ಚಿತ್ತಾಪುರ: ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಕೊರೊನಾ ಟೆಸ್ಟಿಂಗ್ ಹೆಚ್ಚಿಸಿ, ಸೋಂಕಿತರನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡ ಕೊರೊನಾ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಟೆಸ್ಟಿಂಗ್ ನಡೆಯುತ್ತಿಲ್ಲ. ಕೂಡಲೇ ಅಲ್ಲಿ ಟೆಸ್ಟಿಂಗ್ ಮಾಡಿ ಸೋಂಕಿತರನ್ನು ಹೋಂ ಐಸೋಲೇಷನ್ ಬದಲು ಅಲ್ಲಿನ ಸರ್ಕಾರಿ ವಸತಿ ನಿಲಯಗಳಲ್ಲಿನ ಕೋವಿಡ್ ಕೇಂದ್ರಗಳಲ್ಲಿ ಇಟ್ಟು ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ಹೇಳಿದರು. ಸೋಂಕಿತರು ಬೀದಿಗಳಲ್ಲಿ ಓಡಾಡುತ್ತಿದ್ದಾರೆ.
ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಕೊರೊನಾ ಬಗ್ಗೆ ಗ್ರಾಮಗಳಲ್ಲಿ ತಿಳಿವಳಿಕೆ ನೀಡಲು ಸ್ವಯಂ ಸೇವಕರು ಪ್ರಯತ್ನಿಸಬೇಕು. ಮನೆಗಳಿಗೆ ತೆರಳಿ ಸೋಂಕು ತಪಾಸಣೆ ಮಾಡಬೇಕು ಆಕ್ಸಿಜನ್ ಕೊರತೆಯಾಗದಂತೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸಹಕಾರ ನೀಡಬೇಕು. ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಹೋಂ ಐಸೋಲೇಷನ್ ರದ್ದುಮಾಡಿ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಕಡ್ಡಾಯವಾಗಿ ಕಳಿಸಲು ಸರ್ಕಾರ ಆದೇಶ ಮಾಡಬೇಕು. ಇಲ್ಲಿನ ನಾಗಾವಿ ಪ್ರದೇಶದಲ್ಲಿ 150 ಹಾಸಿಗೆಯುಳ್ಳ ಕೋವಿಡ್ ಕೇಂದ್ರ ಸ್ಥಾಪಿಸಲಾಗಿದೆ.
ತಾಲೂಕಿನಲ್ಲಿ ವೈದ್ಯ, ಸಿಬ್ಬಂದಿಗಳ ಕೊರತೆ ನಿವಾರಿಸಿದರೇ ಇಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಅನೂಕೂಲವಾಗಲಿದೆ. ರಾವೂರ-ಶಹಾಬಾದ್ ರಸ್ತೆ ಬದಿ ಕಲ್ಲುಗಣಿಗಳ ಕಚ್ಚಾ ಸಾಮಗ್ರಿಗಳು ರಸ್ತೆ ಮೇಲೆ ಹಾಕಲಾಗುತ್ತಿದೆ ಅದನ್ನು ತಡೆಯಬೇಕು ಎಂದು ಮನವಿ ಮಾಡಿದರು. ಸಂಸದ ಡಾ| ಉಮೇಶ ಜಾಧವ, ಜಿಲ್ಲಾಧಿಕಾರಿ ವಿವಿ ಜೋತ್ಸಾ °, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಟಾಳ, ಅಮರನಾಥ ಪಾಟೀಲ್ ಮಾತನಾಡಿದರು.
ಶಾಸಕರಾದ ಬಿ.ಜಿ ಪಾಟೀಲ್, ಬಸವರಾಜ ಮತ್ತಿಮೂಡ, ಶಶೀಲ ನಮೋಶಿ, ಜಿಪಂ ಸಿಇಒ ಡಾ. ದಿಲೀಶ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಪುರಕರ್, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಡಿಎಚ್‌ಒ ಶರಣಬಸಪ್ಪ ಗಣಜಲಖೇಡ್, ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಇಒ ನೀಲಗಂಗಾ ಬಬಲಾದಿ, ಡಾ| ದಿಲೀಪ ಪಾಟೀಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಪಟ್ಟಣದಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.