ಮುಂಡಾಜೆ: ಬೆಳ್ತಂಗಡಿ ತಾ|ನ ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಯಲ್ಲಿ ಚಾರ್ಮಾಡಿ ಗ್ರಾಮದ ಫರ್ಲಾಣಿಯಿಂದ ಕಲ್ಮಂಜ ಗ್ರಾಮದ ಫಜಿರಡ್ಕ ತನಕದ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ಸಂಖ್ಯೆಯ ಮರದ ದಿಮ್ಮಿಗಳು ಸಂಗ್ರಹಗೊಂಡಿವೆ.
ನದಿಯಲ್ಲಿ ನೀರಿನ ಹರಿವು ಇನ್ನೊಮ್ಮೆ ಹೆಚ್ಚಳಗೊಂಡರೆ ತಗ್ಗು ಪ್ರದೇಶದ ಅನೇಕ ಸೇತುವೆ, ಅಣೆಕಟ್ಟು ಹಾಗೂ ಕೃಷಿಕರ ತೋಟಗಳಿಗೆ ಹೆಚ್ಚಿನ ಹಾನಿಯನ್ನು ಉಂಟು ಮಾಡಲಿವೆ. ಈಗಾಗಲೇ ಮುಂಡಾಜೆಯ ಕಾಪು ಪ್ರದೇಶದ ಕಿಂಡಿ ಅಣೆಕಟ್ಟಿನಲ್ಲಿ ಭಾರೀ ಗಾತ್ರದ ಮರ ಬಂದು ನಿಂತಿದೆ. ಮೇಲ್ಭಾಗದಲ್ಲಿ ಅನೇಕ ಮರಗಳು ನದಿ ನೀರಲ್ಲಿವೆ.
ಚಿಬಿದ್ರೆ ಗ್ರಾಮದ ಇರ್ಗುಂಡಿ ಪ್ರದೇಶದಲ್ಲಿ ಸುಮಾರು 40 ಅಡಿ ಉದ್ದದ ಮರವೊಂದು ನದಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರದೇಶದ ಕೆಳಭಾಗಕ್ಕೆ ಸದಾ ರಭಸದಿಂದ ಹರಿಯುವ ನದಿ ಈಗ ತನ್ನ ವೇಗವನ್ನು ತಗ್ಗಿಸಿಕೊಂಡು ಹರಿಯುತ್ತಿದೆ. ಈ ಪ್ರದೇಶವು ಸಂಪೂರ್ಣ ಕಾಡಿನಿಂದ ಆವೃತವಾಗಿರುವ ಇಳಿಜಾರು ಪ್ರದೇಶವಾದ ಕಾರಣ ಇಲ್ಲಿಗೆ ದಾರಿ ಇಲ್ಲದೆ ಇರುವುದರಿಂದ ಪೂರ್ಣ ಚಿತ್ರಣ ಲಭ್ಯವಾಗಿಲ್ಲ. ಅಂತರ, ಕೊಳಂಬೆ, ಫರ್ಲಾಣಿ ಪ್ರದೇಶದಲ್ಲಿ ಕೂಡ ಭಾರೀ ಸಂಖ್ಯೆಯ ಮರಗಳು ಸಂಗ್ರಹಗೊಂಡಿವೆ.
ನೇತ್ರಾವತಿ ನದಿ ಹರಿಯುವ ದಿಡುಪೆ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ ಹಾಗೂ ನಿಡಿಗಲ್ ಪ್ರದೇಶದ ಸೇತುವೆ, ಅಣೆಕಟ್ಟುಗಳಲ್ಲೂ ಭಾರೀ ಗಾತ್ರದ ಮರಗಳು ಜಮೆಗೊಂಡಿವೆ.
ಕಳೆದ ವರ್ಷದ ಪ್ರವಾಹಕ್ಕೆ ಈ ನದಿಗಳಲ್ಲಿ ಬಹುಸಂಖ್ಯೆಯ ಮರಗಳು ತೇಲಿಬಂದು ಆಸುಪಾಸಿನ ತೋಟ, ಸೇತುವೆ, ಕಿಂಡಿ ಅಣೆಕಟ್ಟುಗಳಲ್ಲಿ ಬಂದು ಸಿಲುಕಿದ್ದು, ಅವುಗಳ ತೆರವು ಕಾರ್ಯ ಹಲವು ಕಡೆ ಪೂರ್ಣಗೊಂಡಿರಲಿಲ್ಲ. ಈಗ ಮರಮಟ್ಟುಗಳ ಜತೆ ಇನ್ನೂ ಅನೇಕ ಮರಗಳು ಬಂದಿದ್ದು, ಈ ಪ್ರದೇಶಗಳ ಮಂದಿಯ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಕೂಡಲೇ ತೆರವು ಕಾರ್ಯ
ಪ್ರಾಕೃತಿಕ ವಿಕೋಪ ತಂಡ ಹಾಗೂ ಅರಣ್ಯ ಇಲಾಖೆ ವತಿಯಿಂದ, ಸ್ಥಳೀಯರ ಸಹಕಾರದಲ್ಲಿ ನದಿಗಳಲ್ಲಿ ತೇಲಿಕೊಂಡು ಬಂದು ಸಿಲುಕಿರುವ ಮರಗಳನ್ನು ತೆರವುಗೊಳಿಸುವ ಕೆಲಸವನ್ನು ಕೂಡಲೇ ನಡೆಸಲಾಗುವುದು.
– ತ್ಯಾಗರಾಜ್ ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