Advertisement

ಈ ಬಾರಿ ಗಣಪನಾಗುವನೇ ಪೂರ್ಣ ಪರಿಸರ ಸ್ನೇಹಿ?

08:43 AM Sep 07, 2018 | Sharanya Alva |

ಈ ಬಾರಿ ಏನಿದ್ದರೂ “ಹಸಿರು ಪ್ರಿಯ’ ಗಣೇಶನ ಹಬ್ಬ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರಕವಾಗುವಂಥ ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವ್ಯಾಪಾರಿ, ಉದ್ಯಮಿಗಳ ಸಭೆ ಕರೆಯಲಾಗಿದ್ದು, ಮೂರ್ತಿ ತಯಾರು ಮತ್ತು ಮಾರಾಟ ಮಾಡುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘನೆ ಮಾಡುವಂತಿಲ್ಲವೆಂದೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಹೀಗಾಗಿ ಯಾವ ಯಾವ ಜಿಲ್ಲೆಗಳಲ್ಲಿ ಗಣೇಶನ ಮಾರಾಟ ಹೇಗೆ ನಡೆಯುತ್ತಿದೆ, ಪಿಒಪಿ ಗಣಪತಿಗಳ ಮಾರಾಟ ಸಂಪೂರ್ಣ ನಿಯಂತ್ರಣವಾಗಿದೆಯೇ ಎಂಬ ಬಗ್ಗೆ ರಿಯಾಲಿಟಿ ಚೆಕ್‌ ಇಲ್ಲಿದೆ…

Advertisement

ಕೋಲಾರದಲ್ಲಿ ಸಂಪೂರ್ಣ ನಿಷೇಧ
ಕೋಲಾರ ಜಿಲ್ಲೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಮಾಡುವಂತೆಯೇ ಇಲ್ಲ. ಅಧಿಕಾರಿಗಳೂ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಸದ್ಯ ಮಾರುಕಟ್ಟೆಗೆ ಮಣ್ಣು, ಪೇಪರ್‌, ಗೋಂದುವಿನಿಂದ ಮಾಡಿದ ಗಣೇಶನ ವಿಗ್ರಹಗಳು ಬಂದಿವೆ. ಆದರೆ, ಇವು ದುಬಾರಿ ಎನ್ನುವುದು ಜನರ ಅಳಲು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಗಣೇಶನ ದರದಲ್ಲಿ ನೂರಿನ್ನೂರು ರೂ. ಗಳಿಂದ ಹಿಡಿದು, ಐದಾರು ಸಾವಿರ ರೂ.ವರೆಗೂ ಹೆಚ್ಚಳ ಕಂಡು ಬಂದಿದೆ. ಜಿಲ್ಲೆಯಲ್ಲಿ 10 ವಿಗ್ರಹ ತಯಾರಿಕಾ ಉದ್ದಿಮೆಗಳಿವೆ. ಕೆಲವರು ನೆರೆಯ ರಾಜ್ಯಗಳು, ಬೆಂಗಳೂರು, ಮುಂಬೈನಿಂದಲೂ ಗಣೇಶನನ್ನು ಖರೀದಿಸಿ ತಂದು ಪೂಜೆ ಸಲ್ಲಿಸುತ್ತಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಜಿಲ್ಲೆಯಲ್ಲಿ ಗಣೇಶನನ್ನು ಬಿಡುವ ಸಂಬಂಧ ನೀರಿನ
ತೊಟ್ಟಿಯ ವ್ಯವಸ್ಥೆಯಾಗಿಲ್ಲ.

