Advertisement

ಸನ್‌ಗ್ಲಾಸ್‌ಗಿದೆ ಬಿಗ್‌ ಡಿಮ್ಯಾಂಡ್‌

12:45 PM Mar 28, 2017 | Karthik A |

ಎಲ್ಲರ ಆರೋಗ್ಯದ ಕಾಳಜಿಯಿಟ್ಟುಕೊಂಡೇ ಫ್ಯಾಶ‌ನ್‌ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಸನ್‌ಗ್ಲಾಸ್‌ಗಳಿಗೆ ಆರಂಭದಲ್ಲಿ ಫ್ಯಾಶನ್‌ ಪ್ರಿಯರು ಮನಸೋತಿದ್ದರೆ, ಅನಂತರದ ದಿನಗಳಲ್ಲಿ ಇದರ ಪ್ರಯೋಜನಗಳನ್ನು ಅರಿತು ಹಲವರು ನಿತ್ಯೋಪಯೋಗಿ ವಸ್ತುವಾಗಿ ಬಳಸಲಾರಂಭಿಸಿದ್ದಾರೆ. ಯುವ ಮನಸ್ಸುಗಳಂತೂ ಸನ್‌ಗ್ಲಾಸ್‌ ಮಾಡಿದ ಮೋಡಿಗೆ ಮನಸೋತಿರುವುದರಿಂದಲೇ ಸನ್‌ಗ್ಲಾಸ್‌ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ.

Advertisement

ಮಾರುಕಟ್ಟೆ ಕ್ಷೇತ್ರ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಹೊಸ ಹೊಸ ವಸ್ತುಗಳು ಪ್ರವೇಶ ಪಡೆಯುತ್ತಿವೆ. ಕೆಲವೊಂದು ವಸ್ತುಗಳು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇಂತಹ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ವಸ್ತುಗಳಲ್ಲಿ ಸನ್‌ಗ್ಲಾಸ್‌ ಕೂಡ ಪ್ರಮುಖ ಸ್ಥಾನ ಪಡೆದಿದೆ. ಕಣ್ಣಿನ ರಕ್ಷಣೆಯ ಜತೆಗೆ ಫ್ಯಾಶನ್‌ ಆಗಿಯೂ ಇಂತಹ ಗ್ಲಾಸ್‌ಗಳನ್ನು ಉಪಯೋಗಿಸುತ್ತಿರುವುದು ಸಾಮಾನ್ಯವಾಗಿದೆ.

ಪ್ರಸ್ತುತ ಯುವ ಜನಾಂಗ ಸನ್‌ಗ್ಲಾಸ್‌ಗಳನ್ನು ಹೆಚ್ಚು ಇಷ್ಟಪಡುತ್ತಿದೆ. ಹೀಗಾಗಿ ಅದಕ್ಕಾಗಿಯೇ ಅಲ್ಲಲ್ಲಿ ಶೋ ರೂಮ್‌ಗಳು ಹುಟ್ಟಿಕೊಳ್ಳುತ್ತಿವೆ. ಸನ್‌ಗ್ಲಾಸ್‌ಗಳಲ್ಲಿ ಅತಿ ನೇರಳೆ ಕಿರಣಗಳನ್ನು ರಕ್ಷಿಸುವ ಬ್ಲಾಕರ್‌ಗಳನ್ನು ಅಳವಡಿಸಿರುವುದರಿಂದ ಅವು ಕಣ್ಣಿಗೆ ಹಿತ ನೀಡುತ್ತವೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಇಂತಹ ಗ್ಲಾಸ್‌ಗಳನ್ನು ಉಪಯೋಗಿಸುತ್ತಾರೆ. ಬಿಸಿಲಿನ ಸಂದರ್ಭದಲ್ಲಿ ಸನ್‌ಗ್ಲಾಸ್‌ಗಳು ಕಣ್ಣಿಗೆ ತಂಪನ್ನು ನೀಡಿದರೆ, ರಾತ್ರಿ ಉಪಯೋಗಿಸುವ ನೈಟ್‌ ಡ್ರೈವ್‌ ಎಂಬ ಬೇರೆಯೇ ಗ್ಲಾಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪುರುಷರು, ಮಹಿಳೆಯರು, ಮಕ್ಕಳಿಗೆ ಹೀಗೆ ಬೇರೆ ಬೇರೆ ವೈವಿಧ್ಯಗಳಲ್ಲಿ ಗ್ಲಾಸ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. 

