Advertisement

ಜಾರ್ಖಂಡ್‌ನ‌ಲ್ಲಿದೆ ಬುಡಕಟ್ಟು ಬಿಲ್ಗಾರರ ಕಾರ್ಖಾನೆ!

06:00 AM Mar 12, 2018 | Team Udayavani |

ಬೆಂಗಳೂರು: ಜಾರ್ಖಂಡ್‌ನ‌ ಜೆಮ್‌ಶೆಡ್‌ಪುರದಲ್ಲೊಂದು ಬಿಲ್ಗಾರಿಕೆ ಪ್ರತಿಭೆಗಳ ಕಾರ್ಖಾನೆಯೇ ಇದೆ!

Advertisement

ಏಷ್ಯಾಕಪ್‌ ಬಿಲ್ಗಾರಿಕೆಯ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಗೋರಾ ಅವರಿಂದ ಅಂತಾರಾಷ್ಟ್ರೀಯ ಮಿಂಚು ದೀಪಿಕಾ ಕುಮಾರಿ ಸಹಿತ 200ಕ್ಕೂ ಹೆಚ್ಚು ಬಿಲ್ಗಾರರು ಈ ಒಂದೇ ತರಬೇತಿ ಶಾಲೆಯಿಂದ ಹೊರಹೊಮ್ಮಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಬುಡಕಟ್ಟು ಪ್ರತಿಭೆಗಳಿಗೆ ಆಧುನಿಕ ಬಿಲ್ವಿದ್ಯೆ ಕಲಿಸುತ್ತಿರುವ ಜೆಮ್‌ಶೆಡ್‌ಪುರದ ದುಗ್ನಿ ಬಿಲ್ಗಾರಿಕೆ ಶಾಲೆ ಈಗ ಸುದ್ದಿಯ ಕೇಂದ್ರವಾಗಿದೆ.

217 ಬಿಲ್ಗಾರರ ಕೇಂದ್ರ:  ದುಗ್ನಿಯ ಬಿಲ್ಗಾರರ ಕೇಂದ್ರದಲ್ಲಿ ತರಬೇತಿ ಪಡೆದು ಒಟ್ಟು 22 ಅಂತಾರಾಷ್ಟ್ರೀಯ, 195 ರಾಷ್ಟ್ರೀಯ ಬಿಲ್ಗಾರರು ಮಿಂಚಿದ್ದಾರೆ. ಇವರೆಲ್ಲರೂ ಬುಡಕಟ್ಟು ಜನಾಂಗದ ಬಡ ಪ್ರತಿಭಾವಂತರು. ಗುಡ್ಡಗಾಡಿನಲ್ಲಿ ವಾಸಿಸುವ ಆಚಾರ-ವಿಚಾರ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರ ಜತೆ ಜೊತೆಗೆ ಅವರೊಳಗಿನ ನೈಜ ಪ್ರತಿಭೆ ಹೊರ ತರುವಲ್ಲೂ ಜೆಮ್‌ಶೆಡ್‌ಪುರ‌ ಸರೈಕೆಲ್‌ ಎಂಬ ಒಂದೇ ಊರು ದೊಡ್ಡ ಕೊಡುಗೆಯನ್ನೇ ನೀಡಿದೆ. ಹೊರಲೋಕಕ್ಕೆ ಅಷ್ಟೊಂದು ತಿಳಿಯದಿರುವ ಸರೈಕೆಲ್‌ ಬಿಲ್ಲುಗಾರಿಕೆಯಿಂದಲೇ ಗುರುತಿಸಿಕೊಂಡಿದೆ.

ಈ ಬಗ್ಗೆ ಸ್ವತಃ ದುಗ್ನಿ ಬಿಲ್ಗಾರಿಕೆ ಕೇಂದ್ರದ ಕೋಚ್‌ ಶ್ರೀನಿವಾಸ್‌ ರಾವ್‌ “ಉದಯವಾಣಿ’ ಜತೆ ಮಾತನಾಡಿದ್ದಾರೆ. ದುಗ್ನಿ ಬಿಲ್ಗಾರಿಕೆ ಅಕಾಡೆಮಿ, ತರಬೇತಿ ವಿವರ, ಸಾಧನೆ, ವಿಶೇಷತೆ ಸೇರಿದಂತೆ ಹಲವು ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ದುಗ್ನಿ ಕೇಂದ್ರ ದೇಶಕ್ಕೆ ಮಾದರಿ: ದೇಶಾದ್ಯಂತ ಬುಡಕಟ್ಟು ಜನಾಂಗದ ಅನೇಕ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಅವರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನೂ ರೂಪಿಸಿದೆ. ಅಂತೆಯೇ ನಮ್ಮಲ್ಲೂ ಕಾಡಿನ ಮಕ್ಕಳಿಗಾಗಿ ಸರ್ಕಾರ ಹಮ್ಮಿಕೊಂಡ ಯೋಜನೆ ಅತೀ ಹೆಚ್ಚು ಯಶಸ್ವಿಯಾಗಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ 11 ಅಂತಾರಾಷ್ಟ್ರೀಯ ಸ್ಪರ್ಧಿಗಳು, ಒಟ್ಟಾರೆ 22 ಮಂದಿ. ರಾಷ್ಟ್ರೀಯ ವಿಭಾಗದಲ್ಲಿ 120 ಮಹಿಳೆಯರು, 75 ಬಾಲಕಿಯರನ್ನು ಪರಿಚಯಿಸಿದ್ದೇವೆ.

