ಕಡಬ: ನಾಗರಿಕತೆ ಬೆಳೆದಂತೆಯೇ ಮನುಷ್ಯ ಪ್ರಕೃತಿಯಿಂದ ದೂರವಾಗಲು ಆರಂಭಿಸಿದ. ಅದರಿಂದಾಗಿಯೇ ಇಂದು ವಾತಾವರಣದಲ್ಲಿ ಅಸಮ ತೋಲನ ಉಂಟಾಗಿ ಮನುಷ್ಯನ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಕಾಣಿಸಿಕೊಳ್ಳುತ್ತಿದೆ ಎಂದು ಕಡಬ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎ. ಅವರು ಹೇಳಿದರು.
ಅವರು ಕಡಬ ಸರಕಾರಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಡಬ “ಬಿ’ ಒಕ್ಕೂಟ, ಕಡಬ ಸರಕಾರಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಜರಗಿದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಗಳನ್ನು ಬೆಳೆಸಿ ಶುದ್ಧ ಗಾಳಿ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಮುಖ್ಯಅತಿಥಿಯಾಗಿ ತಾ.ಪಂ.ಸದಸ್ಯ ಗಣೇಶ್ ಕೈಕುರೆ ಅವರು ಮಾತನಾಡಿ, ಪ್ರಕೃತಿ ಇದ್ದರೆ ಮಾತ್ರ ಮನುಷ್ಯ ಎನ್ನುವ ಅರಿವು ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆಯಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಬ ಸಿ.ಎ. ಬ್ಯಾಂಕ್‌ಅಧ್ಯಕ್ಷ ಸುಂದರ ಗೌಡ ಮಂಡೆಕರ ಅವರು ಸಸಿಗಳನ್ನು ನೆಟ್ಟು ಬೆಳೆಸುವುದರೊಂದಿಗೆ ನಾವು ಜಲಸಂರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು. ಕಾಲೇಜಿನ ಪರಿಸರದಲ್ಲಿ ಇಂಗುಗುಂಡಿಗಳನ್ನು ಮಾಡುವ ಮೂಲಕ ನೀರಿಂಗಿಸುವ ಕೆಲಸಕ್ಕೆ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮುಂದಾಗುವುದಾದರೆ ಸಿ.ಎ.ಬ್ಯಾಂಕ್ ವತಿಯಿಂದ 5 ಸಾವಿರ ರೂ. ದೇಣಿಗೆಯನ್ನು ಪರಿಸರ ಕಾಳಜಿಗಾಗಿ ನೀಡುವುದಾಗಿ ಅವರು ಘೋಷಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲೆ ವೇದಾವತಿ ಬಿ., ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಡಬ ಸಮಿತಿಯ ಉಪಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಗ್ರಾಮಾಭಿವೃದ್ಧಿ ಯೋಜನೆಯ “ಬಿ’ ಒಕ್ಕೂಟದ ಅಧ್ಯಕ್ಷ ಆನಂದ ಗೌಡ ಕೋಂಕ್ಯಾಡಿ, ಉಪನ್ಯಾಸಕ ಇ.ಸಿ.ಚೆರಿಯನ್ ಬೇಬಿ, ಪೂರ್ವ ವಿದ್ಯಾರ್ಥಿ ಕುಶಾಲಪ್ಪ ಗೌಡ ಕಂಪ ಅವರು ಮಾತನಾಡಿದರು.
ಅರಣ್ಯ ರಕ್ಷಕ ಸುಬ್ರಹ್ಮಣ್ಯ ಗೌಡ, ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯ ಮೇಲ್ವಿಚಾರಕ ಬಾಬು, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕ ಗಣೇಶ್ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಪುಷ್ಪಾವತಿ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ನಳಿನಾಕ್ಷಿ ವಂದಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಕಾರ್ಯಕ್ರಮಾಧಿಕಾರಿ ಸೆಲಿನ್ ಕೆ.ಪಿ. ನಿರೂಪಿಸಿದರು.