Advertisement

Kadri: ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣ ಹೋಮ

03:39 PM Aug 07, 2024 | Team Udayavani |

ಕದ್ರಿ: ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರು ನಗರದಲ್ಲಿ ಮರಗಳ ಮಾರಣ ಹೋಮ ನಿಂತಿಲ್ಲ. ಸುಮಾರು 15 ವರ್ಷದಿಂದ ಕದ್ರಿ ಶಿವಭಾಗ್‌ ಪ್ರದೇಶದಲ್ಲಿ ನಗರದ ಜನತೆಗೆ ನೆರಳಾಗುತ್ತಿದ್ದ 8 ಮರಗಳನ್ನು ಕಡಿಯಲಾಗಿದೆ.  ಅರಣ್ಯ ಇಲಾಖೆಯ ಮೂಲಕ ನೆಡಲಾಗಿರುವ ಮರಗಳನ್ನು ಇಲಾಖೆಯ ಗಮನಕ್ಕೂ ತರದೆ ಪಾಲಿಕೆ ರಸ್ತೆ ವಿಸ್ತರಣೆ ಕೆಲಸ ಕಾರ್ಯದ ವೇಳೆ ಕಡಿದು ಹಾಕಲಾಗಿದೆ. ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

15 ವರ್ಷಗಳ ಹಿಂದೆ ಸ್ಥಳೀಯರ ಮನವಿಯ ಮೇರೆಗೆ ಅರಣ್ಯ ಇಲಾಖೆ ಮುಂದಾಳತ್ವದಲ್ಲಿ ಶಿವಬಾಗ್‌ ಮುಖ್ಯ ರಸ್ತೆಯಲ್ಲಿ “ಬಾದಾಮ್‌’ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಇವುಗಳು ಬೆಳೆದು ಸ್ಥಳೀಯ ನಿವಾಸಿಗಳಿಗೆ ಆಸರೆಯಾಗಿದ್ದವು ಮರಗಳನ್ನು ಉಳಿಸುವಂತೆ ಪಾಲಿಕೆಗೆ ಮನವಿ ಮಾಡಲಾಗಿತ್ತು. ಆದರೆ ಈಗ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ತೆರವು ಮಾಡಲಾಗಿದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ನಿರಂತರ ಮುಂದುವರೆದ ಮರ ತೆರವು ಕಾರ್ಯ

ಮಂಗಳೂರು ನಗರದಲ್ಲಿ ಹಸುರು ನಾಶವಾಗುತ್ತಿದ್ದು, ನಗರಕ್ಕೆ ತಾಪಮಾನ ಏರಿಕೆಯ ಅಪಾಯವಿದೆ. ಈ ವರ್ಷದ ಮೇ ತಿಂಗಳಲ್ಲಿ ಬಿಸಿಲ ಬೇಗೆಯಿಂದ ಮಂಗಳೂರಿಗರು ಬೆಂದು ಹೋಗಿದ್ದರು. ಅಷ್ಟಿದ್ದರೂ ನಗರದಲ್ಲಿರುವ ಅಲ್ಪಸ್ವಲ್ಪ ಹಸುರು ಉಳಿಸುವ ನಿಟ್ಟಿನಲ್ಲಿ ಯಾರೊಬ್ಬರೂ ಮುತುವರ್ಜಿ ವಹಿಸುತ್ತಿಲ್ಲ. ಕೆಲವು ದಿನಗಳ ಹಿಂದೆ ಬಲ್ಮಠದಿಂದ ಹಂಪನಕಟ್ಟೆ ರಸ್ತೆಯ ಮರಗಳ ತೆರವು ಕಾರ್ಯ ನಡೆದಿದೆ. ಇದೀಗ ಶಿವಬಾಗ್‌ ಸರದಿ. ಇದೇ ರೀತಿ ಬೇರೆ ಬೇರೆ ಕಾರಣಗಳನ್ನು ನೀಡಿ ನಗರದಲ್ಲಿರುವ ಅಲ್ಪ ಸ್ವಲ್ಪ ಹಸುರನ್ನು ನಾಶ ಮಾಡುತ್ತಿರುವುದಕ್ಕೆ ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮರಗಳನ್ನು ಉಳಿಸಿ

Advertisement

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸರಿಯಲ್ಲ. ಬೇಸಗೆಯಲ್ಲಿ ತಾಪ ಏರಿಕೆಯಾಗುವ ವೇಳೆ ಕೂಗಾಡುವ ಬದಲು ನಗರದಲ್ಲಿ ಹಸುರು ಉಳಿಸಬೇಕು. ಶಿವಬಾಗ್‌ ಪ್ರದೇಶದಲ್ಲಿ ಮರಗಳನ್ನು ಉಳಿಸಿ ಅಭಿವೃದ್ಧಿ ಕಾರ್ಯ ನಡೆಸಲು ಅವಕಾಶಗಳಿತ್ತು. ಆದರೆ, ಏಕಾಏಕಿ ಮರ ತೆರವು ಮಾಡಿರುವುದು ಸರಿಯಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

-ದಿಲೀಪ್‌ ವಾಸ್‌ ನಾೖಕ್‌, ಸ್ಥಳೀಯ ನಿವಾಸಿ

ಪ್ರಕರಣ ದಾಖಲು

ಯಾವುದೇ ಮಾಹಿತಿ ಇಲ್ಲದೆ ಮರಗಳನ್ನು ತೆರವು ಮಾಡಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಮುಂದೆ ಯಾರೂ ನಗರದಲ್ಲಿ ಅನಗತ್ಯ ಮರಗಳನ್ನು ಕಡಿಯಬಾರದು.

-ಆ್ಯಂಟನಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ

ಅನಿವಾರ್ಯ

ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಮಳೆ ನೀರು ಹರಿಯುಲು ಯಾವುದೇ ವ್ಯವಸ್ಥೆ ಇಲ್ಲ. ಪಾದಚಾರಿಗಳಿಗೆ ಫುಟ್‌ಪಾತ್‌ ಇಲ್ಲ. ಈ ಕಾರಣದಿಂದಾಗಿ ಅನಿವಾರ್ಯವಾಗಿ ಮರ ತೆರವು ಮಾಡಲಾಗಿದೆ. ಕಾಮಗಾರಿ ಬಳಿಕ ಗಿಡಗಳನ್ನು ನೆಡಲು ಪ್ರಯತ್ನಿಸುತ್ತೇವೆ.

-ಕಾವ್ಯಾ ನಟರಾಜ್‌, ಪಾಲಿಕೆ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next