Advertisement

ಬಾಲಕರ ವಿಭಾಗದಲ್ಲಿ 2006ರಲ್ಲಿ ಪಲ್ಟನ್‌ ಹನ್ಸಡಾ ವಿಶ್ವ ಚಾಂಪಿಯನ್‌ ಆಗಿದ್ದಾರೆ. 2007ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಸುಮಿತ್‌ ಪದಕ ಗೆದ್ದಿದ್ದಾರೆ. ಅವರಲ್ಲದೆ ಸಂಜಯ್‌, ಬಬನ್‌ ಕುಮಾರ್‌, ರಾನ್ಸೊ, ಸತೀಶ ಸರ್ದಾರ್‌ ಸೇರಿದಂತೆ 11 ಮಂದಿ ಅಂತಾರಾಷ್ಟ್ರೀಯ ಬಿಲ್ಗಾರಿಕೆಯಲ್ಲಿ ಮಿಂಚಿದ್ದಾರೆ. ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ, ಮಂಜುದಾ ಸಾಯ್‌, ಸಕ್ರೊ ಬೆರ್ಸಾ, ಸುಮನ್‌ಲತಾ ಮರ್ಮು, ಆಶ್ರಿತಾ ಸೇರಿದಂತೆ ಒಟ್ಟಾರೆ 11 ಮಂದಿ  ಅಂ.ರಾ. ಕೂಟದಲ್ಲಿ ದೇಶ ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ ಎಂದು ರಾವ್‌ ತಿಳಿಸಿದರು.

ಸದ್ಯ 48 ಪ್ರತಿಭೆಗಳಿಗೆ ತರಬೇತಿ: ಏಷ್ಯಾ ಕಪ್‌ನಲ್ಲಿ ಗೋರಾ ಪದಕ ಗೆದ್ದಿದ್ದಾನೆ. ಅಂತಹ ಒಟ್ಟು 48(ಬಾಲಕ-ಬಾಲಕಿ ಸೇರಿ) ಬಿಲ್ಲುಗಾರರು ಸದ್ಯ ನಮ್ಮಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರೆಲ್ಲರು ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿದವರು. ಮೂಲತಃ ಅವರೆಲ್ಲರು ಬುಡಕಟ್ಟು ಜನಾಂಗದವರು. ಮನೆ-ಮನೆಗೆ, ವಿವಿಧ ಶಾಲೆಗಳಿಗೆ ಹೋಗಿ ಅವರನ್ನು ಆಯ್ಕೆ ಮಾಡಿ ತಂದು ಒಂದೆಡೆ ಇರಿಸಿ, ಊಟ, ತಿಂಡಿ, ಶಿಕ್ಷಣ, ಬಟ್ಟೆ ಎಲ್ಲ ಸೌಲಭ್ಯ ನೀಡುತ್ತೇವೆ. ದೇಶಕ್ಕೋಸ್ಕರ ಸಿದ್ಧಮಾಡುತ್ತಿದ್ದೇವೆ ಎನ್ನುವುದು ರಾವ್‌ ಹೆಮ್ಮೆಯ ಮಾತು.

ಹೆಬ್ಬೆರಳು ಬಳಸದ ಆಧುನಿಕ ಏಕಲವ್ಯರಿವರು!
ಮಹಾಭಾರತದ ಕಥೆಯಲ್ಲಿ ಗುರು ದ್ರೋಣಾಚಾರ್ಯರ ಮೇಲಿನ ಪ್ರೀತಿಗಾಗಿ ಏಕಲವ್ಯ ಹೆಬ್ಬೆರಳನ್ನು ಕತ್ತರಿಸಿ ಗುರು ದಕ್ಷಿಣೆಯಾಗಿ ನೀಡುವ ಮನಕಲಕುವ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ದುಗ್ನಿಯಲ್ಲಿ ಈ ಕಥೆ ಈಗಲೂ ನೆನಪಾಗುತ್ತದೆ. ಹೌದು, ಅಂದಿನ ಏಕಲವ್ಯನ ತ್ಯಾಗದ ನೆನಪಿಗಾಗಿ ಇಂದು ಇಲ್ಲಿನ ಕ್ರೀಡಾಪಟುಗಳು ಹೆಬ್ಬೆರಳನ್ನು ಉಪಯೋಗಿಸದೇ ಬಾಣ ಹೂಡುತ್ತಾರೆ. ಇಲ್ಲಿನ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಹೀಗೆಯೆ ಬಾಣ ಹೂಡುತ್ತಾರೆ.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next