ಕುಂದಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು. ಕೆಲವು ಕಡೆ ಗಾಳಿ ಮಳೆಯಿಂದಾಗಿ ಮನೆಯ ಮೇಲೆ ಮರಗಳು ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿಯ ಅಣ್ಣಪ್ಪ ಅವರ ಮನೆಯ ಮೇಲೆ ಮರ ಬಿದ್ದು ಸುಮಾರು ರೂ. 15 ಸಾವಿರ ನಷ್ಟ ಸಂಭವಿಸಿದೆ. ಹಂಗಳೂರು ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಆಲದ ಮರ ಬಿದ್ದು ಹಾನಿ ಸಂಭವಿಸಿದೆ.
ತಪ್ಪಿದ ದುರಂತ: ಕಾಳಾವರ ಗ್ರಾ.ಪಂ. ವ್ಯಾಪ್ತಿಯ ರೈಲ್ವೇ ಗೇಟ್‌ನ ಬಳಿಯ ಜನತಾ ಕಾಲನಿಯಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದಲ್ಲದೇ ಭಾರಿ ವಿದ್ಯುತ್ ದುರಂತವೊಂದು ತಪ್ಪಿದ ಘಟನೆ ನಡೆದಿದೆ.
ಜನತಾ ಕಾಲನಿ ನಿವಾಸಿ ರೇವತಿ ಆಚಾರ್ ಅವರ ಮನೆ ಮೇಲೆ ಮರ ಬಿದ್ದಿದ್ದು, ಈ ಸಮಯದಲ್ಲಿ ಮನೆ ಮೇಲೆ ಹಾದು ಹೋದ ವಿದ್ಯುತ್ ತಂತಿ ಕೂಡ ಕಡಿದು ಮನೆ ಮೇಲೆ ಬಿದ್ದಿದ್ದು ಈ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರಿ ದುರಂತವೊಂದು ತಪ್ಪಿದೆ.
ರೇವತಿ ಆಚಾರ್ ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಕುರಿತು ಮೆಸ್ಕಾಂಗೆ ಲಿಖೀತವಾಗಿ ಮತ್ತು ಮೌಖೀಕವಾಗಿ ಹಲವಾರು ಬಾರಿ ದೂರು ಸಲ್ಲಿಸಲಾಗಿದ್ದು, ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಯನ್ನು ಬದಲಿಸುವ ಕಾರ್ಯ ನಡೆಸಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ಕಾಳಾವರ ಗ್ರಾ.ಪಂ. ಅಧ್ಯಕ್ಷ, ವಿ.ಎ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ರೂ. 25 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತೆಂಗಿನ ಮರ ಬಿದ್ದು ಹಾನಿ: ಬೀಜಾಡಿ ಗ್ರಾಮದ ದೊಡ್ಡೋಣಿ ಬಳಿ ತೆಂಗಿನ ಮರ ಬಿದ್ದು ಗಂಗೆ ಶೆಟ್ಟಿಗಾರ್ ಹಾಗೂ ಚಂದು ಪೂಜಾರಿ ಅವರ ಮನೆ ಹಾನಿಗೊಂಡಿದೆ. ಮರ ಬೀಳುವ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾ.ಪಂ. ಪಿಡಿಒ ಗಣೇಶ್, ಗ್ರಾಮ ಲೆಕ್ಕಿಗ ಡೇನಿಯಲ್ ಡಿ ಸೋಜಾ ಭೇಟಿ ನೀಡಿದರು.