ಕಾರುಬಾರು ಜೋರು
ಪಿಒಪಿ ಮೂರ್ತಿಗಳ ಉತ್ಪಾದನೆ ಮತ್ತು ಮಾರಾಟ ನಿಷೇಧಕ್ಕೆ ಕಲಬು ರಗಿಯಲ್ಲಿ ಬೆಲೆಯೇ ಇಲ್ಲ. ಎಲ್ಲೆಡೆ ರಾಸಾಯನಿಕಯುಕ್ತ ಬಣ್ಣ-ಬಣ್ಣಗಳ ಗಣೇಶ ಮೂರ್ತಿಗಳ ನಿರ್ಮಾಣಗಳ ಭರಾಟೆ ಜೋರಾಗಿದೆ. ಕೇಂದ್ರ ಬಸ್‌ ನಿಲ್ದಾಣ ರಸ್ತೆ, ಅಫಜಲಪುರ ರಸ್ತೆಯ ಬಿದ್ದಾಪುರ ಕಾಲೋನಿ ಸೇರಿದಂತೆ ಹಲವು ಕಡೆಗಳಲ್ಲಿ ರಾಜಸ್ಥಾನ ಸೇರಿದಂತೆ ಇನ್ನಿತರ ರಾಜ್ಯಗಳ ಜನತೆ ಅನೇಕ ದಿನಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ನಗರದಲ್ಲಿ ಪಿಒಪಿ ಮೂರ್ತಿಗಳ ತಯಾರಿಕೆ ಕಂಡು ಬರುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ನಿಷೇಧ ಕಟ್ಟುನಿಟ್ಟು ಜಾರಿ
ವಿಜಯಪುರ ಜಿಲ್ಲೆಯಲ್ಲಿ ರಾಸಾಯನಿಕ ಪರಿಕರಗಳಿಂದ ರೂಪಿಸಿದ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇ ಧಿಸಿದೆ. ಅಲ್ಲದೆ ಮಣ್ಣಿನ ಮೂರ್ತಿಗಳ ವಿಸರ್ಜನೆಗೂ ಕೃತಕ ಹೊಂಡ ನಿರ್ಮಿಸಿದ್ದು ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ. ಐತಿಹಾಸಿಕ ಜಲಮೂಲ ಸ್ಮಾರಕ ತಾಜ್‌ ಬಾವಡಿ ಬಾವಿಯಲ್ಲಿ ಗಣೇಶನನ್ನು ವಿಸರ್ಜಿಸುವ ವ್ಯವಸ್ಥೆಗೂ ಕಡಿವಾಣ ಹಾಕಲಾಗಿದೆ. ಮತ್ತೂಂದೆಡೆ ಗಣೇಶ ವಿಸರ್ಜನೆಗೆ ಪ್ರತ್ಯೇಕ ಹೊಂಡಗಳ ನಿರ್ಮಿಸಲಾಗುತ್ತಿರುವ ಕಾರಣ, ನಗರದ ಕೆರೆ-ಹೊಂಡಗಳಲ್ಲಿ ಮೂರ್ತಿಗಳ ವಿಸರ್ಜನೆ ಸಂಪೂರ್ಣ ನಿಷೇಧಿಸಲಾಗಿದೆ.

ಬೀದರ್‌ನಲ್ಲಿ “ಚಿಂತನಾ ಹಂತ’
ರಾಜ್ಯದ ಇತರೆಡೆಗಳಲ್ಲಿ ಪಿಒಪಿ ಬಳಕೆ ಮಾಡದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದರೆ ಬೀದರ್‌ ಜಿಲ್ಲೆಯಲ್ಲಿ ಅಧಿಕಾರಿಗಳು ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಮುಂದೆ ಪಿಒ ಪಿ ಮೂರ್ತಿಗಳ ಜಪ್ತಿ ಮಾಡುವ ನಿಟ್ಟಿನಲ್ಲೂ ಈ ಚಿಂತನೆ ಮುಂದುವರಿದಿದೆ. ಆದರೆ, ಪಿಒಪಿ ಗಣೇಶ ಮೂರ್ತಿಗಳ ತಯಾರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಾತ್ರ ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಈ ಮಧ್ಯೆ ಕೆಲವರು ಸ್ವಯಂ ಪ್ರೇರಿತರಾಗಿ ಮಣ್ಣಿನ ಮೂರ್ತಿಗಳನ್ನು ಮಾಡಿ ಜನರಿಗೆ ನೀಡಲು ಮುಂದಾಗಿದ್ದಾರೆ. ಆದರೂ ಪಿಒಪಿ ಗಣಪತಿಗಳ ತಯಾರಿಕೆ, ಮಾರಾಟ ನಡೆಯುತ್ತಲೇ ಇದೆ.