ಹತ್ತು ಹಲವು ಡಿಸೈನ್‌
ಸನ್‌ಗ್ಲಾಸ್‌ಗಳಲ್ಲಿ ಏವಿಯೇಟರ್‌ ಸನ್‌ಗ್ಲಾಸ್‌ಗಳು, ಪ್ಲಾಸ್ಟಿಕ್‌ ಏಸಿಯೇಟ್‌ ಸನ್‌ಗ್ಲಾಸ್‌, ಪೊಲೊರೈಡ್‌ ಸನ್‌ಗ್ಲಾಸ್‌, ವೇಸರರ್‌ ಸನ್‌ಗ್ಲಾಸ್‌, ಮಹಿಳೆಯರಿಗೆ ಲೇಡಿಸ್‌ ಬಗ್ನಾಸ್‌, ಮಕ್ಕಳಿಗೆ ಡಾಸ್‌ ಟೈಟಾನ್‌ ಸನ್‌ಗ್ಲಾಸ್‌ಗಳು ಹೀಗೆ ಹತ್ತು ಹಲವು ಡಿಸೈನ್‌ಗಳಲ್ಲಿ ಲಭ್ಯವಿವೆ. ಪ್ರಸ್ತುತ ಎಲ್ಲ ಡಿಸೈನ್‌ಗಳಿಗೂ ಉತ್ತಮ ಬೇಡಿಕೆ ಇದೆ.

ಕಣ್ಣಿಗೆ ರಕ್ಷಣೆ
ಸನ್‌ ಗ್ಲಾಸ್‌ಗಳನ್ನು ಕೆಲವರು ಫ್ಯಾಶನ್‌ ಆಗಿ ಉಪಯೋಗಿಸಿದರೂ ಇನ್ನು ಕೆಲವರು ಅದನ್ನು ಕಣ್ಣಿನ ರಕ್ಷಣೆಗಾಗಿ ಉಪಯೋಗಿಸುತ್ತಾರೆ. ವಾಹನಗಳಲ್ಲಿ ತೆರಳುವಾಗ ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಇಂತಹ ಗ್ಲಾಸ್‌ಗಳನ್ನು ಉಪಯೋಗಿಸಿದರೆ ಅಪಾಯವನ್ನು ತಪ್ಪಿಸಬಹುದಾಗಿದೆ. 

Advertisement

ಕಣ್ಣು ಎಂಬುದು ದೇಹದ ಅತ್ಯಂತ ಮುಖ್ಯಭಾಗವಾಗಿದೆ. ಇದಕ್ಕೆ ಸಣ್ಣ ತೊಂದರೆ ಎದುರಾದರೂ ನಾವು ಜಗತ್ತಿನ ಬೆಳಕನ್ನೇ ಕಾಣಲಾಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಮುಖ್ಯವಾಗಿ ಕಣ್ಣಿಗೆ ಧೂಳಿನಿಂದ ಹೆಚ್ಚು ತೊಂದರೆ ಎದುರಾಗುತ್ತದೆ. ಧೂಳಿನ ಸೂಕ್ಷ್ಮ ಕಣಗಳು ಕಣ್ಣನ್ನು ಸೇರಿ ತೊಂದರೆ ನೀಡುತ್ತವೆ. ಇಂತಹ ಧೂಳಿನಿಂದ ರಕ್ಷಿಸಿಕೊಳ್ಳಲು ಸನ್‌ಗ್ಲಾಸ್‌ಗಳು ಮುಖ್ಯವಾಗುತ್ತವೆ. 

ಅತಿಯಾದ ಬೆಳಕು, ಕಡಿಮೆ ಬೆಳಕಿನಿಂದಲೂ ಕಣ್ಣಿನ ತೊಂದರೆ ಸೃಷ್ಟಿಯಾಗುತ್ತದೆ. ಅತಿಯಾದ ಬೆಳಕಿನಿಂದ ಕಣ್ಣು ಬಿಡಲಾಗದ ಸ್ಥಿತಿಯೂ ನಿರ್ಮಾಣವಾಗಬಹುದು. ಜತೆಗೆ ಕೆಲವೊಂದು ಕ್ರಿಮಿಕೀಟಗಳಿಂದಲೂ ಕಣ್ಣಿನ ತೊಂದರೆ ಎದುರಾಗಬಹುದು. ಅಂತಹ ವಾಹನಗಳಲ್ಲಿ ವೇಗವಾಗಿ ತೆರಳುವ ಸಂದರ್ಭದಲ್ಲಿ ಕೀಟಗಳು ಕಣ್ಣಿಗೆ ಬಡಿದು ದೊಡ್ಡ ತೊಂದರೆ ನೀಡುತ್ತವೆ. ಇವೆರಡಕ್ಕೂ ಸನ್‌ ಗ್ಲಾಸ್‌ ಉತ್ತಮವಾಗಿದೆ.

