Advertisement
ಕರ್ನಾಟಕ ಗೃಹ ಮಂಡಳಿ ಮುಖಾಂತರ ಕೊಡಿಯಾಲಬೈಲ್‌ನ ಜೈಲ್ ರಸ್ತೆಯಲ್ಲಿ ಅಂದಾಜು 2.1 ಕೋಟಿ ರೂ. ಗಳಲ್ಲಿ ಪಾಲಿಕ್ಲಿನಿಕ್ ನಿರ್ಮಾಣವಾಗಲಿದ್ದು, ಮುಂದಿನ ವಾರದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಕೊಡಿಯಾಲಬೈಲ್‌ನಲ್ಲಿ ಈಗಾಗಲೇ ಪಶು ಆಸ್ಪತ್ರೆಯೊಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಚಿಕಿತ್ಸೆ ನೀಡುವುದು ಇಲ್ಲಿ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹಳೆ ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಎಂಟು ಶೆಡ್‌ಗಳನ್ನು ನೆಲ ಸಮಗೊಳಿಸಿ ಅಲ್ಲಿ ಸುಸಜ್ಜಿತ ಪಾಲಿ ಕ್ಲಿನಿಕ್ ನಿರ್ಮಾಣವಾಗಲಿದೆ. ಬಳಿಕ ಈಗಿರುವ ಆಸ್ಪತ್ರೆಯನ್ನು ಹೊಸ ಕಟ್ಟ ಡಕ್ಕೆ ಸ್ಥಳಾಂತರಿಸಲಾಗುತ್ತದೆ. ಶೆಡ್ ನೆಲಸಮಗೊಳಿಸಲು ಈಗಾಗಲೇ ದ.ಕ. ಜಿ.ಪಂ.ನಿಂದ ಅನುಮತಿ ದೊರೆತಿದ್ದು, ಪ್ರಕ್ರಿಯೆ ಆರಂಭಗೊಂಡಿದೆ ಎಂದು ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ| ರಘುರಾಮ್ ಭಟ್ ‘ಉದಯ ವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.
ತುರ್ತು ಶಸ್ತ್ರಚಿಕಿತ್ಸೆಯಂತಹ ಸಂದರ್ಭಗಳು ಎದುರಾದರೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳು ಇರುವುದಿಲ್ಲ. ಈ ಸಂದರ್ಭ ಜಿಲ್ಲಾಸ್ಪತ್ರೆಗೆ ರೆಫರಲ್ ಮಾಡಿದರೆ, ಇಲ್ಲಿಂದ ವೈದ್ಯಾಧಿಕಾರಿಗಳು ತೆರಳಿ ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಅಥವಾ ವಿಶೇಷ ವಾಹನಗಳ ಮುಖಾಂತರ ಪ್ರಾಣಿಗಳನ್ನು ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ನಡೆಸಲಾಗುತ್ತದೆ. ಈಗಾಗಲೇ ಮೊಬೈಲ್ ವೆಟರ್ನರಿ ಕ್ಲಿನಿಕ್ ವಾಹನವೊಂದು ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ನಿರ್ಮಾಣದ ಬಳಿಕ ಇನ್ನಷ್ಟು ವಾಹನಗಳು ಆಸ್ಪತ್ರೆಗೆ ಲಭ್ಯವಾಗಲಿದೆ.
Related Articles
ನಗರ ಪಶು ಆಸ್ಪತ್ರೆ ಆವರಣದಲ್ಲಿ ಪಾಲಿಕ್ಲಿನಿಕ್ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಸ್ಥಳ ಗುರುತಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಪ್ರಸ್ತಾವಿತ ಸ್ಥಳದಲ್ಲಿರುವ ಹಳೆಯ ಶೆಡ್‌ಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದ್ದು, ಇನ್ನೊಂದು ವಾರದೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಾರದೊಳಗೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.
– ಡಿ. ವೇದವ್ಯಾಸ
ಕಾಮತ್, ಶಾಸಕರು
Advertisement
ಎಲ್ಲ ರೀತಿಯ ಚಿಕಿತ್ಸೆ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಪಶು ಪಾಲಿಕ್ಲಿನಿಕ್ ಆಸ್ಪತ್ರೆ ಇರಬೇಕೆಂಬುದು ಸರಕಾರಿ ಆದೇಶ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಈ ಹಿಂದೆ ಆಸ್ಪತ್ರೆಗೆ ಪ್ರಾಣಿಗಳನ್ನು ತಂದಲ್ಲಿ ಔಷಧ ನೀಡಲಾಗುತ್ತಿತ್ತು. ಇನ್ನು ಮುಂದೆ ಎಲ್ಲ ರೀತಿಯ ಚಿಕಿತ್ಸೆಗಳೂ ಲಭ್ಯವಾಗಲಿವೆ.
– ಡಾ| ಎಸ್.ಮೋಹನ್,
ಉಪ ನಿರ್ದೇಶಕರು, ಪಶು ಸಂಗೋಪನ ಇಲಾಖೆ
(ಆಡಳಿತ) ದ.ಕ. ಧನ್ಯಾ ಬಾಳೆಕಜೆ