Advertisement

ಶಿವಮೊಗ್ಗದಲ್ಲಿ ಈಗ ಯೋಜನೆ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಗುಂಗಲ್ಲಿ ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಕ್ರಮವನ್ನೇ ಮರೆತಿದ್ದ ಶಿವಮೊಗ್ಗ ಜಿಲ್ಲಾಡಳಿತ, ಇದೀಗ ಜಾಗೃತಿಗೆ ಮುಂದಾಗಿದೆ. ಪರಿಸರ ಇಲಾಖೆ ಕೂಡ ಶಾಲೆಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದೆ. ಶಿವಮೊಗ್ಗದ ಬಹುತೇಕ ಕಡೆ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ಎರಡು ವರ್ಷದ ಹಿಂದೆ ಭದ್ರಾವತಿ ಮತ್ತು ಕುಂಸಿ ಬಳಿ ಪಿಒಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ನಂತರ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

610 ಪಿಒಪಿ ಗಣೇಶ ಮೂರ್ತಿ ವಶ
ಬಾಗಲಕೋಟೆ ಜಿಲ್ಲೆಯಲ್ಲಿ ಪಿಒಪಿ ಮೂರ್ತಿಗಳ ನಿಷೇಧ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಕೇಂದ್ರಗಳು, ಕಂದಾಯ ಗ್ರಾಮ ವ್ಯಾಪ್ತಿಯಲ್ಲೂ ಪಿಒಪಿ ಪ್ರತಿಷ್ಠಾಪಿಸದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇಂತಹ ಮೂರ್ತಿಗಳ ಮಾರಾಟ ನಡೆದಲ್ಲಿ ತಕ್ಷಣ ಮಾಹಿತಿ ಕೊಡಲೂ ಕೋರಿದ್ದು, ಈಗಾಗಲೇ ಸಾವಳಗಿಯಲ್ಲಿ 610 ಪಿಒಪಿ  ಗಣೇಶಮೂರ್ತಿ ವಶಕ್ಕೆ ಪಡೆದು, ಮಾರಾಟಗಾರರ ವಿರುದ್ಧ ಪ್ರಕರಣವೂ ದಾಖಲಿಸಲಾಗಿದೆ. ಮಹಾರಾಷ್ಟ್ರದಿಂದ ಹೆಚ್ಚು ಪಿಒಪಿ ಗಣೇಶಮೂರ್ತಿ ಬರಲಿದ್ದು, ಗಡಿಯಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ನಿಸರ್ಗ ಸ್ನೇಹಿ ಗಣೇಶನಿಗೇ ಆದ್ಯತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಣ್ಣಿನ ಮೂರ್ತಿಗಳಿಗೇ ಆದ್ಯತೆ ನೀಡಲಾಗುತ್ತಿದೆ. ನಾಲ್ಕೈದು ವರ್ಷಗಳಿಂದ ಪಿಒಪಿ ನಿರ್ಮಿತ ಮೂರ್ತಿ ಆರಾಧನೆ ಎಲ್ಲಿಯೂ ಕಂಡು ಬಂದಿಲ್ಲ. ಜನ ಮಣ್ಣಿನ ಗಣಪನ ಮೂರ್ತಿಯನ್ನೇ ಪ್ರತಿಷ್ಠಾಪಿಸುತ್ತಿದ್ದಾರೆ. ಒಮ್ಮೆ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಜಿಲ್ಲೆಯಲ್ಲಿ ತಿಂಗಳ ತನಕ ಯಾರೂ ಇರಿಸಿಕೊಳ್ಳುವುದಿಲ್ಲ. ವಾರ ಅಥವಾ ಹತ್ತು ದಿನಗಳೊಳಗೆ ವಿಸರ್ಜನೆಯೂ ನಡೆಯುವುದರಿಂದ, ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಮಂಡಳಿ ವಿಧಿಸಿರುವ ತಿಂಗಳ ಗಡುವಿನ ಆದೇಶವೂ ಜಿಲ್ಲೆಯಲ್ಲಿ ಚಾಚೂ ತಪ್ಪದೆ ಪಾಲನೆಯಾಗುತ್ತಿದೆ.

ಬೆಳಗಾವಿಯಲ್ಲಿ ಇನ್ನೂ ಗೊಂದಲ
ಬೆಳಗಾವಿ ಜಿಲ್ಲೆಯಲ್ಲಿ ಪಿಒಪಿ ಮೂರ್ತಿಗಳಿಗೆ ನಿಷೇಧ ಹೇರುವಂತೆ ಆದೇಶವಿದ್ದರೂ ಇನ್ನೂ ಪಾಲನೆಯಾಗಿಲ್ಲ. ಇಂಥ ಮೂರ್ತಿಗಳನ್ನು ಜಪ್ತಿ ಮಾಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಪರಿಸರ ಸ್ನೇಹಿ ಗಣಪ ಎಂಬ ನೆಪ ಮಾಡಿ
ಮೂರ್ತಿಗಳ ನಿಷೇಧಕ್ಕೆ ಕೈ ಹಾಕಿದರೆ ಉಗ್ರ ಪ್ರತಿಭಟನೆ ಮಾಡ ಬೇಕಾದೀತು ಎಂದು ನಗರದ ಗಣೇಶ ಮಂಡಳಿಗಳ ಕೆಲವು ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಚಿಕ್ಕೋಡಿ ಭಾಗದಲ್ಲಿ ಸುಮಾರು 25, ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ 20 ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. 