ಯೂವಿ ರೇಸ್‌ನಿಂದ ರಕ್ಷಣೆ
ಸೂರ್ಯನ ಅಲ್ಟ್ರಾವೈಲೆಟ್‌ ಕಿರಣ (ಯೂವಿ ರೇಸ್‌)ಗಳಿಂದ ಕಣ್ಣು ಸೇರಿದಂತೆ ಇಡೀ ದೇಹಕ್ಕೆ ತೊಂದರೆ ಎದುರಾಗುತ್ತವೆ. ಇದಕ್ಕಾಗಿ ಸನ್‌ಗ್ಲಾಸ್‌ಗಳನ್ನು ಧರಿಸಿಕೊಂಡರೆ ಕಣ್ಣಿನ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ. ಯೂವಿ ಎ ಹಾಗೂ ಬಿ ಕಿರಣಗಳಿಂದ ಸ್ಕಿನ್‌ ಟ್ಯಾನಿಂಗ್‌, ಸ್ಕಿನ್‌ ಕ್ಯಾನ್ಸರ್‌, ಸ್ನೋ ಬ್ಲೈಂಡ್‌ನೆಸ್‌, ಮ್ಯಾಕುಲರ್‌ ಡೈಜೆಸ್ಟ್‌ ನಂತಹ ಕಾಯಿಲೆಗಳು ಬರುತ್ತವೆ. ಹೀಗಾಗಿ ಸನ್‌ಗ್ಲಾಸ್‌ ಇವುಗಳಿಗೆ ಕೊಂಚ ಮಟ್ಟಿನ ಪರಿಹಾರ ನೀಡುತ್ತದೆ.

4 ಸಾವಿರ ರೂ.ಗಳಿಗೆ ಬೇಡಿಕೆ
ರೇಬಾನ್‌, ಫಾಸ್ಟ್‌ಟ್ರ್ಯಾಕ್‌, ಟೈಟಾನ್‌ ಗ್ಲೇರ್, ಟೋಮಿ ಹಿಲ್‌ಫಿಗರ್‌ ಹೀಗೆ ಹಲವು ಬ್ರ್ಯಾಂಡ್‌ಗಳ ಸನ್‌ ಗ್ಲಾಸ್‌ಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬ್ರ್ಯಾಂಡೆಡ್‌ ಗ್ಲಾಸಸ್‌ ಸುಮಾರು 600- 700 ರೂ.ಗಳಿಂದ ಆರಂಭವಾದರೆ ರೂ. 10 ಸಾವಿರಕ್ಕೂ ಅಧಿಕ ಬೆಲೆಯ ಸನ್‌ ಗ್ಲಾಸಸ್‌ ಲಭ್ಯವಾಗುತ್ತದೆ. ಸಾಮಾನ್ಯವಾಗಿ ಯುವ ಜನಾಂಗವೇ ಇಂತಹ ಗ್ಲಾಸ್‌ಗಳನ್ನು ಖರೀದಿಸುತ್ತಿದ್ದು, 4,000 ರೂ.ವರೆಗಿನ ಗ್ಲಾಸಸ್‌ಗಳಿಗೆ ಇಲ್ಲಿನ ಹೆಚ್ಚಿನ ಬೇಡಿಕೆ ಇದೆ. 

ಯುವ ಜನಾಂಗ ಇಷ್ಟಪಡುತ್ತದೆ
ಪ್ರಸ್ತುತ ಯುವ ಜನಾಂಗ ಸನ್‌ಗ್ಲಾಸ್‌ಗಳನ್ನು ಇಷ್ಟಪಡುತ್ತದೆ. ಕಣ್ಣುಗಳಿಗೆ ರಕ್ಷಣೆ ನೀಡಲು ಇಂತಹ ಗ್ಲಾಸ್‌ಗಳು ಅತಿ ಮುಖ್ಯವಾಗಿವೆ. ಇಲ್ಲಿ ಎಲ್ಲ ಡಿಸೈನ್‌ಗಳಿಗೂ ಬೇಡಿಕೆ ಇದ್ದು, ಸುಮಾರು 4 ಸಾವಿರ ರೂ.ಗಳ ವರೆಗಿನ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತವೆ. ದುಬಾರಿ ಬೆಲೆಯ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನೂ ಇಷ್ಟಪಡುವವರಿದ್ದಾರೆ ಎನ್ನುತ್ತಾರೆ ಟೈಟಾನ್‌ ಐಪ್ಲಸ್‌ನ ಸ್ಟೋರ್‌ ಮ್ಯಾನೇಜರ್‌ ಸತೀಶ್‌.

ಎಚ್ಚರ ಅಗತ್ಯ
ಯುವಜನಾಂಗ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸನ್‌ಗ್ಲಾಸ್‌ಗಳನ್ನು ಉಪಯೋಗಿಸುತ್ತದೆ. ಆದರೆ ಇಂತಹ ಗ್ಲಾಸ್‌ಗಳನ್ನು ಉಪಯೋಗಿಸುವಾಗ ಎಚ್ಚರಿಕೆ ಅತಿ ಅಗತ್ಯ. ಏಕೆಂದರೆ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಗ್ಲಾಸ್‌ಗಳನ್ನು ಹಾಕಿಕೊಂಡರೆ ದೃಷ್ಟಿದೋಷದ ಜತೆಗೆ ತಲೆನೋವು, ಮೈಗ್ರೇನ್‌ನಂತಹ ಕಾಯಿಲೆಗಳೂ ಬರುವ ಸಾಧ್ಯತೆ ಇದೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next