Advertisement

ಸಾಗರ: ನೆಡುತೋಪು ಕಾವಲು ಕಾಯುತ್ತಿದ್ದವನಿಂದಲೇ ಪ್ಲಾಂಟೇಶನ್‌ನಿಂದ ಮರ ಕಳ್ಳತನ; ಆರೋಪಿಗಳ ಬಂಧನ

07:56 PM May 21, 2022 | Suhan S |

ಸಾಗರ: ಎಂಪಿಎಂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ಹಾಗೂ ಅಕೇಶಿಯಾ ಪ್ಲಾಂಟೇಶನ್‌ನಿಂದ ಮರ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 1.50 ಲಕ್ಷ ರೂ. ಮೌಲ್ಯದ 30 ಮೆಟ್ರಿಕ್ ಟನ್ ಅಕೇಶಿಯಾ ಮತ್ತು ನೀಲಗಿರಿ ಮರದ ತುಂಡು, ಮರ ಸಾಗಾಣಿಕೆಗೆ ಬಳಸಿದ್ದ 52 ಲಕ್ಷ ರೂ. ಮೌಲ್ಯದ 2 ಲಾರಿ ಮತ್ತು ಕೃತ್ಯಕ್ಕೆ ಬಳಸಿದ 4 ಲಕ್ಷ ರೂ. ಮೌಲ್ಯದ ಒಂದು ಆಲ್ಟೋ ಕಾರು ಸಹಿತ ಒಟ್ಟು 57.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

Advertisement

ಮೇ ೧೬ರಂದು ಕರೂರು ಹೋಬಳಿ ನಾಡಕಿರುವಾಸೆ ಗ್ರಾಮದ ಎಂಪಿಎಂ ನಡುತೋಪಿನಲ್ಲಿ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಸಂಬಂಧ ಸಹಾಯಕ ಅರಣ್ಯಾಧಿಕಾರಿ ಪಾಸ್ಕಲ್ ರೋಡ್ರಿಗಸ್ ಕಾರ್ಗಲ್ ಠಾಣೆಗೆ ದೂರು ನೀಡಿದ್ದರು.

ನಾಡಕಿರುವಾಸೆ ಗ್ರಾಮದ ಎಂಪಿಎಂ ನಡುತೋಪಿನಲ್ಲಿ ಮರ ಕಟಾವು ಮಾಡಲು ಅಬ್ದುಲ್ ರೆಹಮಾನ್ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಅಬ್ದುಲ್ ರೆಹಮಾನ್ ಅವರು ಫೆ. 7 ರಿಂದ ಮೇ 9 ರವರೆಗೆ ಮರ ಕಡಿತಲೆ ಮಾಡಿ ಸಾಗಾಣಿಕೆ ಮಾಡಿದ್ದರು. ನಂತರ ಅಕಾಲಿಕ ಮಳೆ ಬಂದಿದ್ದರಿಂದ ಮರ ಕಡಿತಲೆ ಮಾಡುವುದನ್ನು ನಿಲ್ಲಿಸಿದ್ದರು. ಮೇ 15 ರಂದು ನೆಡುತೋಪು ಕಾವಲು ಕಾಯುತ್ತಿದ್ದ ಮಂಜುನಾಥ್ ಎಂಬಾತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗದಂತೆ ಅಕ್ರಮವಾಗಿ 1.50 ಲಕ್ಷ ರೂ. ಮೌಲ್ಯದ ಮರಗಳನ್ನು ಎರಡು ಲಾರಿಗಳಲ್ಲಿ ಸಾಗಾಣಿಕೆ ಮಾಡಿದ್ದರು. ಈ ಸಂಬಂಧ ಪಾಸ್ಕಲ್ ರೋಡ್ರಿಗಸ್ ಮಂಜುನಾಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಾರ್ಗಲ್ ಠಾಣೆಗೆ ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವಿಕ್ರಂ ಅಮತೆ ಅವರ ಆದೇಶದ ಮೇರೆಗೆ, ಸಾಗರ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಕಾರ್ಗಲ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ವಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ನೀಡಿದ ಮಾಹಿತಿ ಮೇರೆಗೆ ದಾಂಡೇಲಿಯ ವೆಸ್ಟ್‌ಕೋರ್ಸ್ ಪೇಪರ್ ಮಿಲ್ ಆವರಣದಲ್ಲಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು 14 ಮೆಟ್ರಿಕ್ ಟನ್ ಅಕೇಶಿಯಾ ಮತ್ತು 16 ಮೆಟ್ರಿಕ್ ಟನ್ ನೀಲಗಿರಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದಲ್ಲಿ ಮಂಜುನಾಥ್ ಜೊತೆ ಕೃತ್ಯಕ್ಕೆ ಸಹಕಾರ ನೀಡಿದ ಮಂಜನಾಥ್ ಅವರ ಮಗ ಮಣಿಕಂಠ ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ಕರಿಬಸಪ್ಪ, ಸಿಬ್ಬಂದಿಗಳಾದ ದಿನೇಶ್, ಪುರುಷೋತ್ತಮ್, ಸುನೀಲ್ ಕುಮಾರ್, ಕೊಟ್ರೇಶ್, ಶಿಲ್ಪ, ಜಗದೀಶ್ ನಾಯ್ಕ್, ಶರತ್ ಕುಮಾರ್, ಭರತ್ ಕುಮಾರ್, ಬಸವರಾಜ್, ಕಿರಣಾಚಾರಿ, ಮಲ್ಲಪ್ಪ ಶೆಟ್ಟಿ ಇನ್ನಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next