200ಕ್ಕೂ ಅಧಿಕ ಮೂರ್ತಿ ವಶ
ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ 950ಕ್ಕೂ ಅಧಿಕ, ಹಳ್ಳಿಗಳಲ್ಲಿ 450ಕ್ಕೂ ಅಧಿಕ, ಪಟ್ಟಣಗಳಲ್ಲಿ ಅಂದಾಜು 110ಕ್ಕೂ ಅಧಿಕ ಸಾರ್ವಜನಿಕ ಗಣೇಶನ ವಿಗ್ರಹಗಳು ಪ್ರತಿಷ್ಠಾನೆಗೊಳ್ಳಲಿವೆ. ಪಿಒಪಿ ಹಾವಳಿ ತಡೆಯಲು 8 ತಂಡಗಳನ್ನು ರಚಿಸಲಾಗಿದ್ದು, ನಗರ ಪ್ರದೇಶಗಳಲ್ಲಿ 5 ತಂಡಗಳು ಹಾಗೂ ಗ್ರಾಮೀಣ ಪ್ರದೇಶದ ಮೇಲೆ 3 ತಂಡಗಳು ನಿಗಾ ಇಟ್ಟಿವೆ. ಈ ವರೆಗೂ 13 ಕಡೆಗಳಲ್ಲಿ ದಾಳಿ ನಡೆಸಿ 210ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. 

ಆದೇಶ ದಾಖಲೆಗಳಿಗೆ ಸೀಮಿತ
ಪಿಒಪಿ ಗಣೇಶ ಮೂರ್ತಿಗಳ ನಿರ್ಬಂಧ ಆದೇಶ ಕೊಪ್ಪಳದಲ್ಲಿ ಪಾಲನೆಯಾಗುತ್ತಿಲ್ಲ. ಹಲವೆಡೆ ಸದ್ದಿಲ್ಲದೇ ತಯಾರು ಮಾಡಲಾಗಿದ್ದು, ಮಾರಾಟಕ್ಕೆ ಅಣಿಯಾಗುತ್ತಿವೆ. ಇತರ ಜಿಲ್ಲೆ- ರಾಜ್ಯಗಳಿಂದ ಮೂರ್ತಿಗಳನ್ನು ತಂದು ಮಾರಾಟ  ಮಾಡಲಾಗುತ್ತಿದೆ. ನಗರಸಭೆ, ಪುರಸಭೆ ಅಧಿಕಾರಿಗಳ ಸಭೆ ನಡೆಸಿದ್ದು ಬಿಟ್ಟರೆ, ಮತ್ತಾವ ಬೆಳವಣಿಗೆಯೂ ನಡೆದಿಲ್ಲ. ಕೊಪ್ಪಳದಲ್ಲೇ ಪಿಒಪಿ ತಯಾರಿ ಮಾಡಲಾಗುತ್ತಿದ್ದು, ಅವರಿಗೆ
ಅಧಿಕಾರಿಗಳು ನೋಟಿಸ್‌ ಕೊಟ್ಟು ಸುಮ್ಮನಾಗಿದ್ದಾರೆ.

ಹಾವೇರಿಯಲ್ಲಿ ಮನ್ನಣೆ ಇಲ್ಲ
ಬಿಗಿ ಕ್ರಮದ ಪರಿಣಾಮ ಜಿಲ್ಲೆಯಲ್ಲಿ ಈ ವರ್ಷ ಶೇ.90ರಷ್ಟು ಪಿಒಪಿ ಗಣೇಶನ ಭರಾಟೆ ಕಡಿಮೆಯಾಗಿದೆ. ಕೇವಲ ಮೂರ್ತಿಯಷ್ಟೇ ಪರಿಸರ ಸ್ನೇಹಿಯನ್ನಾಗಿಸದೇ ವಿಸರ್ಜನೆಗೂ ಜಿಲ್ಲಾಡಳಿತ ವಿಶೇಷ ಕ್ರಮಕ್ಕೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಸ್ಥಳೀಯ ಸಂಸ್ಥೆಗಳು ನಿರ್ದಿಷ್ಟ ಹೊಂಡಗಳನ್ನು ನಿಗದಿ ಮಾಡಿ ಕೆಳಗೆ ಪಾಸ್ಟಿಕ್‌ ತಾಡಪತ್ರಿ ಹಾಕಿ ವಿಸರ್ಜಿಸಲು ವ್ಯವಸ್ಥೆ ಮಾಡುತ್ತಿವೆ. ಆದರೂ ದಾವಣಗೆರೆ, ಹುಬ್ಬಳ್ಳಿಯಿಂದ ಬರುವ ಪಿಒಪಿ ವಿಗ್ರಹಗಳ ಮೇಲೆ ಬಿಗಿ ಕ್ರಮ ಅಗತ್ಯವಿದೆ. 

