Advertisement

Irrigation: ವೆಂಕಟೇಶ್ವರ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ-ಶಾಸಕ ಸಿದ್ದು ಸವದಿ 

06:57 PM Jan 26, 2024 | Team Udayavani |
ರಬಕವಿ-ಬನಹಟ್ಟಿ: ತಾಲ್ಲೂಕಿನ ವೆಂಕಟೇಶ್ವರ ಏತ ನೀರಾವರಿ ಯೋಜನೆಯು ನೂರಕ್ಕೆ ನೂರರಷ್ಟು ಮುಕ್ತಾಯಗೊಂಡಿದೆ. ಕೆಲವು ಕಾರಣಗಳಿಂದ ಯೋಜನೆ ವಿಳಂಬವಾಗಿತ್ತು. ಇಂದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ನಾವಲಗಿ ಗ್ರಾಮದ ಹತ್ತಿರ ಇರುವ ಕಾಲುವೆಗೆ ನೀರು ಹರಿಯುತ್ತಿರುವುದನ್ನು ವೀಕ್ಷಣೆ ಮಾಡಿ  ಮಾತನಾಡಿದರು.
ವೆಂಕಟೇಶ್ವರ ಏತ ನೀರಾವರಿ ಯೋಜನೆ ಹಾಗೂ ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗಳು ಆರು ತಿಂಗಳ ಹಿಂದೆಯೇ ಮುಕ್ತಾಯಗೊಂಡಿದ್ದವು. ಕೆಲವು ಕಾರಣಗಳಿಂದ ವಿಳಂಬವಾಗಿದ್ದವು.
ಕುಲಹಳ್ಳಿ ಹನ್ನೂರು ಏತ ನೀರಾವರಿ ಯೋಜನೆಯಿಂದಾಗಿ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳದ ಹದಿನಾಲ್ಕು ಹಳ್ಳಿಗಳ ನೂರಾರು ಜನ ರೈತರ ಸಾವಿರಾರು ಎಕರೆ ಭೂ ಪ್ರದೇಶಕ್ಕೆ ಅನುಕೂಲವಾಗಲಿದೆ. ರೈತರ ಹಿತದೃಷ್ಠಿಯಿಂದ ಮತ್ತು ಈ ಭಾಗದಲ್ಲಿ ಬೆಳೆಗಳು ಒಣಗುತ್ತಿರುವುದರಿಂದ ನಾಲ್ಕಾರು ದಿನಗಳ ಕಾಲ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಮತ್ತು ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ.
ಕುಲಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಯ ಪಂಪಹೌಸ್ ನಲ್ಲಿ ಮೋಟರ್ ದುರಸ್ತಿ ಇರುವುದರಿಂದ ವಿಳಂಬವಾಗಿದೆ. ಕೇವಲ ನಾಲ್ಕೈದು ದಿನಗಳಲ್ಲಿಅದಕ್ಕೂ ಕೂಡಾ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು.
ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರನ್ನು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಅಧಿಕೃತ ಚಾಲನೆಗೆ ದಿನಾಂಕ ನಿರ್ಧರಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಎರಡು ಯೋಜನೆಗಳನ್ನು ಆರಂಭಿಸುವಂತೆ ಇಲಾಖೆಯ ಅಧಿಕಾರಗಳಿಗೆ ಸಾಕಷ್ಟು ಬಾರಿ ತಿಳಿಸಲಾಗಿತ್ತು. ಮತ್ತು ಸಭೆಗಳನ್ನು ಕೂಡಾ ಮಾಡಲಾಗಿತ್ತು. ಆರು ತಿಂಗಳ ಹಿಂದೆಯೇ ನೀರು ಹರಿಸುವಂತೆ ಒತ್ತಾಯ ಮಾಡಲಾಗತ್ತು. ಬರಗಾಲ ಇರುವುದರಿಂದ ರೈತರ ಜಮೀನುಗಳಿಗೆ, ಕೆರೆಗಳನ್ನು ತುಂಬಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಮನವ್ವ ಕಂಚು, ಮುತ್ತಪ್ಪ ಅಂಗಡಿ, ಆನಂದ ಕಂಪು, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಲಕ್ಕಪ್ಪ ಪಾಟೀಲ, ಬಸಪ್ಪ ಬಳವಾಡ, ಹನಮಂತ ಸವದಿ, ಹನಮಂತ ಮಗದುಮ್, ಸಂಗಪ್ಪ ಉಪ್ಪಲದಿನ್ನಿ, ಅನ್ನಪ್ಪ ನಂದಗಾವ, ಶಿವಾಜಿ ಸಾವಂತ, ರೇಖಾ ಕಾಂತಿ, ಶಂಕರ ಹುನ್ನೂರ, ಭಾಗೀರತಿ ಮಗದುಮ್, ಬಸವರಾಜ ಗಣಿ, ಸುಭಾಸ ಕಾಂತಿ, ರಾಜು ಕದಂ ಸೇರಿದಂತೆ ಕುಲಹಳ್ಳಿ, ನಾವಲಗಿ ಗ್ರಾಮದ ರೈತರು ಇದ್ದರು.
ವೆಂಕಟೇಶ್ವರ ಏತ ನೀರಾವರಿ ಯೋಜನೆಯಿಂದ  ಈ ಭಾಗದ ರೈತರ ದಶಕದ ಕನಸು ಇಂದು ನನಸಾಗಿದೆ. ಸಂತಸ ತಂದಿದೆ. ನೀರಾವರಿ ಯೋಜನೆಯಿಂದಾಗಿ ಈ ಭಾಗದ ರೈತರಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಅನುಕೂಲವಾಗಲಿದೆ.
– ಗುರು ಮರಡಿಮಠ ನಾವಲಗಿ ಗ್ರಾಮದ ರೈತ
Advertisement

Udayavani is now on Telegram. Click here to join our channel and stay updated with the latest news.

Next