಾಗೂ ಮಾರಾಟ, ಆಹಾರ ಮೇಳ ಆಯೋಜಿಸಲಾಗುವುದು. ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಖಾದ್ಯಗಳ ಪರಿಚಯಿಸಲು ಚಿಂತನೆ ನಡೆದಿದ್ದು, ವಿಶೇಷವಾಗಿ ಬಂಬೂ ಬಿರಿಯಾನಿ ಆಕರ್ಷಕ ಖಾದ್ಯವಾಗಲಿದೆ. ಇದರೊಂದಿಗೆ ಕಾಡು ಜೇನುತುಪ್ಪ ಹಾಗೂ ಕಾಡು ಗೆಣಸುಗಳಿಂದ ತಯಾರಿಸಲಾದ ತರಾವರಿ ಖಾದ್ಯಗಳು ವಿಶೇಷ ಆಕರ್ಷಣೆಯಾಗಲಿವೆ ಎಂದರು.
ಇದನ್ನೂ ಓದಿ:ಮನೆ ಬದುಕೇ ಜಾನಪದ-ಜಾನಪದವೇ ಸಂಸ್ಕೃತಿ
ಸಂಜೆ ಬುಡಕಟ್ಟು ಕಲಾ ತಂಡಗಳಿಂದ ನೃತ್ಯ, ಕುಣಿತ, ಬುಡಕಟ್ಟು ಹಬ್ಬಗಳ ಆಚರಣೆ ಮುಂತಾದ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ನಿರ್ಮಿಸಿರುವ ಸಾಕ್ಷ್ಯಚಿತ್ರಗಳ ಪ್ರದರ್ಶನವಿರಲಿದೆ. ಬುಡಕಟ್ಟು ಸಮುದಾಯಗಳಿಗೆ ಶಕ್ತಿ ತುಂಬಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನ ನಡೆದಿದೆ ಎಂದರು.