ಚಿತ್ರದುರ್ಗದಲ್ಲಿ ಅರಿವು
ಜಿಲ್ಲೆಯಲ್ಲಿ ಪಿಒಪಿ ವಿಗ್ರಹ ತಯಾರು ಮಾಡದಿದ್ದರೂ ನೆರೆ ರಾಜ್ಯಗಳಿಂದ ಬರುತ್ತಿವೆ. ಹೀಗಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೆ ಹೊರ ಜಿಲ್ಲೆಗಳಿಂದ ಪಿಒಪಿ ಮೂರ್ತಿಗಳ ಪೂರೈಕೆ ತಡೆಗೆ ತಂಡ ರಚಿಸಲಾಗಿದೆ. ಒಂದು ವೇಳೆ ಪಿಒಪಿ-ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ವಶ
ಪಡಿಸಿಕೊಂಡರೆ ಎಲ್ಲಿ, ಹೇಗೆ ಪಿಒಪಿ ಮೂರ್ತಿಗಳನ್ನು ಶೇಖರಿಸಿ ನಾಶ ಮಾಡಬೇಕು ಎನ್ನುವ ಚಿಂತೆಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಡುತ್ತಿದೆ. 

4 ವರ್ಷ ಹಿಂದೆಯೇ ನಿಷೇಧ
ಗದಗ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದಲೂ ಪಿಒಪಿ ಗಣೇಶನನ್ನು ಬಳಕೆ ಮಾಡುತ್ತಿಲ್ಲ. ಜಿಲ್ಲಾಡಳಿತವೇ ಆದೇಶ ನೀಡಿದ್ದರಿಂದ ಜನರೂ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. 2014ರಲ್ಲೇ ಅಂದಿಮ ಜಿಲ್ಲಾಧಿಕಾರಿ ಪ್ರಸನ್ನಕುಮಾರ್‌ ಈ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಿ ಪರಿಸರ ಸ್ನೇಹಿಯಾದ ಮಣ್ಣಿನ ಮೂರ್ತಿಗಳನ್ನು ಬಳಕೆ ಮಾಡುವಂತೆ ಆದೇಶ ನೀಡಿದ್ದರು. ಕಳೆದ ಎರಡು ವರ್ಷಗಳಿಂದ ಗಣೇಶ ವಿಸರ್ಜನೆಗೆ ಕೃತಕ ಹೊಂಡಗಳನ್ನು ವ್ಯವಸ್ಥೆ ಮಾಡುತ್ತಿದ್ದು, ಇದು ಜಿಲ್ಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದೆ.

ಬಳ್ಳಾರಿಯಲ್ಲಿ ಕೆಂಪುಹಾಸು
ಬಳ್ಳಾರಿಯಲ್ಲಿ ಪಿಒಪಿಯಿಂದ ಮಾಡಿದ ಗಣೇಶನ ಮೂರ್ತಿಗಳಿಗೆ ನಿರ್ಬಂಧವಿಲ್ಲ. ಇಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲನೆಯಾಗುತ್ತಿಲ್ಲ. ಬಳ್ಳಾರಿ ನಗರಪಾಲಿಕೆ ಸೇರಿ ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿ ಮಿತ್ರ ಮಂಡಳಿಗಳು ಸಜ್ಜಾಗುತ್ತಿವೆ. ಒಂದು ತಿಂಗಳಿಂದಲೇ ಅನ್ಯರಾಜ್ಯಗಳ ವಿಗ್ರಹ ತಯಾರಕರು ನಗರದಲ್ಲಿ ಬಿಡಾರ ಡಿದ್ದು, ಯುವಕರು, ಸಂಘ ಸಂಸ್ಥೆಗಳು ಮುಂಗಡ ಹಣ
ನೀಡಿ ಗಣೇಶ ಮೂರ್ತಿಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next