ಗುರುಮಠಕಲ್: 60 ವರ್ಷ ವಯಸ್ಸಾದವರಿಗೆ ಅನೇಕ ಕಾಯಿಲೆಗಳು ಬರುವುದು ಸಹಜ. ಅದನ್ನು ನಿರ್ಲಕ್ಷಿಸಿದರೆ ಅಪಾಯವಿದೆ. ಕಾಯಿಲೆ ಪ್ರಾರಂಭದ ಹಂತದಲ್ಲೇ ಚಿಕಿತ್ಸೆ ಪಡೆದರೆ ಗುಣಮುಖವಾಗಬಹುದು ಎಂದು ಕೊಂಕಲ್ ಗ್ರಾಪಂ ಪಿಡಿಒ ರಾಧಿಕಾ ಹೇಳಿದರು.
ಕೊಂಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ಕಲಿಕೆ ಟಾಟಾ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ “ಜೀರಿಯಾಟ್ರಿಕ್ ಕ್ಲಿನಿಕ್’ ಉದ್ಘಾಟಿಸಿ ಅವರು ಮಾತನಾಡಿದರು.
60 ವರ್ಷ, ಅದಕ್ಕೂ ಮೇಲ್ಪಟ್ಟ ಹಿರಿಯರಿಗೆ ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಡ್ ಕೊಡಲಾಗುವುದು. ಇದರ ಸದುಪಯೋಗ ಪಡೆದು, ಇತರರಿಗೂ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಕೊಂಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಉದಯ ಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಪ್ರತಿ ಬುಧವಾರ “ಜೀರಿಯಾಟ್ರಿಕ್ ಕ್ಲಿನಿಕ್’ ಮೂಲಕ ಹಿರಿಯ ನಾಗರಿಕರಿಗೆ ರಕ್ತದೊತ್ತಡ, ಮಧುಮೇಹ, ಮಲಬದ್ಧತೆ, ಕೀಲು ನೋವಿನಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತೇವೆ. ಹಿರಿಯರಿಗೆ ಭಾರೀ ಪ್ರಮಾಣದ ಕಾಯಿಲೆಗಳು ಕಂಡು ಬಂದರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುವುದು ಎಂದರು.
ಕಲಿಕೆ ಸಂಸ್ಥೆ ಹಿರಿಯ ಕಾರ್ಯಕ್ರಮ ಸಂಯೋಜಕ ಮರೆಪ್ಪ ನಂದಿಹಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವ ವಾತಾವರಣ ಕಡಿಮೆಯಾಗಿದೆ. ಹಿರಿಯರ ಬಗ್ಗೆ ಕಾಳಜಿವಹಿಸುವಂತೆ ಸಲಹೆ ನೀಡಿದರು.
ಈ ವೇಳೆ ಜ್ಯೋತಿ, ಅರುಣಾ, ಮಹಾನಂದಾ, ಶಂಕರ್, ಆಶಾ ಕಾರ್ಯಕರ್ತೆ ಶರಣಮ್ಮ, ಎಲ್ಡರ್ ಲೈನ್ ಸಂಯೋಜಕ ಸಾಹೇಬಗೌಡ, ಅಬ್ಬೆತುಮಕೂರ ಕಲಿಕೆ ಸಂಸ್ಥೆ ಸಂಯೋಜಕ ಸುನೀಲ್.ಜಿ.ಎಸ್., ಸಾಹೇಬ ಗೌಡ ಅಬ್ಬೆತುಮಕೂರ ಸೇರಿದಂತೆ ಇತರರಿದ್ದರು.